DAKSHINA KANNADA
ತೊಕ್ಕೊಟ್ಟು-ಮುಡಿಪು ಚತುಷ್ಪಥ ರಸ್ತೆ ಮಾದರಿ ರಸ್ತೆಯಾಗಿ ರೂಪಿಸಲು ಸಭೆ
ಮಂಗಳೂರು: ತೊಕ್ಕೊಟ್ಟಿನಿಂದ ಮುಡಿಪುವರೆಗಿನ 10.5 ಕಿ. ಮೀ ಉದ್ಧದ ಚತುಷ್ಪಥ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ರೂಪಿಸಲು ರಸ್ತೆ ಸಂಪರ್ಕಿಸುವ ಶಿಕ್ಷಣ ಸಂಸ್ಥೆಗಳು, ಸ್ಥಳಿಯಾಡಳಿತ ಸಂಸ್ಥೆಗಳು, ಉದ್ಯಮಗಳು, ಸೇರಿದಂತೆ ಮೂಲಭೂತ ಸೌಕರ್ಯದೊಂದಿಗೆ ಅತ್ಯಂತ ಸುರಕ್ಷತೆಯ ರಸ್ತೆಯನ್ನಾಗಿ ಮಾರ್ಪಾಟು ಮಾಡಿ ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ತೊಕ್ಕೊಟುವಿನಿಂದ ಮುಡಿಪು ತನಕ ಚತುಷ್ಪಥ ರಸ್ಥೆಯ ಅಭಿವೃದ್ಧಿ, ಸ್ವಚ್ಛತೆ, ಮೂಲಭೂತ ಸೌಕರ್ಯಗಳು ಹಾಗೂ ಕಾನೂನು ಸುವ್ಯವಸ್ಥೆ ಕುರಿತಂತೆ ಈ ಭಾಗದಲ್ಲಿ ಬರುವ ಯೆನೆಪೊಯ, ನಿಟ್ಟೆ ವಿವಿ, ಕಣಚೂರು, ಫಾದರ್ ಮುಲ್ಲರ್ಸ್, ಮಂಗಳೂರು ವಿಶ್ವವಿದ್ಯಾನಿಲಯ,
ಇನ್ಬೋಸಿಸ್, ಹಾಗೂ ಪಿ.ಎ.ವಿದ್ಯಾ, ಬ್ಯಾರಿಸ್ ಸಂಸ್ಥೆಗಳ ಮುಖ್ಯಸ್ಥರು,ಈ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮ ಪಂಚಾಯತ್‍ನ ಅಧ್ಯಕ್ಷರು,ಸದಸ್ಯರು,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪರಿಸರ ಕಾಳಜಿಯ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆದು ಚರ್ಚೆ ನಡೆಸಿ ರಸ್ತೆ ನಿರ್ವಹಣಾ ಸಮಿತಿಯ ಕುರಿತು ಮಾತನಾಡಿದರು.
22 ಕೋಟಿ ಅನುದಾನ: ಮಂಗಳೂರು ನಗರದ ನಂತರ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ ಇದಾಗಿದ್ದು ಮೇಲೆ ತಿಳಿಸಿದ ಎಲ್ಲಾ ವಿದ್ಯಾ ಸಂಸ್ಥೆಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಸಹಕಾರದೊಂದಿಗೆ ಮುಡಿಪುವಿನಿಂದ ಕಂಬಳ ಪದವು ತನಕ ಹಾಗೂ ನಾಟೆಕಲ್ ನಿಂದ ಚೆಂಬುಗುಡ್ಡೆ ತನಕ ಚತುಷ್ಪಥ ರಸ್ಥೆ ನಿರ್ಮಾಣ ಆಗಿದ್ದು ನಾಟೆಕಲ್ ನಿಂದ ಅಸೈಗೋಳಿ ತನಕ ಸುಮಾರು ಹತ್ತು ಕೋಟಿ ರೂಪಾಯಿ ಹಾಗೂ ಚೆಂಬುಗುಡ್ಡೆಯಿಂದ ತೊಕ್ಕೊಟ್ಟು ಜಂಕ್ಷನ್ ಅಭಿವೃದ್ಧಿಗಾಗಿ ಸುಮಾರು ಹನ್ನೆರಡು ಕೋಟಿ ಅನುದಾನ ಬಿಡುಗಡೆಯಾಗಿದ್ದು ಅತೀ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಮೂಲಭೂತ ಸೌಕರ್ಯಕ್ಕೆ ಆದ್ಯತೆ: ತೊಕ್ಕೊಟ್ಟಿನಿಂದ ಮುಡಿಪುವರೆಗೆ ರಸ್ತೆಯ ಸೌಂದರ್ಯ ಹಾಗೂ ವಿದ್ಯುತ್ ದೀಪಗಳಿಗೆ ಅಳವಡಿಕೆಗೆ ಬೇಕಾಗುವಂಥಹ ಯೋಜನೆ, ರಸ್ತೆಯುದ್ದಕ್ಕೂ ರಸ್ತೆಯನ್ನು ಸ್ವಚ್ಛವಾಗಿರಿಸಲು ಬೇಕಾಗುವಂತಹ ಕ್ರಮಕೈಗೊಳ್ಳಲು ಹಾಗೂ ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಜನ ಸೇವಾ ಟ್ರಸ್ಟ್ ನ ಶೀನಾ ಶೆಟ್ಟಿಯವರಿಗೆ ಈ ಬಗ್ಗೆ ಯೋಜನೆಯನ್ನು ರೂಪಿಸಲು ಜವಾಬ್ದಾರಿ ವಹಿಸಲಾಗಿದೆ.
ತೊಕ್ಕೊಟ್ಟುವಿನಿಂದ ಮುಡಿಪು ತನಕ ರಸ್ತೆಯ ಇಕ್ಕೆಲಗಳಲ್ಲೂ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡಗಳನ್ನು ನೆಡುವುದರ ಮೂಲಕ ರಸ್ತೆಯ ಸೌಂದರ್ಯ ಇನ್ನಷ್ಟು ಹೆಚ್ಚಿಸಲು ನೀಲಿ ನಕಾಶೆ ತಯಾರಿಸಲು ಮಾಧವ ಉಳ್ಳಾಲ ರವರಿಗೆ ಜವಾಬ್ದಾರಿ ನೀಡಲಾಗಿದೆ.
ಈ ಭಾಗದಲ್ಲಿ ಹಲವಾರು ಮೆಡಿಕಲ್ ವಿದ್ಯಾಸಂಸ್ಥೆ ಹಾಗೂ ಮೆಡಿಕಲ್ ಹಾಸ್ಪಿಟಲ್ ಇರುವುದರಿಂದ ಇಲ್ಲಿಗೆ ದೂರದ ಅನೇಕ ಊರುಗಳಿಂದ ಜನರು ಆಗಮಿಸುತ್ತಿದ್ದು ಅವರ ಸೌಲಭ್ಯಕ್ಕಾಗಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅದೇ ರೀತಿ ಶೌಚಾಲಯ ವ್ಯವಸ್ಥೆಯನ್ನು ಕೂಡ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು.
ಅದೇ ರೀತಿ ಇಲ್ಲಿ ಲಕ್ಷಾಂತರ ಜನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಓಡಾಡುವುದರಿಂದ ಅವರೆಲ್ಲರನ್ನು ಸುರಕ್ಷತೆಯ ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಸಿಸಿಟಿವಿ ಅಳವಡಿಸಿ ಅದನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಮೋನಿಟರ್ ಮಾಡುವಂತಹ ವ್ಯವಸ್ಥೆಗೆ ಯೋಜನೆ ರೂಪಿಸಲಾಗುವುದು ಅಲ್ಲದೆ ಅಗತ್ಯಬಿದ್ದಲ್ಲಿ ಪೊಲೀಸ್ ಔಟ್ ಪೋಸ್ಟನ್ನು ಕೂಡ ತೆರೆಯುವ ಬಗ್ಗೆ ಕೂಡ ಯೋಜನೆಯನ್ನು ರೂಪಿಸಲಾಗುವುದು ಎಂದರು.
ಕಣಚೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು, ನಿಟ್ಟೆ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಸಹ ಕುಲಾ„ಪತಿ ಎನ್. ವಿಶಾಲ್ ಹೆಗ್ಡೆ, ಯೇನೆಪೊಯ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಸಹ ಕುಲಾಪತಿ ಪರ್ಹಾದ್ ಯೇನೆಪೊಯ, ಇನ್‌ಫೋಸಿಸ್ ಸಂಸ್ಥೆಯ ಮುಖ್ಯಸ್ಥ ವಾಸುದೇವ ಕಾಮತ್, ಪಿ.ಎ. ಎಜ್ಯುಕೇಶನಲ್ ಟ್ರಸ್ಟ್‍ನ ಅಧ್ಯಕ್ಷ ಅಬ್ದುಲ್ಲಾ ಇಬ್ರಾಹಿಂ, ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಅಝೀಝ್,
ಎಸಿಪಿಗಳಾದ ದಿನಕರ ಶೆಟ್ಟಿ, ಎಸಿಪಿ ಟ್ರಾಫಿಕ್ ಗೀತಾ ಕುಲಕರ್ಣಿ, ತಾಲೂಕುಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ನಾಗರಾಜ್, ಪಿಡ್ಲಬುಡಿ ಇಂಜಿಯರ್ ಯಶವಂತ ಗೌಡ, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರಿಗಳು,
ಅದ್ಯಕ್ಷರು, ಉಪಾಧ್ಯಕ್ಷರು, ಸ್ಥಳಿಯಾಡಳಿತ ಸಂಸ್ಥೆಯ ಸದಸ್ಯರು, ಸಾಮಾಜಿಕ ಸೇವಾ ಸಂಸ್ಥೆಗಳ ಮುಖ್ಯಸ್ಥರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು,ಪಂಚಾಯತ್ ಅಧ್ಯಕ್ಷರುಗಳು ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
DAKSHINA KANNADA
ಶ್ರೀಮತಿ ಶೆಟ್ಟಿ ಭೀಕರ ಕೊ*ಲೆ ಪ್ರಕರಣ : ಮೂವರ ಅಪರಾಧ ಸಾಬೀತು
ಮಂಗಳೂರು : ಐದು ವರ್ಷಗಳ ಹಿಂದೆ ಮಂಗಳೂರು ನಗರವನ್ನೇ ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ ಕೊ*ಲೆ ಪ್ರಕರಣದ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಶುಕ್ರವಾರ ತೀರ್ಪು ನೀಡಿದ್ದಾರೆ.
ಮಂಗಳೂರಿನ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ ಯಾನೆ ಜೋನಸ್ ಜೌಲಿನ್ ಸ್ಯಾಮ್ಸನ್ (40), ವಿಕ್ಟೋರಿಯಾ ಮಥಾಯಿಸ್ (47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಈ ಪ್ರಕರಣದ ಅಪರಾಧಿಗಳು. ಈ ಪೈಕಿ ರಾಜು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲಿಯೇ ಇದ್ದಾರೆ.
ಏನಿದು ಪ್ರಕರಣ?
ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ (42) ಅವರು ಅತ್ತಾವರದಲ್ಲಿ ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದರು. ಜತೆಗೆ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ಕುರಿ ಫಂಡ್‌ನಲ್ಲಿ ಜೋನಸ್ ಸ್ಯಾಮ್ಸನ್ 2 ಸದಸ್ಯತ್ವ ಹೊಂದಿದ್ದು, ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು.
2019ರ ಮೇ 11ರಂದು ಬೆಳಗ್ಗೆ 9.15ಕ್ಕೆ ಹಣ ಕೇಳುವುದಕ್ಕಾಗಿ ಶ್ರೀಮತಿ ಶೆಟ್ಟಿ ಅವರು ಆರೋಪಿ ಜೋನಸ್ ಸ್ಯಾಮ್ಸನ್‌ನ ಮನೆಗೆ ತೆರಳಿದ್ದರು. ಅಲ್ಲಿ ಸ್ಯಾಮ್ಸನ್ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿ ತಲೆಗೆ ಹೊ*ಡೆದಿದ್ದ. ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿ ಅವರನ್ನು ಜೋನಸ್ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದೊಯ್ದು ಹರಿತವಾದ ಕತ್ತಿಯಿಂದ ಕುತ್ತಿಗೆ ಕೊ*ಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ದೇಹವನ್ನು ಒಟ್ಟು 29 ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು.
