ಮೈಸೂರು: ಗುರುಕುಲದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಮ್ಯಾನೇಜರ್ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ಗುರುಕುಲ ಹಾಸ್ಟೆಲ್‌ನ ಮ್ಯಾನೇಜರ್ ಗಿರೀಶ್ (40 ) ಬಂಧಿತ ಆರೋಪಿಯಾಗಿದ್ದಾನೆ.
ದೌರ್ಜನ್ಯದ ಬಗ್ಗೆ ಯಾರಾದರೂ ದನಿಯೆತ್ತಿದರೆ ಮನೆಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಗಿರೀಶ ಕಲಿಕೆಯ ಆಸಕ್ತಿಯನ್ನೇ ಬಂಡವಾಳವಾಗಿಸಿಕೊಂಡು ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜವ್ಯವೆಸಗುತ್ತಿದ್ದ ಎಂದು ಸಂತ್ರಸ್ಥೆಯರು ಆರೋಪಿಸಿದ್ದಾರೆ.
ಬೆಂಗಳೂರಿನ ಸ್ವಾಮೀಜಿಯೊಬ್ಬರ ಆಶ್ರಯದಲ್ಲಿ ನಡೆಯುತ್ತಿರುವ ಈ ಗುರುಕುಲದಲ್ಲಿ ಮ್ಯಾನೇಜರ್ ಆಗಿದ್ದ ಗಿರೀಶ್ (40), ಕಳೆದ 15 ವರ್ಷಗಳಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಬಡ ಹೆಣ್ಣು ಮಕ್ಕಳ ಕಲಿಕೆಯ ಆಸಕ್ತಿಯನ್ನೇ ಬಂಡವಾಳವಾಗಿಸಿಕೊಂಡು ದೈಹಿಕ ಮತ್ತು ಮಾನಸಿಕ ಹಿಂಸೆಯೊಂದಿಗೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಆರೋಪಿ, ಈಗ ಹೆಣ್ಣು ಮಕ್ಕಳ ದೂರಿನ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದಾನೆ. ಈತನ ವಿರುದ್ಧ ಪೋಕ್ಸೋ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಎರಡು ವರ್ಷದ ಹಿಂದೆಯೇ ಈತನ ನಡೆಯ ಬಗ್ಗೆ ಸ್ವಯಂ ಸೇವಾ ಸಂಸ್ಥೆಗೆ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಹಿಡಿಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಯಾವುದೇ ಸಾಕ್ಷ್ಯಾಧಾರ ಸಿಗದೆ ಕಾರ್ಯಾಚರಣೆ ವಿಫಲಗೊಂಡಿತ್ತು.
ಮೂರನೇ ತರಗತಿಯಿಂದ ಪಿಯುಸಿವರೆಗೆ ವ್ಯಾಸಂಗ ಮಾಡುವ 18 ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿದ್ದು, ಮೈಸೂರಿನ ನಾನಾ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಹಾಸ್ಟೆಲ್‌ನಲ್ಲಿ ಹೆಣ್ಣು ಮಕ್ಕಳನ್ನು ನಿತ್ಯ ಹೆದರಿಸಿ, ಬೆದರಿಸಿಕೊಂಡು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಗಿರೀಶ್, ಮಕ್ಕಳು ಬೇರೆಯವರೊಂದಿಗೆ ಮಾತನಾಡದಂತೆ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದ.
ಹಾಸ್ಟೆಲ್‌ನ ಕೆಲಸಗಳನ್ನು ಹೆಣ್ಣು ಮಕ್ಕಳಿಂದಲೇ ಮಾಡಿಸುವುದರೊಂದಿಗೆ ತನ್ನ ಕೋಣೆಯ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ದಬ್ಬಾಳಿಕೆ ಮಾಡುತ್ತಿದ್ದ. ರಾತ್ರಿ ವೇಳೆ ಹೆಣ್ಣು ಮಕ್ಕಳ ಕೋಣೆಯೊಳಗೆ ಏಕಾಏಕಿ ಪ್ರವೇಶಿಸಿ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎಂಬ ಆರೋಪವಿದೆ.
ಹಾಸ್ಟೆಲ್‌ನಲ್ಲಿ ಎಲ್ಲಾ ಮಕ್ಕಳ ಮೇಲೆ ಮ್ಯಾನೇಜರ್ ಗಿರೀಶ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಬಾಲಕಿಯೊಬ್ಬಳು, ಹೇಗಾದರೂ ಮಾಡಿ ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಬೇಕು ಎಂದು ನಿರ್ಧರಿಸಿದ್ದಳು. ಗಿರೀಶ್ ತನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದನ್ನು ರೆಕಾರ್ಡಿಂಗ್ ಮಾಡಿಕೊಂಡು ಸಾಕ್ಷ್ಯ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಈ ಹಾಸ್ಟೆಲ್‌ನಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲದಿರುವುದು ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಯಾವುದೇ ಕ್ರಮ ವಹಿಸದೇ ಇರುವುದು ಅವರ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪಕ್ಕೆ ಹಿಡಿದ ಕನ್ನಡಿಯಾಗಿದೆ.