ಮಂಗಳೂರು/ಬೆಂಗಳೂರು : ಅದ್ದೂರಿಯಾಗಿ ತೆರೆಕಂಡು ಜನ ಮನ ಗೆದ್ದು, ತುಳು ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಿರುವ ‘ದಸ್ಕತ್’ ಸಿನಿಮಾ ಜ.11, 12 (ಶನಿವಾರ ಮತ್ತು ಭಾನುವಾರ) ಬೆಂಗಳೂರಿನ ತುಳುವರಿಗಾಗಿ ಪ್ರದರ್ಶನ ಆಯೋಜಿಸಲಾಗಿದೆ.
ರಾಘವೇಂದ್ರ ಕುಡ್ಡ ನಿರ್ಮಾಣದಲ್ಲಿ ರೂಪುಗೊಂಡಿರುವ ಈ ಚಲನಚಿತ್ರವು ಶನಿವಾರ ಸಂಜೆ 7.30 ಹಾಗೂ ಜ.12ರ ಭಾನುವಾರದಂದು ಬೆ.11, ಮಧ್ಯಾಹ್ನ 2.30 ಹಾಗೂ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಚಿತ್ರರಂಗದ ಅನುಭವವಿಲ್ಲದವರೇ ಇರುವ ಈ ತುಳು ಭಾಷಾ ಚಲನಚಿತ್ರವು ಕರಾವಳಿಯ ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಸುಂದರವಾಗಿ ನಿರೂಪಿಸಿದೆ. ಕರಾವಳಿಯ ಚಿತ್ರಪ್ರೇಮಿಗಳಿಗಾಗಿ ಮತ್ತು ತುಳು ಸಂಸ್ಕೃತಿಯನ್ನು ಅರಿಯುವ ಮನಸ್ಸುಳ್ಳ ಎಲ್ಲರಿಗಾಗಿ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ. ರಾಜ್‌ಕುಮಾರ್ ಭವನದ ಡಾ.ಅಂಬರೀಷ್ ಆಡಿಟೋರಿಯಂನಲ್ಲಿ ಚಲನಚಿತ್ರದ ಪ್ರದರ್ಶನ ಏರ್ಪಾಟಾಗಿದೆ.
ಗ್ರಾಮೀಣ ಬದುಕಿನ ನೂರಾರು ಸಂಗತಿಗಳನ್ನು ಆಯ್ದುಕೊಂಡು ಅವುಗಳನ್ನು ಬಿಡಿಬಿಡಿಯಾಗಿ ಬಿಡಿಸಿಕೊಂಡು ಒಂದೊಂದು ಸಂಗತಿಯನ್ನೂ ರೂಪಕದ ಹಾಗೆ ಸೃಷ್ಟಿಸುತ್ತಾ ಹೋಗಿದ್ದಾರೆ. ತಂತ್ರಜ್ಞಾನ, ಕ್ಯಾಮರಾ, ನಟ ನಟಿಯರು, ನಿರ್ಮಾಪಕ, ವ್ಯವಹಾರ, ಕಲಾತ್ಮಕತೆ, ಆರ್ಥಿಕ ಲಾಭ ಎಲ್ಲವನ್ನೂ ಲೆಕ್ಕಾಚಾರ ಮಾಡುವ ಈ ದಿನಗಳಲ್ಲಿ, ಅದೂ ತುಳು ಭಾಷೆಯಲ್ಲಿ ಒಂದು ವಿಶಿಷ್ಟ ಬಗೆಯ ಪ್ರಯತ್ನ ನಡೆದಿದೆ. ಪ್ರಮುಖ ಕಥಾ ಪಾತ್ರವೊಂದು ನಾಯಕನೂ ಅಲ್ಲದ ಖಳನೂ ಅಲ್ಲದ ಮತ್ತು ಅದು ಎರಡೂ ಆಗಿರುವ ನಟನೊಬ್ಬನ ನಟನಾಶಕ್ತಿಯನ್ನು ಈ ಸಿನಿಮಾದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ ಎಂದು ವಿಮರ್ಶಿಸಿದ್ದಾರೆ.
ನಾಯಕ ನಟನಾಗಿ ದೀಕ್ಷೀತ್ ಅಂಡಿಂಜೆ ಸಿನಿಮಾದಲ್ಲಿ ಉತ್ತಮ ಅಭಿನಯದ ಮೂಲಕ ಮಿಂಚಿದ್ದಾರೆ. ದಸ್ಕತ್ ಚಿತ್ರಕ್ಕೆ ಅನೀಶ್ ಪೂಜಾರಿ ವೇಣೂರು ನಿರ್ದೇಶನ ಮಾಡಿದ್ದು, ಸಂತೋಷ್ ಆಚಾರ್ಯ ಗುಂಪಲಾಜೆಯ ಛಾಯಾಗ್ರಹಣ ಗಮನ ಸೆಳೆದಿದೆ. ಸಮರ್ಥನ್ ಎಸ್.ರಾವ್ ಸಂಗೀತವಿದ್ದು, ಹೊಸಬರ ನಟನೆಯಲ್ಲಿ ಸುಂದರವಾಗಿ ಮೂಡಿಬಂದಿದೆ. ಈಗಾಗಲೇ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ತುಳು ಭಾಷೆಯ ವೈವಿಧ್ಯವೂ ಈ ಚಿತ್ರದ ಮೂಲಕ ಬಿಂಬಿತವಾಗಿದೆ.
ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಬೈಕ್ ಗೆ ತಡೆರಹಿತ ಬಸ್ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಮುಲ್ಕಿ ಅಂಚೆ ಕಚೇರಿಯ ಅಂಚೆಪಾಲಕ ಕೊಲ್ಲೂರು ನಿವಾಸಿ ಪಾಂಡುರಂಗ ರಾವ್ ಎಂದು ಗುರುತಿಸಲಾಗಿದೆ. ಗಾಯಾಳು ಪಾಂಡುರಂಗ ರಾವ್ ತಮ್ಮ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದಾಗ ಉಡುಪಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬಂದ ತಡೆರಹಿತ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಸಂದರ್ಭ ಸಮಾರ ಪಾಂಡುರಂಗ ರಾವ್ ರವರ ತಲೆಗೆ, ಕಾಲಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಗಳೂರು : ರಾಜ್ಯ ಸರಕಾರ ಕೆಎಸ್‌ಆರ್‌ಟಿಸಿ ಬಸ್ಸುಗಳ ಟಿಕೆಟ್ ದರವನ್ನು ಏರಿಸಿದ ಬೆನ್ನಲ್ಲೇ ದ.ಕ.ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಪ್ರಯಾಣ ದರವನ್ನೂ ಏರಿಸಲಾಗಿದೆ.
ಸರಕಾರಿ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಜಿಲ್ಲೆಯ ವಿವಿಧ ಬಸ್ಸು ಮಾಲಕರ ಸಂಘದವರಲ್ಲಿ ವಿಚಾರಿಸಿದಾಗ “ಸದ್ಯಕ್ಕೆ ದರ ಏರಿಕೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮಾಡುವುದು ಅನಿವಾರ್ಯವಾದೀತು” ಎಂದು ತಿಳಿಸಿದ್ದರು. ಆದರೆ ಖಾಸಗಿ ಬಸ್‌ಗಳಲ್ಲಿ ಜ. 7ರಿಂದಲೇ ಟಿಕೆಟ್ ದರ ಏರಿಸಲಾಗಿದೆ.
ಮಂಗಳೂರಿನಿಂದ ಪ್ರತ್ಯೇಕ ರೂಟ್‌ಗಳಲ್ಲಿ ಪುತ್ತೂರು, ಉಪ್ಪಿನಂಗಡಿ, ವಿಟ್ಲ ಭಾಗಕ್ಕೆ ಈ ಬಸ್ಸುಗಳು ಓಡುತ್ತಿದ್ದು, ಇದೇ ರೂಟ್‌ನಲ್ಲಿ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ಸುಗಳೂ ಸಂಚರಿಸುತ್ತಿವೆ. ರಾಷ್ಟ್ರೀಕೃತ ರೂಟ್‌ಗಳಲ್ಲಿ ಸರಕಾರಿ ಬಸ್ಸುಗಳ ಓಡಾಟ ವ್ಯವಸ್ಥೆ ಸರಿ ಇಲ್ಲ ಎಂಬ ಕಾರಣಕ್ಕೆ 2003ರಲ್ಲಿ ಅಂದಿನ ಸರಕಾರ ಖಾಸಗಿ ಬಸ್ಸುಗಳ ಓಡಾಟಕ್ಕೆ ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಿಗೆ ನೀಡಿತ್ತು.ದರ ಏರಿಕೆ ಕುರಿತು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ಶೇಖ ಪ್ರತಿಕ್ರಿಯಿಸಿ, ನಾವು ಉಳಿದ ಬಸ್ಸುಗಳಿಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸುತ್ತಿದ್ದು, ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದಿದ್ದಾರೆ.
ಕೇರಳದ ಬಸ್‌ಗಳಲ್ಲೂ ದರ ಏರಿಕೆ ??
ಕರ್ನಾಟಕಕ್ಕೆ ಕೇರಳ ರಾಜ್ಯ ಸಾರಿಗೆ ಬಸ್ (ಕೆಎಸ್ಸಾರ್ಟಿಸಿ) ಸೇವೆಗಳ ಟಿಕೆಟ್ ದರವನ್ನೂ ಜ. 7ರಿಂದ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಟಿಕೆಟ್ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಕೇರಳವೂ ಟಿಕೆಟ್ ದರ ಹೆಚ್ಚಳಗೊಳಿಸಿದೆ. ಅಂತಾರಾಜ್ಯ ಒಪ್ಪಂದದ ಪ್ರಕಾರ ಎರಡು ರಾಜ್ಯಗಳ ನಡುವೆ ಟಿಕೆಟ್ ದರ ಏಕರೂಪವಾಗಿರಬೇಕೆಂದು ಈ ಹಿಂದೆ ತೀರ್ಮಾನಿಸಲಾಗಿದ್ದು, ಆ ಹಿನ್ನೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.