ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬಳಿಕ ರಾತ್ರಿ ಅರಣ್ಯದಲ್ಲಿ ಪತ್ತೆ : ಚುರುಕುಗೊಂಡ ತನಿಖೆ..!
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬಳಿಕ ರಾತ್ರಿ ಅರಣ್ಯದಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಯಲ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಬುಧವಾರ ಸಂಜೆ ಶಾಲೆಯಿಂದ ಮಾಗೋಡ ಬಸ್ನಲ್ಲಿ ಮನೆಗೆ ಹೊರಟಿದ್ದು, ನಂದೊಳ್ಳಿಯಲ್ಲಿ ಇಳಿದಿದ್ದಳು.
ಆದರೆ, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಯಾರೋ ಅಪಹರಿಸಿರಬಹುದೆಂದು ಯಲ್ಲಾಪುರ ಠಾಣೆಯಲ್ಲಿ ಕುಟುಂಬವರು ದೂರು ಕೂಡ ನೀಡಿದ್ದರು. ಸಂಜೆಯಿಂದ ರಾತ್ರಿಯವರೆಗೆ ಗ್ರಾಮಸ್ಥರೆಲ್ಲ ಸೇರಿ ಹುಡುಕಿದರೂ ವಿದ್ಯಾರ್ಥಿನಿ ಪತ್ತೆಯಾಗಿರಲಿಲ್ಲ.
ಮಧ್ಯರಾತ್ರಿ ಮನೆಯ ಸಮೀಪದ ಕಾಡಿನಲ್ಲಿ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಯಾವುದೇ ಅಪಾಯವಾಗಿಲ್ಲ.
ಬೈಕ್ನಲ್ಲಿ ಬಂದ ಮೂವರು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಅಪಹರಿಸಿದ್ದರು ಎಂದು ಆಕೆ ಹೇಳಿದ್ದಾಳೆ.
ರಾತ್ರಿ ವೇಳೆ ಕೈಕಾಲು ಕಟ್ಟಿ ಮನೆಯ ಬಳಿಯ ಕಾಡಿನಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿಕೆ ನೀಡಿದ್ದು, ಬೈಕ್ನಲ್ಲಿ ಬಂದವರು ಯಾರು? ಎಂದು ಪತ್ತೆಯಾಗಬೇಕು.
ವಿದ್ಯಾರ್ಥಿನಿಯನ್ನು ಕಟ್ಟಿ ಹಾಕಿದ್ದ ಸ್ಥಳವನ್ನು ಡಿವೈಎಸ್ಪಿ ರವಿ ನಾಯ್ಕ, ಪಿಐ ಸುರೇಶ ಯಳ್ಳೂರ ಹಾಗೂ ಪಿಎಸ್ಐ ಮಂಜುನಾಥ ಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಜೆ ವೇಳೆ ಬೈಕ್ ಮೇಲೆ ಯುವತಿಯನ್ನು ಯಾರೋ ಮಾಗೋಡ ಕಡೆ ಕರೆದೊಯ್ಯುವುದನ್ನು ನೋಡಿರುವುದಾಗಿ ಕೆಲ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು.
ಇದೇ ವೇಳೆ ಪೊಲೀಸರು ವಿದ್ಯಾರ್ಥಿನಿಯ ಮನೆಗೂ ಭೇಟಿ ನೀಡಿ ಕುಟುಂಬದವರೊಂದಿಗೆ ಚರ್ಚಿಸಿದರು. ತನಿಖೆಯನ್ನು ಚುರುಕುಗೊಳಿಸಲಾಗಿದೆ.