ಮಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಮಂಗಳೂರು ಕ್ಷೇತ್ರದಲ್ಲಿ ಯು ಟಿ ಖಾದರ್ ಅವರನ್ನು ಹೊರತು ಪಡಿಸಿ ಉಳಿದೆಲ್ಲೆಡೆ ಹೀನಾಯ ಸೋಲು ಅನುಭವಿಸಿತ್ತು. ಇದಕ್ಕೆಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಭವನದಲ್ಲಿ ವಾಸ್ತು ದೋಷವೇ ಕಾರಣವಂತೆ. ವಾಸ್ತು ಸರಿ ಇಲ್ಲದೇ ಇರುವುದೇ ಜಿಲ್ಲೆಯಲ್ಲಿ ಪಕ್ಷ ಇಷ್ಟೊಂದು ಅಧಪತನಕ್ಕೆ ಬರಲು ಕಾರಣವಂತೆ.
ಜಿಲ್ಲೆಯಲ್ಲಿ ಪಕ್ಷ ಸತತ ಸೋಲು ಕಾಣಲು ಕೊನೆಗೂ ಉತ್ತರ ಕಂಡುಕೊಂಡಿದ್ದಾರೆ.
ವಿಷ್ಯಾ ಏನಪ್ಪಾ ಅಂದರೆ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಒಟ್ಟು 8 ಮೆಟ್ಟಿಲುಗಳು ಇದ್ದು, ಲಾಭ ನಷ್ಟದ ಲೆಕ್ಕಾಚಾರ ಹಾಕಿದಾಗ ಕೊನೆಯ ಮೆಟ್ಟಲು ನಷ್ಟ ಬರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಆಗುತ್ತಿಲ್ಲ ಎಂದು ಹಿರಿಯ ವಾಸ್ತು ತಜ್ಞರೊಬ್ಬರು ಹೇಳಿದ್ದಾರಂತೆ.
ಜೊತೆಗೆ ಕಚೇರಿಯಲ್ಲಿ ಇರುವ ಶೌಚಾಲಯವೂ ವಾಸ್ತು ಪ್ರಕಾರ ಇಲ್ಲವಂತೆ. ಇದೇ ಕಾರಣಕ್ಕೆ ಇದೀಗ ಕೆಳಭಾಗದ ಮೆಟ್ಟಲನ್ನು ಒಡೆದು ಹೊಸದಾಗಿ ಇನ್ನೊಂದು ಮೆಟ್ಟಿಲನ್ನು ಜೋಡಿಸುವ ಕಾಮಗಾರಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರ ಅನುಮತಿ ಮೇರೆಗೆ ಈ ಕಾಮಗಾರಿ ನಡೆಯುತ್ತಿದೆ.
ಅದೇನೇ ಇರಲಿ, ವಾಸ್ತು ಬದಲಾವಣೆ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಲಕ್ ಖುಲಾಯಿಸುತ್ತದೆಯೋ ಅನ್ನೋದನ್ನು ಕಾದು ನೋಡಬೇಕಾಗಿದೆ.
2023ರ ಚುನಾವಣೆಯಲ್ಲಾದರೂ ಕಾಂಗ್ರೆಸ್ ಪಕ್ಷ ಮರಳಿ ಗದ್ದುಗೆ ಹಿಡಿಯಲು ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಅನ್ನೋ ಕುತೂಹಲಕ್ಕೆ ವಾಸ್ತು ಪ್ರಕಾರ ಬದಲಾದ ಕಾಂಗ್ರೆಸ್ ಕಚೇರಿ ಮೆಟ್ಟಲೂ ಪೂರಕವಾಗಲಿದೆ.