ಮೂಡುಬಿದಿರೆ: ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರೊಂದು ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃ*ತಪಟ್ಟ ಘಟನೆ ನಡೆದಿದೆ.
ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಅಚ್ಚರಕಟ್ಟೆ ನಿವಾಸಿ ರವಿ ಅವರ ಪುತ್ರ, ಮೂಡುಬಿದಿರೆ ಜೈನ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಮೃ*ತಪಟ್ಟ ವಿದ್ಯಾರ್ಥಿ.
ಆದಿತ್ಯ ಪರೀಕ್ಷೆ ಮುಗಿಸಿ ತನ್ನ ಗೆಳೆಯರೊಡನೆ ಮನೆಗೆ ಹೊರಟಿದ್ದು ಬನ್ನಡ್ಕದಲ್ಲಿ ಬಸ್ಸಿನಿಂದಿಳಿದು ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಆದಿತ್ಯ ಹೆದ್ದಾರಿಯಿಂದ ಚರಂಡಿಗೆ ಎಸೆಯಲ್ಪಟ್ಟಿದ್ದು ಈ ಸಂದರ್ಭ ಕಾರಿನವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಧಿಕ ರಕ್ತಸ್ರಾವವಾಗಿ ವಿದ್ಯಾರ್ಥಿ ಮೃ*ತಪಟ್ಟಿದ್ದಾನೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು : ಕರಾವಳಿ ಉತ್ಸವದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಚಾಲನೆ ನೀಡಿದ್ದಾರೆ. ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನೆಮಾಸ್‌ನಲ್ಲಿ ಇಂದು(ಜ.2) ಮತ್ತು ನಾಳೆ ಫಿಲ್ಮ್ ಫೆಸ್ಟಿವಲ್ ಅಯೋಜಿಸಲಾಗಿದೆ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಮೇಯರ್ ಮನೋಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಗುರುಕಿರಣ್ ದೀಪ ಬೆಳಗಿಸಿ ಈ ಫಿಲ್ಮ್ ಫೆಸ್ಟಿವಲ್ ಉದ್ಘಾಟಿಸಿದ್ದಾರೆ.
ಭಾರತ್ ಮಾಲ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಜನಮೆಚ್ಚುಗೆ ಪಡೆದ 9 ಸಿನೆಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯಾಗಿ ಉಚಿತ ಸಿನೆಮಾ ವೀಕ್ಷಿಸುವ ಅವಕಾಶ ಸಿಗಲಿದೆ.
ಇಂದು ನಾಲ್ಕು ಕನ್ನಡ ಸಿನೆಮಾ ಹಾಗೂ ನಾಳೆ ನಾಲ್ಕು ಕನ್ನಡ ಮತ್ತು ಒಂದು ಕೊಂಕಣಿ ಸಿನೆಮಾ ಪ್ರದರ್ಶನವಾಗಲಿದೆ. ಫಿಲ್ಮ್ ಫೆಸ್ಟಿವಲ್ ಉದ್ಘಾಟನೆಯಾದ ಬಳಿಕ ಅರಿಷಡ್ವರ್ಗ ಕನ್ನಡ ಸಿನೆಮಾ ಪ್ರದರ್ಶನವಾಗಿದ್ದು, ಹಲವರು ಸಿನೆಮಾ ವೀಕ್ಷಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾರತ್ ಸಿನೆಮಾಸ್ ನ ಬಾಲಕೃಷ್ಣ ಶೆಟ್ಟಿ, ಸುಬ್ರಾಯ ಪೈ ಮೊದಲಾದವರು ಉಪಸ್ಥಿತರಿದ್ದರು.
ಯಾವೆಲ್ಲ ಸಿನಿಮಾ?
ಜ.2ರಂದು 10ಕ್ಕೆ ಕನ್ನಡದ “ಅರಿಷಡ್ವರ್ಗ, 12.30ಕ್ಕೆ “19-20-21′ (ಕನ್ನಡ) ಪ್ರದರ್ಶನಗೊಂಡಿದ್ದು, ಸಂಜೆ 6.30ಕ್ಕೆ ಮಧ್ಯಂತರ(ಕನ್ನಡ), ರಾತ್ರಿ 8ಕ್ಕೆ “ಕಾಂತಾರ(ಕನ್ನಡ) ಪ್ರದರ್ಶನಗೊಳ್ಳುವವು.
ಜ.3ರಂದು ಬೆಳಗ್ಗೆ 10.15ಕ್ಕೆ ಸಾರಾಂಶ(ಕನ್ನಡ) , 12.45ಕ್ಕೆ ತರ್ಪಣ(ಕೊಂಕಣಿ), ಮಧ್ಯಾಹ್ನ 3.15ಕ್ಕೆ ಶುದ್ಧಿ(ಕನ್ನಡ), ಸಂಜೆ 5.45ಕ್ಕೆ ಕುಬಿ ಮತ್ತು ಇಯಾಲ(ಕನ್ನಡ), ರಾತ್ರಿ 8ಕ್ಕೆ “ಗರುಡ ಗಮನ ವೃಷಭ ವಾಹನ'(ಕನ್ನಡ) ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಹಲವು ಕಾರ್ಯಕ್ರಮ ಆಯೋಜನೆ :
ಜ. 4 ಮತ್ತು 5 ರಂದು ಕದ್ರಿ ಪಾರ್ಕಿನಲ್ಲಿ ಯುವ ಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6 ರಿಂದ 9 ರ ತನಕ ಸ್ಥಳೀಯ ಯುವ ಕಲಾವಿದರಿಂದ ಮ್ಯೂಸಿಕಲ್ ನೈಟ್ ಜರಗಲಿದೆ. ಅಲ್ಲದೆ, ಜ. 4 ರಂದು ಅಪರಾಹ್ನ 3 ರಿಂದ 6 ರ ತನಕ ಕಾರ್- ಬೈಕ್ ಎಕ್ಸ್‌ಪೊ ಏರ್ಪಡಿಸಲಾಗಿದೆ.