ಇದನ್ನೂ ಓದಿ : ಸಾಹಸಕ್ಕೆ ಕೈ ಹಾಕಿದ ; ಪ್ರಾಣ ಪಕ್ಷಿಯೇ ಹಾರಿ ಹೋಯಿತು
ಜೋನಸ್ ಮತ್ತು ವಿಕ್ಟೋರಿಯಾ ಮೇಲಿನ ಕೊ*ಲೆ, ಸು*ಲಿಗೆ ಮತ್ತು ಸಾಕ್ಷ್ಯನಾಶ ಆರೋಪಗಳು ಹಾಗೂ ರಾಜು ಮೇಲಿನ ಕೊ*ಲೆಗೆ ಸಹಾಯ, ಕಳವು ಮಾಡಿರುವ ಸೊತ್ತುಗಳನ್ನು ಇಟ್ಟುಕೊಂಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಸಪ್ಟೆಂಬರ್ 17ಕ್ಕೆ ನಿಗದಿಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ಸಾಕ್ಷಿಗಳನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.
DAKSHINA KANNADA
ಸಾಹಸಕ್ಕೆ ಕೈ ಹಾಕಿದ ; ಪ್ರಾಣ ಪಕ್ಷಿಯೇ ಹಾರಿ ಹೋಯಿತು
ಮಂಗಳೂರು : ಇತ್ತೀಚಿನ ದಿನಗಳಲ್ಲಿ ಸಾಹಸಕ್ಕೆ ಕೈ ಹಾಕೋರ ಸಂಖ್ಯೆ ಕಡಿಮೆಯೇನಿಲ್ಲ. ರೀಲ್ಸ್, ಫೋಟೋ ಹುಚ್ಚಿಗೆ ತಮ್ಮ ಪ್ರಾಣವನ್ನೇ ಬಲಿಕೊಡುತ್ತಿದ್ದಾರೆ. ಮಂಗಳೂರಿನಲ್ಲೂ ಅಂತಹುದೇ ಘಟನೆ ನಡೆದಿದೆ. ಹಾವು ಹಿಡಿಯಲು ಹೋಗಿ ಓರ್ವ ತನ್ನ ಉಸಿರು ಚೆಲ್ಲಿದ್ದಾರೆ. ಗುರುವಾರ(ಸೆ.12) ಬಜಪೆಯಲ್ಲಿ ಈ ಘಟನೆ ನಡೆದಿದೆ.
ರಾಮಚಂದ್ರ ಪೂಜಾರಿ (55) ಮೃತ ವ್ಯಕ್ತಿ.
ರಾಮಚಂದ್ರ ಹಾವೊಂದನ್ನು ಕಂಡು ಅದು ವಿಷರಹಿತ ಎಂದು ಭಾವಿಸಿ ಹಿಡಿದಿದ್ದಾರೆ. ಅಸಲಿಗೆ ಅದು ವಿಷಪೂರಿತ ಕನ್ನಡಿ ಹಾವಾಗಿತ್ತು. ರಾಮಚಂದ್ರ ಹಿಡಿದಾಗ ಹಾವು ಅವರ ಕೈಗೆ ಕಚ್ಚಿದೆ. ಇದನ್ನು ಗಂಭೀರವಾಗಿ ಪರಿಗಣಿಸದೆ ಅವರು ಮನೆಗೆ ತೆರಳಿದ್ದರು. ಸಂಜೆಯಾಗುತ್ತಲೇ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು (ಸೆ.13) ಮೃತಪಟ್ಟಿದ್ದಾರೆ.
