ಶಹಾಪುರ ಪೊಲೀಸರ ಯಶಸ್ವಿ ಕಾರ್ಯಚರಣೆ: ಇಬ್ಬರು ಖದೀಮರು ಅರೆಸ್ಟ್
ಸುರಪುರ: ಕಳೆದ ಮೂರು ತಿಂಗಳುಗಳ ಹಿಂದೆ ಸುರಪುರ, ಶಹಾಪುರ, ಹುಣಸಗಿ ಪಟ್ಟಣಗಳಲ್ಲಿ ಕಳ್ಳತನ ಮಾಡಿಕೊಂಡು ತಲೆಯರೆಸಿಕೊಂಡಿದ್ದ ಚಾಲಾಕಿ ಕಳ್ಳರನ್ನು ಬಂಧಿಸುವಲ್ಲಿ ಸುರಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ ಭಗವಾನ್ ಸೋನಾವಣೆ ಹಾಗೂ ಡಿಎಸ್‌ಪಿ ವೆಂಕಟೇಶ್ ಉಗಿಬಂಡಿ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ಐ ಹನುಮರಡ್ಡೆಪ್ಪನವರ ನೇತೃತ್ವದಲ್ಲಿ, ಕ್ರೈಂ ಪಿಎಸ್ಐ ಪರಶುರಾಮ ಮತ್ತು ಆಡಳಿತ ವಿಭಾಗದ ಚಂದ್ರಕಾಂತ ಮ್ಯಾಕಲ್, ಪಿಸಿಗಳಾದ ನಾರಾಯಣ, ಬಾಬು ನಾಯ್ಕಲ್, ಸತೀಶ್ ಕುಮಾರ್ ನರಸನಾಯಕ, ಶರಣಪ್ಪ, ಭಾಗಪ್ಪ, ಗೋಕುಲ್ ಹುಸೇನಿ ಹುಸನಪ್ಪ ಕಾರ್ಯಚರಣೆ ನಡೆಸಿದ್ದಾರೆ.
ಗಸ್ತಿನಲ್ಲಿದ್ದಾಗ ಹಳೇ ತಹಶೀಲ್ ಕಛೇರಿ ಹತ್ತಿರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ಯುವಕರನ್ನು ಕರೆ ತಂದು ವಿಚಾರಣೆ ನಡೆಸಿದಾಗ ಹಲವು ಪಟ್ಟಣಗಳಲ್ಲಿ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಗಂಗಪ್ಪ ಯಾನೆ ದುರ್ಗಪ್ಪ ಗೋರೆಬಾಳ (19) ಖಾಸಿಂ ಯಾನೆ ಸಂಜೀವಪ್ಪ(19) ಹುಣಸಗಿ ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಜನವರಿಯಲ್ಲಿ ಪಲ್ಸರ್ ಬೈಕ್ ಮತ್ತು ಸೂಪರ್ ಸ್ಪ್ಲೆಂಡರ್ ಕಳವುಗೈದಿದ್ದಾರೆ.
ಇನ್ನು ಹುಣಸಗಿ ತಾಲೂಕಿನ ಕಲ್ಲದೇವನ ಹಳ್ಳಿಯಲ್ಲಿ ಪಲ್ಸರ್ ಬೈಕ್ ಹಾಗೂ ವಜ್ಜಲ್ ಗ್ರಾಮದಲ್ಲಿ ಹೀರೋ ಹೋಂಡಾ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಅವರಿಂದ ನಾಲ್ಕು ಬೈಕ್ ಗಳು ಮತ್ತು 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 2 ಲಕ್ಷ 37 ಸಾವಿರ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿತರಿಬ್ಬರ ಮೇಲೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.