ಜ. 5 ರಂದು ಬೆಳಗ್ಗೆ 7 ರಿಂದ 8.30 ರ ತನಕ ವಾಯಲಿನ್ ವಾದಕರಿಂದ ‘ಉದಯ ರಾಗ’ ಕಾರ್ಯಕ್ರಮ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆ ತನಕ ಶ್ವಾನ ಪ್ರದರ್ಶನ ನಡೆಯಲಿದೆ. ಸುತ್ತ ಮುತ್ತಲ 2- 3 ಜಿಲ್ಲೆಗಳ ನಾಯಿಗಳ ಮಾಲಕರು ಶ್ವಾನಗಳನ್ನು ಪ್ರದರ್ಶಿಸಲಿದ್ದಾರೆ. ಪೊಲೀಸ್ ಶ್ವಾನ ದಳದ ಆಕರ್ಷಕ ಪ್ರದರ್ಶನ ಕೂಡ ಇರಲಿದೆ.
ಕಿನ್ನಿಗೋಳಿ: ಚಲಿಸುತ್ತಿದ್ದ ಅಟೋ ಒಂದಕ್ಕೆ ನಾಯಿ ಅಡ್ದ ಬಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಿನ್ನಿಗೋಳಿಯ ರಾಜರತ್ನಾಪುರದಲ್ಲಿ ನಡೆದಿದೆ.
ಗಾಯಗೊಂಡ ಆಟೋ ಚಾಲಕನನ್ನು ಕಟೀಲು ಮಲ್ಲಿಗೆಯಂಗಡಿ ಬಳಿಯ ನಿವಾಸಿ ಕಟೀಲು ಮೇಳದ ಕಲಾವಿದ ಆನಂದ್ ಎಂದು ಗುರುತಿಸಲಾಗಿದೆ. ಗಾಯಾಳು ಆನಂದ್ ಆಟೋದಲ್ಲಿ ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಹೋಗುತ್ತಿದ್ದು ರಾಜರತ್ನಾಪುರ ಬಳಿ ನಾಯಿ ಅಡ್ಡ ಬಂದಿದೆ.
ಈ ಸಂದರ್ಭ ಅ*ಪಘಾತ ತಪ್ಪಿಸಲು ಆಟೋ ಚಾಲಕ ಯತ್ನ ನಡೆಸಿದಾಗ ಆಟೋ ಪಲ್ಟಿಯಾಗಿದ್ದು ಸಮೀಪದ ಪೊದೆಯೊಳಗೆ ಆಟೋ ಬಿದ್ದಿದೆ. ಆಟೋ ಪಲ್ಟಿಯಾದ ರಭಸಕ್ಕೆ ,ಚಾಲಕನಿಗೆ ಗಂ*ಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ಆಟೋಗೆ ಸಂಪೂರ್ಣ ಹಾನಿಯಾಗಿದೆ.
ಮಂಗಳೂರು: ಕರಾವಳಿ ಉತ್ಸವಕ್ಕೆ ಇನ್ನಷ್ಟು ರಂಗು ತುಂಬಲು ಇದೇ ಮೊದಲ ಬಾರಿಗೆ ಚಲನ ಚಿತ್ರೋತ್ಸವ ಆಯೋಜಿಸಲಾಗಿದೆ.
ಇಂದು ಭಾರತ್ ಮಾಲ್‌ನ ಭಾರತ್ ಸಿನೆಮಾಸ್‌ನ ಮಲ್ಪಿಪ್ಲೆಕ್ಸ್ ಪರದೆಯಲ್ಲಿ ಸಿನೆಮಾಗಳನ್ನು ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇಂದು ಮತ್ತು ನಾಳೆ ಜನ ಮೆಚ್ಚುಗೆ ಪಡೆದ ಒಟ್ಟು ಒಂಬತ್ತು ಸಿನೆಮಾಗಳ ಪ್ರದರ್ಶನ ನಡೆಯಲಿದೆ.
ಮುಂಜಾನೆ ಹತ್ತರಿಂದ ಆರಂಭವಾಗುವ ಈ ಸಿನೆಮಾಗಳು ರಾತ್ರಿ 8 ಗಂಟೆಯ ಶೋ ತನಕ ವೀಕ್ಷಿಸಲು ಅವಕಾಶ ಇದೆ. ಚಿತ್ರ ವೀಕ್ಷಣೆಗೆ ಉಚಿತ ಪ್ರವೇಶವಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯಲ್ಲಿ ಪ್ರವೇಶ ನೀಡಲಾಗುತ್ತದೆ.
ಕನ್ನಡ, ತುಳು, ಕೊಂಕಣಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೆ ಇಂದು ಸಂಜೆ ಕರಾವಳಿ ಉತ್ಸವ ಮೈದಾನದಲ್ಲಿ ಬೆಂಗಳೂರಿನ ಮೆಲ್ಲೋಟ್ರಿ ಖ್ಯಾತಿಯ ರಂಜನ್ ಬ್ಯೂರಾ ಮತ್ತು ಬಳಗದವರಿಂದ ವಾದ್ಯ ಸಂಗೀತ ಕಾರ್ಯಕ್ರಮ ಕೂಡಾ ನಡೆಯಲಿದೆ.