ಮಂಗಳೂರು: ಈ ಬಾರಿಯ ಬಿಜೆಪಿ ಸರಕಾರದಲ್ಲಿ ಮೊಗವೀರ ಸಮುದಾಯದ ಬದಲು ಬೇರೆ ಸಮುದಾಯದವರಿಗೆ ಮೀನುಗಾರಿಕಾ ಸಚಿವ ಸ್ಥಾನ ಸಿಕ್ಕಾಗ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೂ ಮೊಗವೀರ ಸಮುದಾಯದವರನ್ನು ಬಿಟ್ಟು ಬೇರೆ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಗ್ಗೆ ಸಮುದಾಯದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪನೆಯಾದಾಗಿಂದಲೂ ಮೀನುಗಾರಿಕಾ ವೃತ್ತಿಯ ಅನುಭವ ಹಾಗೂ ಸಾಧಕ ಬಾಧಕಗಳ ಬಗ್ಗೆ ಅರಿವಿರುವ ಸಮುದಾಯದ ಮುಖಂಡರನ್ನು ಅಧ್ಯಕ್ಷರನ್ನು ನೇಮಕ ಮಾಡುವುದು ವಾಡಿಕೆಯಾಗಿತ್ತು.
ಆದರೆ ಈ ಬಾರಿ ಮೊಗವೀರ ಸಮುದಾಯವನ್ನು ಬಿಟ್ಟು ಗೌಡ ಸಮುದಾಯದ ಸುಳ್ಯ ಮೂಲದ ಬಿಜೆಪಿ ಮುಖಂಡ ತೀರ್ಥರಾಮ ಗೌಡ ಎಂಬುವವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಮೀನುಗಾರರ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಹಾಲಿ ಒಳನಾಡು ಬಂದರು ಹಾಗೂ ಮೀನುಗಾರಿಕಾ ಸಚಿವ ಅವರನ್ನು ಮೀನುಗಾರ ಮುಖಂಡ ನವೀನ್ ಸುವರ್ಣ ತಣ್ಣಿರುಬಾವಿ ಸಂಪರ್ಕಿಸಿ ‘ನಮ್ಮ ಸಮುದಾಯದ ಮುಖಂಡನನ್ನು ಬಿಟ್ಟು ಬೇರೆ ಸಮುದಾಯದವರಿಗೆ ಕೊಟ್ಟಿರುವುದು ಸರಿಯಲ್ಲ.
ಜೊತೆಗೆ ಮೀನುಗಾರಿಕೆಯ ಬಗ್ಗೆ ಮಾಹಿತಿ ಇಲ್ಲದವರಿಗೆ ಜವಾಬ್ದಾರಿ ನೀಡುರುವುದು ತಪ್ಪು ಎಂದು ಹೇಳಿದಾಗ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ ದೂರವಾಣಿ ಕರೆಯ ಆಡಿಯೋ ವೈರಲ್ ಆಗಿದೆ.
ಮೀನುಗಾರ ಸಚಿವರೂ ಸಮುದಾಯದವರಲ್ಲ, ಇತ್ತ ನಿಗಮದ ಅಧ್ಯಕ್ಷರೂ ಸಮುದಾಯದವರಲ್ಲ
ಕರಾವಳಿಯಲ್ಲಿ ಬಿಜೆಪಿ ಗೆಲುವಿನ ಪಾತ್ರದಲ್ಲಿ ಮೊಗವೀರ ಸಮುದಾಯದ ಪಾತ್ರ ಮಹತ್ವದ್ದಿದೆ. ಹಲವು ವರ್ಷಗಳಿಂದ ಬಿಜೆಪಿ ಬೆನ್ನಿಗೆ ಮೊಗವೀರ ಸಮುದಾಯವು ನಿಂತಿದೆ.
ಪ್ರತೀ ಬಾರಿ ಯಾವುದೇ ಸರಕಾರ ಬಂದರೂ ಬಂದರು ಹಾಗೂ ಒಳನಾಡು ಮೀನುಗಾರಿಕಾ ಸ್ಥಾನ ಮೊಗವೀರ ಸಮುದಾಯಕ್ಕೆ ನೀಡುವುದು ಅಲಿಖಿತ ನಿಯಮ. ಆದರೆ ಬಿಜೆಪಿ ಸರಕಾರದಲ್ಲಿ ಮೊದಲಿಗೆ ಕೋಟಾ ಶ್ರೀನಿವಾಸ ಪೂಜಾರಿಗೆ ನೀಡಿದ್ದರು.
ಬದಲಾದ ಕಾಲಘಟ್ಟದಲ್ಲಿ ಸುಳ್ಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಬಿಜೆಪಿಯಲ್ಲಿ ಲಾಲಾಜಿ ಮೆಂಡನ್ ನಂತರ ಹಿರಿಯ ಮೊಗವೀರ ಸಮುದಾಯದ ಶಾಸಕರಿದ್ದರೂ ಬೇರೆ ಸಮುದಾಯಕ್ಕೆ ಸಚಿವ ಸ್ಥಾನ ಕೊಟ್ಟಿರುವುದು ಮುಖಂಡರಲ್ಲೇ ವಿರೋಧ ವ್ಯಕ್ತವಾಗಿತ್ತು. ಆದರೆ ಸಮಾಧಾನವೆಂಬಂತೆ ನಿಗಮ ಮಂಡಳಿ ಮೊಗವೀರ ಸಮುದಾಯಕ್ಕೆ ಸಿಕ್ಕಿತ್ತು.
ಕಳೆದ ಕೆಲವು ದಿನಗಳ ಹಿಂದೆ ಸಿಎಂ ಎಲ್ಲಾ ನಿಗಮದ ಅಧ್ಯಕ್ಷರನ್ನು ಅವರನ್ನು ಪದಚ್ಯುತಿಗೊಳಿಸಿ ಹೊಸಬ್ಬರನ್ನು ನೇಮಿಸಿತ್ತು. ಅದರಂತೆ ಇದೀಗ ಸಮುದಾಯದವರಲ್ಲದವರನ್ನು ನೇಮಿಸಿರುವುದು ಮೊಗವೀರರ ಕೆಂಗಣ್ಣಿಗೆ ಕಾರಣವಾಗಿದೆ.