ಮಂಗಳೂರು : ರಾಜ್ಯ ಸರಕಾರ ಕೆಎಸ್‌ಆರ್‌ಟಿಸಿ ಬಸ್ಸುಗಳ ಟಿಕೆಟ್ ದರವನ್ನು ಏರಿಸಿದ ಬೆನ್ನಲ್ಲೇ ದ.ಕ.ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಪ್ರಯಾಣ ದರವನ್ನೂ ಏರಿಸಲಾಗಿದೆ.
ಸರಕಾರಿ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಜಿಲ್ಲೆಯ ವಿವಿಧ ಬಸ್ಸು ಮಾಲಕರ ಸಂಘದವರಲ್ಲಿ ವಿಚಾರಿಸಿದಾಗ “ಸದ್ಯಕ್ಕೆ ದರ ಏರಿಕೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮಾಡುವುದು ಅನಿವಾರ್ಯವಾದೀತು” ಎಂದು ತಿಳಿಸಿದ್ದರು. ಆದರೆ ಖಾಸಗಿ ಬಸ್‌ಗಳಲ್ಲಿ ಜ. 7ರಿಂದಲೇ ಟಿಕೆಟ್ ದರ ಏರಿಸಲಾಗಿದೆ.
ಮಂಗಳೂರಿನಿಂದ ಪ್ರತ್ಯೇಕ ರೂಟ್‌ಗಳಲ್ಲಿ ಪುತ್ತೂರು, ಉಪ್ಪಿನಂಗಡಿ, ವಿಟ್ಲ ಭಾಗಕ್ಕೆ ಈ ಬಸ್ಸುಗಳು ಓಡುತ್ತಿದ್ದು, ಇದೇ ರೂಟ್‌ನಲ್ಲಿ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ಸುಗಳೂ ಸಂಚರಿಸುತ್ತಿವೆ. ರಾಷ್ಟ್ರೀಕೃತ ರೂಟ್‌ಗಳಲ್ಲಿ ಸರಕಾರಿ ಬಸ್ಸುಗಳ ಓಡಾಟ ವ್ಯವಸ್ಥೆ ಸರಿ ಇಲ್ಲ ಎಂಬ ಕಾರಣಕ್ಕೆ 2003ರಲ್ಲಿ ಅಂದಿನ ಸರಕಾರ ಖಾಸಗಿ ಬಸ್ಸುಗಳ ಓಡಾಟಕ್ಕೆ ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಿಗೆ ನೀಡಿತ್ತು.ದರ ಏರಿಕೆ ಕುರಿತು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ಶೇಖ ಪ್ರತಿಕ್ರಿಯಿಸಿ, ನಾವು ಉಳಿದ ಬಸ್ಸುಗಳಿಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸುತ್ತಿದ್ದು, ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದಿದ್ದಾರೆ.
ಕೇರಳದ ಬಸ್‌ಗಳಲ್ಲೂ ದರ ಏರಿಕೆ ??
ಕರ್ನಾಟಕಕ್ಕೆ ಕೇರಳ ರಾಜ್ಯ ಸಾರಿಗೆ ಬಸ್ (ಕೆಎಸ್ಸಾರ್ಟಿಸಿ) ಸೇವೆಗಳ ಟಿಕೆಟ್ ದರವನ್ನೂ ಜ. 7ರಿಂದ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಟಿಕೆಟ್ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಕೇರಳವೂ ಟಿಕೆಟ್ ದರ ಹೆಚ್ಚಳಗೊಳಿಸಿದೆ. ಅಂತಾರಾಜ್ಯ ಒಪ್ಪಂದದ ಪ್ರಕಾರ ಎರಡು ರಾಜ್ಯಗಳ ನಡುವೆ ಟಿಕೆಟ್ ದರ ಏಕರೂಪವಾಗಿರಬೇಕೆಂದು ಈ ಹಿಂದೆ ತೀರ್ಮಾನಿಸಲಾಗಿದ್ದು, ಆ ಹಿನ್ನೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.
ಪ್ರಸ್ತುತ ಕಾಸರಗೋಡು-ಮಂಗಳೂರು ಟಿಕೆಟ್ ದರ 74 ರೂ.ಯಿಂದ 81 ರೂ.ಗೇರಿದೆ. ಪುತ್ತೂರಿಗೆ 74 ರೂ. ಇದ್ದುದು 85 ರೂ., ಸುಳ್ಯಕ್ಕೆ 73 ರೂ. ಇದ್ದುದು 80 ರೂ.ಗೆ ಏರಿಕೆಯಾಗಿದೆ.