ಕೊಯಮತ್ತೂರು: ಜಿಲ್ಲೆಯಲ್ಲಿ ತಾಯಿ-ಮಗಳು ಸಾವಿನ ಸುದ್ದಿ ಸಂಚಲನ ಮೂಡಿಸುತ್ತಿದೆ. ಜ್ಯೋತಿಷಿಯೊಬ್ಬರ ಮಾತು ಕೇಳಿ ತಾಯಿಯೊಬ್ಬಳು ತನ್ನ ಮಗಳನ್ನು ಕೊಲೆ ಮಾಡಿದಲ್ಲದೇ ತಾನೂ ಸಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಡಿಯಲೂರ್ ಪಕ್ಕದಲ್ಲಿರುವ ಅಪ್ಪನಾಯಕನಪಾಳ್ಯಂ ನಡೆದಿದೆ.
ಘಟನೆಯ ವಿವರ:
ಅಪ್ಪನಾಯಕನಪಾಳ್ಯಂ ನಿವಾಸಿ ಧನಲಕ್ಷ್ಮಿ (58) ತನ್ನ ಅಂಗವಿಕಲ ಮಗಳು ಸುಗನ್ಯಾ (30) ಜೊತೆ ವಾಸವಿದ್ದಾರೆ. ಇವರ ಪುತ್ರ ಶಶಿಕುಮಾರ್ಗೆ ಮದುವೆಯಾಗಿದ್ದು, ಸರವಣಂಪಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಧನಲಕ್ಷ್ಮಿ ಜ್ಯೋತಿಷಿ ಮಾತುಗಳನ್ನು ಹೆಚ್ಚಾಗಿ ನಂಬುತ್ತಿದ್ದರು. ಇದರಿಂದ ಜ್ಯೋತಿಷಿ ಮಾತನ್ನು ನಂಬಿದ್ದ ಧನಲಕ್ಷ್ಮಿ ಜ.4ರಂದು ಮಗ ಶಶಿಕುಮಾರ್ಗೆ ಕಾಲ್ ಮಾಡಿ “ಜ್ಯೋತಿಷಿ ಮೂಲಕ ನನ್ನ ಬಗ್ಗೆ ತಿಳಿದಿದ್ದೇನೆ. ಅವರು ನಾನು ಕೈ ಅಥವಾ ಕಾಲುಗಳಿಲ್ಲದೇ ಬದಲಾಗುತ್ತೇನೆ ಎಂದು ಹೇಳಿದ್ದಾರೆ.
ಸಹೋದರಿ ಸುಗನ್ಯಾ ಜೊತೆ ನಾನು ಸಹ ಹಾಗೇ ಬದಲಾದ್ರೆ ನಿನಗೆ ಸಮಸ್ಯೆಗಳು ಎದುರಾಗುತ್ತವೆ. ಜ್ಯೋತಿಷಿ ಹೇಳಿದಂತೆ ಆದರೆ ನಮ್ಮನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ತಾಯಿ ಮಾತುಗಳನ್ನು ಕೇಳಿ ಗಾಬರಿಗೊಂಡ ಶಶಿಕುಮಾರ್ ತಾಯಿಗೆ ಧೈರ್ಯ ಹೇಳಿದ್ದು ಭರವಸೆ ಮೂಡಿಸುವ ಪ್ರಯತ್ನ ಮಾಡಿದ್ದು ಮರುದಿನ ಜ.5 ರಂದು ತಾಯಿ ಬಳಿ ಹೋಗಲು ಶಶಿಕುಮಾರ್ ನಿರ್ಧರಿಸಿದ್ದಾನೆ.
ಬಳಿಕ ತನ್ನ ತಾಯಿಗೆ ಕರೆ ಮಾಡಿದ್ದರೂ ಪ್ರತಿಕ್ರಿಯೆ ಬಾರದೆ ಇದ್ದಾಗ ಗಾಬರಿಗೊಂಡು ಶಶಿಕುಮಾರ್ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅವರು ಶಶಿ ಕುಮಾರ್ ಮನೆಗೆ ಹೋಗಿ ನೋಡಿದಾಗ ಧನಲಕ್ಷ್ಮಿ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ಸಹೋದರಿ ಬಾಯಿಯಲ್ಲಿ ನೊರೆ ಬಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡಿದ್ದಾರೆ. ಮನೆಯವರು ಶಶಿಕುಮಾರ್ಗೆ ವಿಷಯ ತಿಳಿಸಿದ್ದು ಬಳಿಕ ಅವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಧನಲಕ್ಷ್ಮಿ ಮೊದಲು ತನ್ನ ಮಗಳಿಗೆ ವಿಷವುಣಿಸಿದ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವುದು ಪ್ರಾಥಮಿಕ ತನಿಖೆ ಮೂಲಕ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.