ಸ್ನೇಹಿತೆಯೊಂದಿಗೆ ತೆರಳಿದ್ದ ವಿಟ್ಲದ ಯುವತಿ ಬೆಂಗಳೂರಿನಲ್ಲಿ ಮದುವೆಯಾಗಿ ಪತ್ತೆ..!
ಪುತ್ತೂರು : ತನ್ನ ಸ್ನೇಹಿತೆಯೊಂದಿಗೆ ತೆರಳಿ ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯಕರನ ಜತೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ.
ಬಂಟ್ವಾಳದ ಪೆರುವಾಯಿ ಗ್ರಾಮದ ಯುವತಿಯನ್ನು ಆಕೆಯ ಪ್ರಿಯಕರ, ಬೆಳ್ತಂಗಡಿ ನಿವಾಸಿ ಯುವಕನ ಜೊತೆ ಬೆಂಗಳೂರಿನಲ್ಲಿ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿದ್ದಾರೆ.
ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿ ಭಾಸ್ಕರರವರ ಪುತ್ರಿ ಜ್ಯೋತಿ ರವರು ಮೇ ೨೯ರಂದು ಆಕೆಯ ಸ್ನೇಹಿತೆಯ ಜೊತೆ ತೆರಳಿದ್ದರು. ಆದರೆ ಬಳಿಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ಪಾಲಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಯುವತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು. ಯುವತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರಂಭಿಕ ಹಂತದಲ್ಲಿ ಕೆಲವೊಂದು ಮಾಹಿತಿಯನ್ನು ಕಲೆಹಾಕಿಕೊಂಡಿದ್ದರು.
ಈ ಮಧ್ಯೆ ಆಕೆಯ ಮನೆಯವರು ಮತ್ತು ಸ್ನೇಹಿತೆಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಇನ್ನೊಂದು ಮಹತ್ವದ ಸುಳಿವು ಲಭಿಸಿತ್ತು. ಅದರ ಆಧಾರದಲ್ಲಿ ಆಕೆ ಪ್ರಿಯತಮನೊಂದಿಗೆ ಪರಾರಿಯಾಗಿರುವುದನ್ನು ಖಚಿತಪಡಿಸಿಕೊಂಡು ತನಿಖೆಯನ್ನು ಮುಂದುವರೆಸಿದಾಗ ಜೋಡಿ ಬೆಂಗಳೂರಿನಲ್ಲಿರುವುದನ್ನು ಖಚಿತಪಡಿಸಿಕೊಂಡು ಬೆಂಗಳೂರಿಗೆ ತೆರಳಿ ಅಲ್ಲಿದ್ದ ಜೋಡಿಯನ್ನು ಅಲ್ಲಿನ ಪೊಲೀಸರ ಸಹಕಾರದಲ್ಲಿ ಬೆಂಗಳೂರಿನ ಮಾರತ್ ಹಳ್ಳಿಯಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಿರಣ್ ಹಾಗೂ ಜ್ಯೋತಿರವರ ಮಧ್ಯೆ ಕಳೆದ ಹಲವು ಸಮಯಗಳ ಹಿಂದೆ ಪ್ರೇಮಾಂಕುರಗೊಂಡಿತ್ತು. ಈ ಮಧ್ಯೆ ಒಬ್ಬರನ್ನು ಒಬ್ಬರು ಬಿಟ್ಟಿರಲಾರದ ಹಂತ ತಲುಪಿದಾಗ ಜೋಡಿ ಪರಾರಿಯಾಗಿ ವಿವಾಹವಾಗಿದೆ.
ಪರಸ್ಪರ ಪ್ರೀತಿಸುತ್ತಿದ್ದ ನಾವು ಸ್ವಇಚ್ಚೆಯಿಂದ ಮನೆಬಿಟ್ಟು ಬಂದು ವಿವಾಹವಾಗಿರುವುದಾಗಿ ಅವರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.