ಮಂಗಳೂರು: ನಗರದ ಫಳ್ನೀರ್ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನವೊಂದು ಬೆಂ*ಕಿಗಾಹುತಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
‘ಫಲ್ಮೀರ್‌ನ ಅಥೆನಾ ಆಸ್ಪತ್ರೆ ಬಳಿ ಸಾಗುತ್ತಿದ್ದಾಗ ಬೊಲೆರೊ ವಾಹನದ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ವಾಹನವನ್ನು ನಿಲ್ಲಿಸಿದ ಚಾಲಕ ಅದರಲ್ಲಿದ್ದ ಆರು ಮಂದಿ ಪ್ರಯಾಣಿಕನನ್ನು ಕೆಳಗಿಳಿಸಿದ್ದ. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ವಾಹನವನ್ನು ಆವರಿಸಿಕೊಂಡಿತು. ಸ್ಥಳೀಯರು ತಕ್ಷಣವೇ ಪಾಂಡೇಶ್ವರದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅವರು ಬಂದು ಬೆಂಕಿ ನಂದಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
‘2015ನೇ ಸಾಲಿನಲ್ಲಿ ನೋಂದಣಿಯಾಗಿರುವ ಈ ವಾಹನವು ಬಾವುಟಗುಡ್ಡೆಯಲ್ಲಿರುವ ಜಾಸ್ ಆಲುಕ್ಕಾಸ್ ಜ್ಯುವೆಲ್ಲರಿ ಮಳಿಗೆಗೆ ಸೇರಿದ್ದಾಗಿದೆ. ಮಳಿಗೆಯ ಸಿಬ್ಬಂದಿಯನ್ನು ಕರೆದೊಯ್ಯುವಾಗ ಈ ಅವಘಡ ಸಂಭವಿಸಿದೆ’ ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಳ್ಳಾಲ: ಕುಡಿಯುವ ನೀರಿನಲ್ಲಿ ತೈಲಾಂಶ ಸೇರಿ ಗ್ರಾಮಸ್ಥರ ಪ್ರಾಣಕ್ಕೆ ಕುತ್ತಾಗಿದ್ದು, ಜೀವಜಲವೇ ವಿಷವಾಗಿ ಬದಲಾದ ಘಟನೆ ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಸಂಬಾರ ತೋಟ ಬಳಿ ನಡೆದಿದೆ. ಆರು ತಿಂಗಳ ಹಿಂದೆ ಒಂದು ಕೊಳವೆ ಬಾವಿಯಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿತ್ತು. ಇದೀಗ ಹತ್ತಾರು ಬಾವಿ, ಕೊಳವೆ ಬಾವಿಗಳ ನೀರಿನಲ್ಲಿ ಭಾರೀ ಪ್ರಮಾಣದ ತೈಲಾಂಶ ಪತ್ತೆಯಾಗಿದೆ.
ಅಷ್ಟೇ ಅಲ್ಲದೆ ಮುಡಿಪು ಪೇಟೆಯಿಂದ ಸುಮಾರು 3 ಕಿ.ಮೀ ದೂರವಿರುವ ಸಂಬಾರ ತೋಟ ಪ್ರದೇಶ 100 ಮನೆಗಳಿದ್ದು, ಸುಮಾರು 10 ಕೊಳವೆ ಬಾವಿ ಹಾಗೂ ಕೆಲವು ಬಾವಿಗಳ ನೀರಿನಲ್ಲಿ ತೈಲ ಗೋಚರಿಸಿದೆ. ಡೀಸೆಲ್ ಮಾದರಿಯ ಭಾರೀ ಪ್ರಮಾಣದ ತೈಲದ ಅಂಶ ಪತ್ತೆಯಾಗಿದೆ. ತೈಲ ಮಿಶ್ರಿತ ನೀರು ಸೇವಿಸಿ ಹಲವು ಜನರಿಗೆ ಅರೋಗ್ಯ ಸಮಸ್ಯೆ ಉಂಟಾಗಿದೆ.
