ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿದ್ದ ಪ್ರತಿಭಟನಾ ಕಾವು ಕಡಿಮೆಯಾಗಿದ್ದು, ಮಣಿಪುರ ಸಹಜ ಸ್ಥಿತಿಗೆ ಮರಳುತ್ತಿದೆ.
ಇಂಫಾಲ್: ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿದ್ದ ಪ್ರತಿಭಟನಾ ಕಾವು ಕಡಿಮೆಯಾಗಿದ್ದು, ಮಣಿಪುರ ಸಹಜ ಸ್ಥಿತಿಗೆ ಮರಳುತ್ತಿದೆ.
ಮಣಿಪುರದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಅಂಗಡಿಗಳು ಹಾಗೂ ಮಾರುಕಟ್ಟೆಗಳು ತೆರೆಯಲ್ಪಟ್ಟಿದ್ದು ವಾಣಿಜ್ಯ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತಿವೆ.
ಸೇನಾಪಡೆಗಳು ಹಾಗೂ ಕೇಂದ್ರ ಪೊಲೀಸ್ ಪಡೆಗಳ ಕ್ಷೀಪ್ರ ಕಾರ್ಯಾಚರಣೆಯಿಂದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇನ್ನೂ ಮಣಿಪುರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೂರೇ ದಿನಗಳಲ್ಲಿ 54 ಮಂದಿ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.
16 ಮಂದಿಯ ಮೃತದೇಹಗಳನ್ನ ಚುರಾಚಂದ್‌ಪುರ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ, 15 ಮೃತದೇಹಗಳನ್ನ ಇಂಪಾಲ ಪೂರ್ವ ಜಿಲ್ಲೆಯ ಜವಾಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿರಿಸಲಾಗಿದೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್‌ನಲ್ಲಿರುವ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೇಟೈ ಸಮುದಾಯ ಎಸ್ಟಿ ಸ್ಥಾನಮಾನದ ಬೇಡಿಕೆಯ ಕುರಿತು 4 ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ (High Court) ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.
ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು.
ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಚುರಾಚಂದ್‍ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಆದರೆ ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ನಡೆದಿತ್ತು.
ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಬುಧವಾರ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಬೇಕಿದ್ದ ಸ್ಥಳವನ್ನು ಧ್ವಂಸಗೊಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯದ ಇತರ ಭಾಗಗಳಿಂದಲೂ ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದವು, ಪರಿಸ್ಥಿತಿ ಕೈಮೀರಿದ್ದರಿಂದಾಗಿ ಕಂಡಲ್ಲಿ ಗುಂಡು ಹಾರಿಸಲು ಸರ್ಕಾರ ಆದೇಶ ಹೊರಡಿಸಿತ್ತು.
ಈ ಬೆನ್ನಲ್ಲೇ ಸೇನಾಪಡೆಗಳು ಹಾಗೂ ಕೇಂದ್ರೀಯ ಭದ್ರತಾಪಡೆಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.