ಜೈಪುರ: ದಿಲ್ಲಿ- ಮುಂಬಯಿ ಎಕ್ಸ್‌ಪ್ರೆಸ್ ವೇನ ಸೊಹ್ನಾ- ದೌಸಾ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೌಸಾದಲ್ಲಿ ಇಂದು ಉದ್ಘಾಟಿಸಿದರು.
246 ಕಿಮೀ ಉದ್ದದ ಮಾರ್ಗ ಇದಾಗಿದ್ದು, ದಿಲ್ಲಿಯಿಂದ ರಾಜಸ್ಥಾನ ರಾಜಧಾನಿ ಜೈಪುರಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ದಿಲ್ಲಿ- ಜೈಪುರ ನಡುವಿನ ಪ್ರಯಾಣವು ಒಂದು ಗಂಟೆಗೂ ಹೆಚ್ಚು ತಗ್ಗಲಿದೆ. ಐದು ಗಂಟೆಯ ಪ್ರಯಾಣ ಇನ್ನು ಮುಂದೆ ಸುಮಾರು ಮೂರೂವರೆ ಗಂಟೆಗೆ ಇಳಿಕೆಯಾಗಲಿದೆ.
ದಿಲ್ಲಿ- ಮುಂಬಯಿ ಎಕ್ಸ್‌ಪ್ರೆಸ್‌ವೇ ಭಾರತದ ಅತ್ಯಂತ ಉದ್ದನೆಯ ಹೆದ್ದಾರಿಯಾಗಲಿದ್ದು, ಎಂಟು ಲೇನ್‌ನ ರಸ್ತೆಯು ಒಟ್ಟು 1,386 ಕಿಮೀ ಉದ್ದ ಹೊಂದಿದೆ. ದಿಲ್ಲಿ ಮತ್ತು ಮುಂಬಯಿ ನಡುವಿನ ಅಂತರವನ್ನು ಶೇ 12ರಷ್ಟು ಇದು ತಗ್ಗಿಸಲಿದೆ.
ಅಂದರೆ 1,424 ಕಿಮೀ ಉದ್ದವು 1,242 ಕಿ.ಮೀಗೆ ಇಳಿಯಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.