DAKSHINA KANNADA
ಬಹುನಿರೀಕ್ಷಿತ “ಕಲ್ಜಿಗ” ಸಿನೆಮಾ ರಾಜ್ಯಾದ್ಯಂತ ಬಿಡುಗಡೆ
ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ “ಕಲ್ಜಿಗ” ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ತೆರೆಕಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಕಲ್ಜಿಗ ಸಿನಿಮಾ ಕುರಿತು ಟೀಕೆ ಟಿಪ್ಪಣಿ ಬರುತ್ತಿದೆ. ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ. ಸಿನಿಮಾ ನೋಡಿದವರು ನಮ್ಮ ತುಳುನಾಡಿನ ದೈವಗಳ ಕಾರಣಿಕವನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಪ್ರಕಾರ ಸಿನಿಮಾದಲ್ಲಿ ದೈವಾರಾಧನೆಗೆ ಎಲ್ಲೂ ಅಪಚಾರ ಆಗಿರಲಿಕ್ಕಿಲ್ಲ. ನಾವು ತಪ್ಪು ಮಾಡದೆಯೂ ನಮಗೆ ಅನ್ಯಾಯವಾಗುವುದಾದರೆ ನಾನು ಚಿತ್ರತಂಡದ ಜೊತೆಗೆ ಇದ್ದೇನೆ“ ಎಂದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತಾಡಿ, “ಅರ್ಜುನ್ ಕಾಪಿಕಾಡ್ ಅವರು ಅಭಿನಯಿಸಿದ ಸಿನಿಮಾದಲ್ಲಿ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕೆಲಸ ನಡೆದಿದೆ. ತುಳುನಾಡಿನ ದೈವಗಳ ಪವಾಡವನ್ನು ತೋರಿಸಲಾಗಿದೆ. ನಾವೆಲ್ಲರೂ ಸಿನಿಮಾ ನೋಡಿ ಬೆಂಬಲಿಸಬೇಕು” ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಕಾಶ್ ಧರ್ಮನಗರ, ತಮ್ಮ ಲಕ್ಷ್ಮಣ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ನಟ ಅರ್ಜುನ್ ಕಾಪಿಕಾಡ್, ನಿರ್ಮಾಪಕ ಶರತ್ ಕುಮಾರ್ ಎ.ಕೆ., ನಿರ್ದೇಶಕ ಸುಮನ್ ಸುವರ್ಣಮತ್ತಿತರರು ಉಪಸ್ಥಿತರಿದ್ದರು.
ಸಿನಿಮಾ ಕುರಿತು:
ಕರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ `ಕಲ್ಜಿಗ’ ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕವನ್ನು ಬೆಸೆದುಕೊಂಡಿದೆ. ಕಲ್ಜಿಗದ ಕಥೆ ಚಿತ್ರಕಥೆ ಸಂಭಾಷಣೆಯನ್ನು ಕೂಡ ನಿರ್ದೇಶಕರೇ ಬರೆದಿದ್ದಾರೆ. ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಸಿನಿಮಾಕ್ಕೆ ಪ್ರಸಾದ್ ಕೆ ಶೆಟ್ಟಿ ಹಿನ್ನಲೆ ಸಂಗೀತ ನೀಡಿದ್ದಾರೆ.
ಇನ್ನುಳಿದಂತೆ ಗಿರ್ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ `ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದು ಪಡೆದಿರುವ ನಟ ಅರ್ಜುನ್ ಕಾಪಿlಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್. ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟರಾದ ಗೋಪಿನಾಥ್ ಭಟ್ , ಜ್ಯೋತಿಷ್ ಶೆಟ್ಟಿ , ಮಾನಸಿ ಸುಧೀರ್ , ವಿಜಯ್ ಶೋಭರಾಜ್ ಪಾವೂರ್ , ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರು , ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ರಾಜ್ಯಾದ್ಯಂತ ಸುಮಾರು ಐವತ್ತು ಟಾಕೀಸ್ ಗಳಲ್ಲಿ ಕಲ್ಜಿಗ ಸಿನಿಮಾ ತೆರೆಕಾಣಲಿದೆ. ದಕ್ಷಿಣ ಕನ್ನಡ , ಉಡುಪಿ , ಬೆಂಗಳೂರು , ಮೈಸೂರು , ಶಿವಮೊಗ್ಗ , ಚಿಕ್ಕಮಗಳೂರು , ಹಾಸನ , ಮಡಿಕೇರಿ , ಹುಬ್ಬಳ್ಳಿ , ಧಾರವಾಡ , ದಾವಣಗೆ ಮುಂಬೈ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿದೆ.
ಈಗಾಗಲೇ ಕಲ್ಜಿಗ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ಒಟ್ಟು 14 ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ. ಸಚಿನ್ ಶೆಟ್ಟಿ ಛಾಯಾಗ್ರಹಣ , ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ , ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!