ಬೇಲೂರು: ಬುಧವಾರ ರಾತ್ರಿ ಗೋಣಿಚೀಲದ ಮೂಟೆಯಲ್ಲಿ 38 ಮಂಗಗಳ ಮೃತದೇಹಗಳು ಕಂಡು ಬಂದ ಘಟನೆ ತಾಲ್ಲೂಕಿನ ಕುಶಾವರ ಗ್ರಾಮ ಪಂಚಾಯಿತಿಯ ಚೌಡನಹಳ್ಳಿಯಲ್ಲಿ ನಡೆಯಿತು.
ಸ್ಥಳೀಯರು ಮೂಟೆಯನ್ನು ಬಿಚ್ಚಿದ್ದಾಗ ಜೀವಂತವಿದ್ದ 15 ಮಂಗಗಳು ಕೂಡಲೇ ಓಡಿ ಹೋದವು. ತೀವ್ರವಾಗಿ ಗಾಯಗೊಂಡಿದ್ದ ಮಂಗವೊಂದಕ್ಕೆ ಚಿಕಿತ್ಸೆ ನೀಡಲಾಗಿದೆ. ಬುಧವಾರ ರಾತ್ರಿ 10.30ರ ವೇಳೆಯಲ್ಲಿ ಸ್ನೇಹಿತರೊಂದಿಗೆ ನಡೆದು ಹೋಗುವಾಗ ಗೋಣಿಚೀಲದ ಮೂಟೆಗಳನ್ನು ಗಮನಿಸಿ ಬಿಚ್ಚಿ ನೋಡಿದಾಗ ಮಂಗಗಳು ಕಂಡು ಬಂದವು.
ಜೀವಂತವಾಗಿದ್ದ ಮಂಗಗಳು ಜೀವಭಯದಿಂದ ಓಡಿ ಹೋದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು’ ಎಂದು ಗ್ರಾಮದ ಆದೇಶ ತಿಳಿಸಿದರು.
‘ವಿಷಪ್ರಾಷನ ಅಥವಾ ಬಲವಾದ ಆಯುಧದಿಂದ ಹಲ್ಲೆ ನಡೆಸಿ ಮಂಗಗಳನ್ನು ಕೊಂದಿರಬಹುದು. ಪ್ರಯೋಗಾಲಯದ ವರದಿ ಬಂದ ಮೇಲಷ್ಟೇ ನಿಖರ ಕಾರಣ ಗೊತ್ತಾಗುತ್ತದೆ’ ಎಂದು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್ ತಿಳಿಸಿದರು. ‘ಪ್ರಕರಣದ ತನಿಖೆ ಪ್ರಾರಂಭಿಸಿದ್ದು, ತಪ್ಪಿತಸ್ಥರನ್ನು ಹುಡುಕಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಪಿಐ ಶ್ರೀಕಾಂತ್ ಹೇಳಿದರು.