ಈ ಬಗ್ಗೆ ಪಜೀರು ಪಂಚಾಯತಿ ಹಾಗೂ ಇನ್ನಿತರ ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಇದೀಗ ಈ ಭಾಗದ ಹೆಚ್ಚಿನ ಬಾವಿ ನೀರಲ್ಲೂ ತೈಲದ ವಾಸನೆ ಬರುತ್ತಿದೆ. ಸಂಬಾರತೋಟದ ಮುಖ್ಯ ರಸ್ತೆಗೆ ತಾಗಿಕೊಂಡೇ ಇರುವ ಪೆಟ್ರೋಲ್ ಪಂಪ್ ಮೇಲೆ ಅನುಮಾನ ಉಂಟಾಗಿದೆ. ಪೆಟ್ರೋಲ್ ಪಂಪ್ ನ ತಳ ಟ್ಯಾಂಕ್ ನಲ್ಲಿ ತೈಲ ಸೋರಿಕೆ ಅನುಮಾನ ಸೃಷ್ಟಿಯಾಗಿದ್ದು, ಸಮಸ್ಯೆ ಆರಂಭವಾದಾಗಿನಿಂದಲೇ ಸ್ಥಳೀಯರಿಂದಲೇ ಬಾವಿಯ ನೀರಿನ ಟೆಸ್ಟ್ ಮಾಡಲಾಗಿದೆ. ಕಾರ್ಬನ್ ಅನಾಲಿಸ್ಟಿಕ್ ಟೆಸ್ಟ್, ವಿಒಸಿ ಟೆಸ್ಟ್, ಮಂಗಳೂರು ಬಯೊಟೆಕ್ ಲ್ಯಾಬೊರೇಟರಿ ಸೇರಿದಂತೆ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡಲಾಗಿದೆ.
ಬಂಟ್ವಾಳ: ಕರಾವಳಿಯಲ್ಲಿ ಪಣೋಲಿಬೈಲು ಕ್ಷೇತ್ರದ ಬಗ್ಗೆ ಗೊತ್ತಿಲ್ಲದ ಜನರು ಇಲ್ಲಾ ಅಂತಾನೇ ಹೇಳಬಹುದು. ತನ್ನ ಭಕ್ತರಿಗೆ ಕಾರ್ಣಿಕದ ಮೂಲಕ ಪರಿಹಾರ ನೀಡುತ್ತಿರುವ ಈ ಕ್ಷೇತ್ರ ಜಾತಿ ಧರ್ಮದ ಬೇದವಿಲ್ಲದೆ ಜನರು ನಂಬುವ ಕ್ಷೇತ್ರ. ಇಲ್ಲಿ ಅರಿಕೆ ಮಾಡಿಕೊಂಡ ಲಕ್ಷಾಂತರ ಜನ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಆದೆಷ್ಟರ ಮಟ್ಟಿಗೆ ಅಂದ್ರೆ ಇಲ್ಲಿ ಸಮಸ್ಯೆ ಪರಿಹಾರವಾಗಿದ್ರೂ ಹರಕೆ ತೀರಿಸಲು ವರ್ಷಾನುಗಟ್ಟಲೆ ಕಾಯಬೇಕಾಗಿದೆ.
