ಮೈಸೂರು: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಪತ್ತೆಗಾಗಿ ರಚನೆ ಮಾಡಿರುವ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಎಂಜಿನಿಯರ್ ವಿದ್ಯಾರ್ಥಿಗಳೇ ರೇಪ್ ಮಾಡಿದ್ದಾರೆಂಬ ಸುಳಿವು ಸಿಕ್ಕಿದೆ.
ಸದ್ಯ ವಿದ್ಯಾರ್ಥಿಗಳು ಅಬ್‌ಸ್ಕಾಂಡಿಂಗ್ ಆಗಿದ್ದು, ಬೆಂಗಳೂರು, ಮೈಸೂರಿನ ಪೊಲೀಸರ ಜಂಟಿ ತಂಡಕ್ಕೆ ಸುಳಿವು ಲಭಿಸಿದೆ. ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಅನುಮಾನ ಮೂಡಿದ್ದು, ಅತ್ಯಾಚಾರದ ಬಳಿಕ ಅವರು ಪರಾರಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಕೇರಳಕ್ಕೆ ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದ್ದು, ತಮಿಳುನಾಡು ಮೂಲದ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಕೇರಳ ಮೂಲದ ಮೂವರು ವಿದ್ಯಾರ್ಥಿಗಳ ಮೇಲೆ ಅನುಮಾನ ಮೂಡಿದೆ.
ಆಗಸ್ಟ್ 24ರಂದು ರಾತ್ರಿ 7 ಗಂಟೆ ಸುಮಾರಿಗೆ ಗ್ಯಾಂಗ್‌ರೇಪ್ ಪ್ರಕರಣ ನಡೆದಿದ್ದು, ಅಂದು ಆರೋಪಿಗಳು ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.
ಮಂಗಳವಾರ ಗ್ಯಾಂಗ್ ರೇಪ್ ನಡೆಸಿದ್ದ ಆರೋಪಿ ವಿದ್ಯಾರ್ಥಿಗಳು ಬುಧವಾರ ಪರೀಕ್ಷೆಗೆ ಗೈರಾಗಿದ್ದಾರೆ. ಇಂಜಿನಿಯರಿಂಗ್ ವ್ಯಾಸಂಗಕ್ಕೆಂದು ಮೈಸೂರಿಗೆ ಬಂದು ರಾಕ್ಷಸಿ ಕೃತ್ಯ ನಡೆಸಿದ ಕಾಮುಕರಿಗಾಗಿ ಶೋಧ ನಡೆದಿದೆ.