ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಕೊಠಡಿ ಒಳಗೆ ಮಹಿಳೆಯರು ನಮಾಜ್ ಮಾಡುತ್ತಿರುವ ದೃಶ್ಯವನ್ನು ಕೋರ್ಟ್ ಆವರಣದಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ದೂರು ದಾಖಲಿಸಿದ್ದಾರೆ.
ಹೈಕೋರ್ಟ್ ನ ಉಸ್ತುವಾರಿ ರಿಜಿಸ್ಟ್ರಾರ್ ಎನ್.ಜಿ ದಿನೇಶ್ ನೀಡಿರುವ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಮಾಧ್ಯಮ ಸಂಸ್ಥೆ ‘ಸಂವಾದ’ದ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ದೂರಿನ ವಿವರ
‘ಕರ್ನಾಟಕ ಹೈಕೋರ್ಟ್‌ನಲ್ಲಿ ನಮಾಜ್’ ಹೆಸರಿನಲ್ಲಿ ಸಂವಾದ ಫೇಸ್ ಬುಕ್ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ 1.48 ನಿಮಿಷಗಳ ದೃಶ್ಯವನ್ನು ಮೇ 14 ರಂದು ಅಪ್‌ಲೋಡ್ ಮಾಡಲಾಗಿದೆ.
ಅನುಮತಿ ಇಲ್ಲದೆ ಹೈಕೋರ್ಟ್ ಆವರಣದೊಳಗೆ ಪ್ರವೇಶಿಸುವುದು ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗಿದ್ದೂ, ಹೈಕೋರ್ಟ್ ಒಳಗೆ ಬಂದು ನಿಯಮ ಉಲ್ಲಂಘಿಸಿ ಚಿತ್ರೀಕರಿಸಲಾಗಿದೆ.
ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ವೀಡಿಯೊ ತುಣುಕು ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತದೆ.
ಆದ್ದರಿಂದ, ವಿಡಿಯೋ ಚಿತ್ರೀಕರಿಸಿ ಅಪ್‌ಲೋಡ್ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರುತ್ತೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.