ಬಂಟ್ವಾಳ ತಾಲೂಕಿನ ಮೇಲ್ಕಾರ್ ಸಮೀಪದಲ್ಲಿ ಇರೋ ಈ ಪಣೋಲಿ ಬೈಲು ಕ್ಷೇತ್ರ ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳು ನೆಲೆಯಾದ ಕ್ಷೇತ್ರ. ಈ ಕ್ಷೇತ್ರಕ್ಕೆ ಬಂದು ಭಕ್ತರು ಅದೇನೆ ಕಷ್ಟ ಅರುಹಿಕೊಂಡ್ರೂ ಅದನ್ನು ಪರಿಹರಿಸುವ ಮೂಲಕ ಈ ದೈವಗಳು ಕಲಿಯುಗದಲ್ಲೂ ಕಾರ್ಣಿಕ ತೋರಿಸುತ್ತಿದೆ. ಹೀಗಾಗಿಯೇ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಂದು ಅಗೇಲು ಸೇವೆಗಳನ್ನು ನೀಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ಅನೇಕರು ತಮ್ಮ ಸಮಸ್ಯೆ ಬಗೆ ಹರಿಸಿದ್ರೆ ಈ ಕ್ಷೇತ್ರದಲ್ಲೇ ಕೋಲ ಸೇವೆ ನೀಡುವುದಾಗಿ ಅರಿಕೆ ಮಾಡಿಕೊಳ್ಳುತ್ತಾರೆ. ಹೀಗೇ ಕೈಮುಗಿದು ಬೇಡಿ ಪರಿಹಾರ ಕಂಡುಕೊಂಡವರು ಇಲ್ಲಿ ಹರಕೆ ಕೋಲ ನೀಡಲು ಇನ್ನೂ ಕಾದು ಕೂತಿದ್ದಾರೆ. ಯಾಕಂದ್ರೆ ಈಗಾಗಲೇ ಈ ಕ್ಷೇತ್ರದಲ್ಲಿ 35 ವರ್ಷವಾದ್ರೂ ಮುಗಿಯದಷ್ಟು ಕೋಲಸೇವೆ ಬುಕ್ ಆಗಿದೆ.
ಪ್ರತಿದಿನ ಇಲ್ಲಿ ಹರಕೆ ಕೋಲ ನಡೆಯುತ್ತದೆಯಾದ್ರೂ ಈಗ ಬುಕ್ಕಿಂಗ್ ಮಾಡಿದವರು ಹರಕೆ ತೀರಿಸಲು ಏನಿಲ್ಲಾಂದ್ರೂ 35 ವರ್ಷ ಕಾಯಬೇಕು. ಇದು ಈ ಕ್ಷೇತ್ರದ ಕಲ್ಕುಡ ಕಲ್ಲುರ್ಟಿ ದೈವದ ಕಾರ್ಣಿಕಕ್ಕೆ ಸಾಕ್ಷಿಯಾಗಿದ್ದು, ಭಕ್ತರು ಈಗಲೂ ಹರಕೆ ಕೋಲಗಳನ್ನು ಬುಕ್ ಮಾಡ್ತಾನೆ ಇದ್ದಾರೆ. ಹರಕೆ ಕೋಲ ಸಲ್ಲಿಸಲು ಆಗದವರು ಇಲ್ಲಿ ನಡೆಯುವ ವರ್ಷಾವಧಿ ನೇಮೋತ್ಸವದಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಪಣೋಲಿ ಬೈಲು ಕ್ಷೇತ್ರದಲ್ಲಿ ಕೋಲಗಳ ಬುಕ್ಕಿಂಗ್ ಜಾಸ್ತಿಯಾಗಿರುವ ಹಿನ್ನಲೆಯಲ್ಲಿ ವಾರದ ಐದು ದಿನ ನಡೆಯುತ್ತಿದ್ದ ನಾಲ್ಕು ಕೋಲ ಸೇವೆಯನ್ನು ಈಗ 8 ಕ್ಕೇ ಏರಿಕೆ ಮಾಡಲಾಗಿದೆ. ಕರಾವಳಿಯ ಹೆಚ್ಚಿನ ಪ್ರತಿ ಮನೆಯಲ್ಲೂ ಕಲ್ಲುರ್ಟಿ ದೈವವನ್ನು ನಂಬಿಕೊಂಡು ಬರಲಾಗುತ್ತದೆ. ನಂಬಿದವರ ಕೈ ಬಿಡದ ಮಾಯಾ ಶಕ್ತಿಯಾಗಿ ಪಣೋಲಿ ಬೈಲಿನಲ್ಲಿ ನೆಲೆಯಾಗಿರುವ ಕಲ್ಲುರ್ಟಿಯನ್ನು ಭಕ್ತಿಯಿಂದ ‘ಅಪ್ಪೆ ಕಾಪುಲ’ ಅಂದ್ರೆ ಸಾಕು… ಆಕೆ ಭಕ್ತರ ಬೆನ್ನಿಗೆ ನಿಲ್ಲುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ.
ಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.