ಮಲ್ಲಪ್ಪುರಂ: 500 ವರ್ಷಗಳಷ್ಟು ಹಿಂದಿನ ದೇವಾಲಯಕ್ಕೆ ರಸ್ತೆ ನಿರ್ಮಾಣ ಮಾಡಲು ಇಬ್ಬರು ಮುಸ್ಲಿಮರು ಭೂಮಿ ದಾನ ನೀಡುವ ಮೂಲಕ ಧಾರ್ಮಿಕ ಸಾಮರಸ್ಯ ಮರೆದ ಘಟನೆ ಕೇರಳದ ಮಲ್ಲಪ್ಪುರಂನಲ್ಲಿ ನಡೆದಿದೆ.
ಧರ್ಮ-ಧರ್ಮಗಳ ನಡುವೆ ಕೋಮುವಾದ ಸೃಷ್ಠಿಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೂಡಿಲಂಗಡಿ ಕಡುಂಗೂತ್ ಮಹಾದೇವ ದೇವಸ್ಥಾನಕ್ಕೆ 10 ಅಡಿ ಅಗಲದ 60 ಮೀಟರ್ ರಸ್ತೆಯನ್ನು ನಿರ್ಮಿಸಲು ಅಲ್ಲಿಯ ಸ್ಥಳೀಯ ನಿವಾಸಿಗಳಾದ ಸಿ ಎಚ್ ಅಬೂಬಕರ್ ಹಾಜಿ ಮತ್ತು ಎಂ ಉಸ್ಮಾನ್ ಅವರು ನಾಲ್ಕು ಸೆಂಟ್ಸ್ ಜಾಗವನ್ನು ಪಂಚಾಯಿತಿಗೆ ಹಸ್ತಾಂತರಿಸಿದ್ದಾರೆ.
ಈ ಹಿನ್ನೆಲೆ ಮಾತನಾಡಿದ ಮಾಜಿ ಪಂಚಾಯತ್ ಸದಸ್ಯ ರಹೂಫ್ ಕೂಟ್ಟಿಲಂಗಡಿ “ಇತ್ತೀಚೆಗೆ ರಸ್ತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕೆಲವರು ಸಮಾಜದಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.
ದೇವಸ್ಥಾನಕ್ಕೆ ಹೋಗುವ ರಸ್ತೆ ಅನೇಕ ಸಮಯದಿಂದ ಸರಿಯಿರಲಿಲ್ಲ, ಈ ಸಂಬಂಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಪ್ರಚಾರವನ್ನೂ ನಡೆಸಿದ್ದರು.
ಈ ಹಿನ್ನೆಲೆ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಮಂಕಡ ಶಾಸಕ ಮಂಜಳಂಕುಳಿ ಅಲಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಮಲಬಾರ್ ದೇವಸ್ವಂ ಮಂಡಳಿ ಅಧಿಕಾರಿಗಳು ಹಾಗೂ ನಿವಾಸಿಗಳ ಸಭೆ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ, ಭೂಮಾಲೀಕ ಅಬೂಬಕರ್ ಮತ್ತು ಉಸ್ಮಾನ್ ಅವರು ತಮ್ಮ ಜಮೀನಿನ ಕೆಲವು ಭಾಗವನ್ನು ರಸ್ತೆಗಾಗಿ ಹಸ್ತಾಂತರಿಸಲು ಒಪ್ಪಿಕೊಂಡರು” ಎಂದು ರಹೂಫ್ ಹೇಳಿದರು.
ಪಂಚಾಯಿತಿ ಹಾಗೂ ಶಾಸಕರ ನಿಧಿ ಬಳಸಿ ಶೀಘ್ರವೇ ರಸ್ತೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯದ ಜೀರ್ಣೋದ್ಧಾರದ ಬಗ್ಗೆ ಮಾತನಾಡಿರುವ ದೇವಸ್ವಂ ಇನ್ಸ್‌ಪೆಕ್ಟರ್ ದಿನೇಶ್ ಸಿ ಸಿ “ದೇವಾಲಯದ ಜೀರ್ಣೋದ್ಧಾರಕ್ಕೆ 1 ಕೋಟಿ ರೂ. ವೆಚ್ಚ ಭರಿಸಲಾಗಿದೆ.
ಈ ಪ್ರದೇಶದಲ್ಲಿ ದೇವಾಲಯವು ಇನ್ನೂ ಕೆಲವು ಭೂಮಿಯನ್ನು ಹೊಂದಿದೆ. ಜಮೀನಿಗೆ ಸಂಬಂಧಿಸಿದ ವಿಷಯವನ್ನು ಮಲಪ್ಪುರಂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು ತಿಳಿಸಿದ್ದಾರೆ.