ಮಂಗಳೂರು:ದರೋಡೆ ಪ್ರಕರಣದ ಆರೋಪಿಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದಲ್ಲಿ ಪುತ್ತೂರಿನ ಮಾಜಿ ಗ್ರಾಮ ಪಂಚಾಯತ್ ಸದಸ್ಯನೊಬ್ಬನನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯತಿನಲ್ಲಿ ಮಾಜಿ ಸದಸ್ಯನಾಗಿರುವ ಕೆದಂಬಾಡಿ ನಿವಾಸಿ ಅಬ್ದುಲ್ ಬಶೀರ್(40) ಬಂಧಿತ ಆರೋಪಿಯಾಗಿದ್ದಾನೆ.
ಮೂಡಬಿದ್ರೆ, ಬೆಳ್ತಂಗಡಿ, ಉಪ್ಪಿನಂಗಡಿ, ಚಿಕ್ಕಮಗಳೂರು, ಉಡುಪಿ, ಕೊಡಗು ಸೇರಿದಂತೆ ಐದಾರು ಜಿಲ್ಲೆಗಳಲ್ಲಿ ದರೋಡೆ ನಡೆಸುತ್ತಿದ್ದ, ನಾಲ್ಕು ಗ್ಯಾಂಗ್ ಗಳನ್ನು ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದಲ್ಲಿ 15 ಮಂದಿಯನ್ನು ಬಂಧಿಸಲಾಗಿತ್ತು.
ಆರೋಪಿಗಳು ನೀಡಿದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಸೇರಿ 28 ಪ್ರಕರಣಗಳನ್ನು ಪತ್ತೆ ಮಾಡಲಾಗಿತ್ತು.
ಪೊಲೀಸರ ತನಿಖೆ ಮುಂದುವರಿದಿದ್ದು, ದರೋಡೆ ತಂಡಕ್ಕೆ ವಿವಿಧೆಡೆ ಆಶ್ರಯ ಮತ್ತು ಹಣಕಾಸು ನೆರವು ನೀಡುತ್ತಿದ್ದ ಅಬ್ದುಲ್ ಬಶೀರ್ ನನ್ನು ಬಂಧಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ ಸಮಾಜ ಸೇವಕನ ರೀತಿ ಪೋಸು ನೀಡುತ್ತಿದ್ದ ಅಬ್ದುಲ್ ಬಶೀರ್, ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ.
ದರೋಡೆ ತಂಡಕ್ಕೆ ವಾಹನ, ದರೋಡೆಯ ಬಳಿಕ ಅಡಗಿಕೊಳ್ಳಲು ಬೇರೆ ಬೇರೆ ಕಡೆ ವ್ಯವಸ್ಥೆ ಮಾಡುತ್ತಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ತಿಳಿದು ಬಂದಿದೆ.