ಉಡುಪಿ: ಯಾವ ಕಾಮಗಾರಿಯ ಅನುದಾನ ಬಿಡುಗಡೆಗೆ ಯಾರು ಹಣ ಕೇಳಿದ್ದಾರೆ ಎಂಬುವುದನ್ನು ದಿಂಗಾಲೇಶ್ವರ ಸ್ವಾಮಿಗಳು ಸ್ಪಷ್ಟಪಡಿಸಬೇಕು ಎಂದು ಹಿಂದುಳಿದ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೋಟ, ಸಮಾಜಕ್ಕೆ ಸಾಧು ಸಂತರು ಹೇಳಿಕೆ ನೀಡುವಾಗ ಗೊಂದಲ ಇರಬಾರದೆಂಬುವುದು ನನ್ನ ಆಗ್ರಹ.
ನಿರ್ದಿಷ್ಟವಾಗಿ ಇಂತಹ ಇಲಾಖೆ ಅಥವಾ ಅಧಿಕಾರಿಗೆ ಹಣ ನೀಡಿದ್ದೇವೆ ಎಂಬುವುದನ್ನು ಹೇಳಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ.
ನನ್ನ ಎರಡೂ ಇಲಾಖೆಯಲ್ಲಿ ಮೇಲೆ ಯಾವುದೇ ಆರೋಪವಿದ್ದರೆ ಹೇಳಿ ಸಚಿವನಾಗಿ ನನ್ನನ್ನೂ ಸೇರಿದಂತೆ ತನಿಖೆ ಮಾಡಲಿ ಸಿದ್ದನಿದ್ದೇನೆ. ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರ ಇದ್ದರೆ ಅದು ಝಿರೋ ಪರ್ಸೆಂಟ್‌ಗೆ ಬರಬೇಕೆಂದು ಬಡಿದಾಡಿಕೊಂಡವನು ನಾನು. ನಿರ್ದಿಷ್ಟ ಆರೋಪವಿದ್ದರೆ ಹೇಳಿ ಎಂದರು.
ಮಠ ಹಾಗೂ ದೇವಸ್ಥಾನಕ್ಕೆ ನೀಡುವ ಅನುದಾನ ಪಡೆಯಬೇಕಾದರೆ ಸರ್ಕಾರಕ್ಕೆ 30% ಕಮಿಷನ್ ನೀಡಬೇಕೆಂದು ಗದಗ ಶಿರಹಟ್ಟಿ ಮಠದ ಫಕೀರೇಶ್ವರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದರು.
ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಜನಾದೇಶದ ಮೂಲಕ ಉತ್ತರ ನೀಡುತ್ತೇವೆ. 150ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.