ಮುಲ್ಕಿ: ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಲಿಗೆ ಮತ್ತು ಮನೆ ಕಳವು ಮಾಡಿದ ಆರೋಪಿ ಹಾಗೂ ಕಳವಿನ ಮಾಲನ್ನು ಮಾರಾಟದ ಬಗ್ಗೆ ಇರಿಸಿಕೊಂಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮುಲ್ಕಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಬಡಗುಹಿತ್ಲು ಎಂಬಲ್ಲಿ ಕಳೆದ ಜನವರಿ 17ರಂದು ಭವಾನಿ ಎಂಬವರ ಮನೆಯಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿರುವಾಗ ಬೆಳಗ್ಗಿನ ಜಾವ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ರೋಪ್ ಚೈನನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದು,
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಮುಲ್ಕಿ ಪೊಲೀಸ್ ಠಾಣೆಯ ವ್ಯಾಪ್ತಿಯ ತೋಕೂರು ಗ್ರಾಮದ ರಾಮಚಂದ್ರಪಿ, ಶೆಟ್ಟಿ ಎಂಬವರ ಮನೆಯ ಬೀಗವನ್ನು ಮುರಿದು ಕಳ್ಳರು ಮುರಿದು ಒಳ ಪ್ರವೇಶಿಸಿ ನಗ-ನಗದು ಕಳ್ಳತನದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮುಲ್ಕಿ ಪೊಲೀಸರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡೂರು ಗ್ರಾಮದ ಶೈಲೇಶ್ ಶೆಟ್ಟಿ (38) ಹಾಗೂ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಕೋಟೆಕಾರು ಬೀರಿ ನಿವಾಸಿ ಜನಾರ್ದನ ಆಚಾರ್ಯ(43) ಎಂಬವರಿಂದ ಕಳ್ಳತನ ಮಾಡಿದ ಸೊತ್ತುಗಳನ್ನು ವಶಪಡಿಸಿ ಬಂಧಿಸಿದ್ದಾರೆ.
ಆರೋಪಿ ಶೈಲೇಶ್ ಶೆಟ್ಟಿ ಮಹಿಳೆಯ ಚಿನ್ನದ ಸರವನ್ನು ಎಗರಿಸಿ ಕೋಟೆಕಾರು ಎಂಬಲ್ಲಿಯ ಜನಾರ್ದನ ಆಚಾರ್ಯ ಎಂಬಾತನನ್ನು ಸಂಪರ್ಕಿಸಿ ಕಳವು ಮಾಲನ್ನು ಸ್ವೀಕರಿಸುವ ಬಗ್ಗೆ ಮಾತುಕತೆ ಮಾಡಿ ತೋಕೂರು ಎಂಬಲ್ಲಿ ಕಳವು ಮಾಡಿದ ಮಾಲನ್ನು ಮಾರಾಟ ಮಾಡಿ ನೀಡುವ ಬಗ್ಗೆ ಜನಾರ್ದನ ಆಚಾರ್ಯ ನಲ್ಲಿ ನೀಡಿದ್ದಾಗಿ ತಿಳಿಸಿದ್ದು,
ಶೈಲೇಶ್ ಶೆಟ್ಟಿ ನೀಡಿದ ಮಾಹಿತಿಯಂತೆ ಮುಲ್ಕಿ ಪೊಲೀಸರು ಜನಾರ್ದನ ಆಚಾರ್ಯನನ್ನು ದಸ್ತಗಿರಿ ಮಾಡಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರಿಂದ ಒಟ್ಟು 4,10,621 ರೂಪಾಯಿ ಮೌಲ್ಯದ ಒಟ್ಟು 76.330 ಗ್ರಾಮ್ ತೂಕದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.