80ಕೋಟಿಗೂ ಅಧಿಕ ನೀರಿನ ಬಿಲ್ ಬಾಕಿ: ಮೌನವಹಿಸಿದೆ ಜಿಲ್ಲಾಡಳಿತ..!
ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಜನಸಾಮಾನ್ಯರು ನೀರಿನ ಬಿಲ್ ಕಟ್ಟದಿದ್ದರೆ ಅಧಿಕಾರಿಗಳು ಆವಾಜ್ ಹಾಕಿ ವಸೂಲಿ ಮಾಡ್ತಾರೆ.ಆದರೆ ಸರ್ಕಾರಿ ಸಂಸ್ಥೆಗಳು, ಪ್ರತಿಷ್ಠಿತ ವ್ಯಕ್ತಿಗಳು ಹಲವಾರು ವರ್ಷಗಳಿಂದ 80 ಕೋಟಿಗೂ ಅಧಿಕ ನೀರಿನ ಬಿಲ್ ಬಾಕಿ ಇರಿಸಿದರೂ ಆಡಳಿತ ಮಾತ್ರ ಮೌನವಾಗಿದೆ.
ಪ್ರತಿಷ್ಠಿತ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಡವರು, ಜನಸಾಮಾನ್ಯರಿಗೆ ಒಂದು ನ್ಯಾಯ. ಶ್ರೀಮಂತ, ಪ್ರತಿಷ್ಠಿತ ವ್ಯಕ್ತಿ ಸಂಸ್ಥೆಗಳಿಗೆ ಇನ್ನೊಂದು ನ್ಯಾಯ ಎಂಬಂತಾಗಿದೆ.
ಅಧಿಕಾರಿಗಳ ಮಲತಾಯಿ ಧೋರಣೆಯಿಂದಲೇ ಹಲವು ವರ್ಷದಿಂದ ಮಹಾನಗರಪಾಲಿಕೆಯ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹಣ ಬರಲು ಬಾಕಿ ಇದೆ.
ಅಸಲಿಗೆ ಹೀಗೆ ಬಾಕಿ ಇರುವ ಹಣ ಪಾಲಿಕೆಗೆ ಸಂದಾಯವಾಗಬೇಕಿರೋದು ನೀರಿನ ಬಿಲ್ಗಳಿಂದ ಅನ್ನೋದು ದುರಂತ. ಜನಸಾಮಾನ್ಯರಿಂದ ನೀರಿನ ಬಿಲ್ ಬಾಕಿಯನ್ನು ವಸೂಲು ಮಾಡುವ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ, ಪ್ರಭಾವಿಗಳು ಮತ್ತು ಶ್ರೀಮಂತರ ಬಿಲ್ ಬಾಕಿಯಿದ್ದರೂ ಮೌನಕ್ಕೆ ಶರಣಾಗಿದೆ. ನೀರಿನ ಬಿಲ್ ಬಾಕಿ ಇಟ್ಟವರ ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿಗಳು, ಖಾಸಗಿ ಆಸ್ಪತ್ರೆಗಳು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಕೆಲವು ಪ್ರತಿಷ್ಠಿತ ಕಾಲೇಜುಗಳು ಸೇರಿವೆ. ಹೀಗೆ ಪಟ್ಟಿ ಮಾಡಲಾದ ಸಂಸ್ಥೆಗಳಿಂದ ಮನಪಾ ಬೊಕ್ಕಸಕ್ಕೆ ಬರೋಬ್ಬರಿ 80 ಕೋಟಿ ರೂಪಾಯಿ ಸಂದಾಯವಾಗಲು ಬಾಕಿ ಇರುವುದು ತಿಳಿದು ಬಂದಿದೆ.
ಪ್ರತಿ ತಿಂಗಳು ನೀರಿನ ಬಿಲ್ ಪಾವತಿ ಮಾಡುವಂತೆ ಜನಸಾಮಾನ್ಯರಿಗೆ ಕರೆಗಳು ಬರುತ್ತವೆ, ಒತ್ತಡ ಹಾಕಲಾಗುತ್ತದೆ. ಬಿಲ್ ಕಟ್ಟದಿದ್ದರೆ ನೀರಿನ ಸಂಪರ್ಕ ಸ್ಥಗಿತಗೊಳಿಸುವ ಧಮ್ಕಿ ಹಾಕಲಾಗುತ್ತದೆ. ಆದರೆ ಸಮಾಜದಲ್ಲಿ ಗಣ್ಯರು ಎನಿಸಿಕೊಂಡಿರುವವರು ಪ್ರತಿಷ್ಠಿತ ಸಂಸ್ಥೆಗಳ ಬಿಲ್ ಬಾಕಿ ಇದ್ದರೂ ಪಾಲಿಕೆ ಅಧಿಕಾರಿಗಳ ವರಸೆ ನಡೆಯುವುದಿಲ್ಲ.
ಉಳ್ಳವರು ಲಕ್ಷಾಂತರ ರೂಪಾಯಿ ನೀರಿನ ಬಿಲ್ ಬಾಕಿ ಇರಿಸಿಕೊಂಡಿದ್ದರೂ ವಸೂಲಿ ಮಾಡುವ ಗೋಜಿಗೆ ಪಾಲಿಕೆ ಅಧಿಕಾರಿಗಳು ಹೋಗಿಲ್ಲ. ಪಾಲಿಕೆಯ ನೀರಿನ ಬಿಲ್ ಸಂಗ್ರಹಿಸುವಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತ ವಿಫಲವಾಗಿತ್ತು. ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ಕೂಡ ಇದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮೃದು ಧೋರಣೆ ತಳೆದಿದೆ.
ಸಧ್ಯ ಮಂಗಳೂರಿನಲ್ಲಿ 85,000 ಮನೆಗಳಿಗೆ, 5000 ಗೃಹೇತರ, 1370 ವಾಣಿಜ್ಯ, ಕಟ್ಟಡ 1200, ಕೈಗಾರಿಕೆ 800,ನೀರಿನ ಸಂಪರ್ಕಗಳಿವೆ. ಆದರೆ ಇದರಲ್ಲಿ ಜನಸಾಮಾನ್ಯರ ನೀರಿನ ಬಿಲ್ ಮಾತ್ರ ಕಾಲಕಾಲಕ್ಕೆ ಸಂದಾಯವಾಗುತ್ತಿದ್ದು, ಪ್ರಭಾವಿಗಳ ಮತ್ತು ಸರ್ಕಾರಿ ಸಂಸ್ಥೆಗಳು ಮಾತ್ರ ಹಲವಾರು ವರ್ಷಗಳಿಂದ ಬಿಲ್ ಬಾಕಿ ಇರಿಸಿದೆ. ಒಟ್ಟಿನಲ್ಲಿ ಸಾಮಾನ್ಯ ಜನರ ತಿಂಗಳ ಬಿಲ್ಲಿಗೆ ಬೆನ್ನು ಬೀಳುವ ಪಾಲಿಕೆ ಆಡಳಿತ ಶ್ರೀಮಂತರ ವಿಚಾರದಲ್ಲಿ ರಾಜಿ ಮಾಡಿಕೊಂಡಿರುವುದು ಅಕ್ಷಮ್ಯ.