Saturday, April 1, 2023

ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ಐತಿಹ್ಯವೇ ವಿಶೇಷ…. ಚೆಂಡಿನಾಟ ಪ್ರಿಯೆ ಪೊಳಲಿ ದುರ್ಗೆ, ಕಲ್ಲಂಗಡಿ ಪ್ರಿಯೆ ದೇವಿ..

ಸಪ್ತ ದುರ್ಗೆಯರ ಕ್ಷೇತ್ರಗಳಲ್ಲಿ ಒಂದಾಗಿರುವ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಇದೀಗ ಜಾತ್ರೋತ್ಸವದ ಸಂಭ್ರಮ. ತಿಂಗಳ ಕಾಲ ನಡೆಯುವ ಪೊಳಲಿ ದೇವಿ ಉತ್ಸವ ಚೆಂಡು ಉತ್ಸವವೆಂದೇ ಜನಪ್ರಿಯವಾಗಿದೆ.

ಮಂಗಳೂರು : ಸಪ್ತ ದುರ್ಗೆಯರ ಕ್ಷೇತ್ರಗಳಲ್ಲಿ ಒಂದಾಗಿರುವ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಇದೀಗ ಜಾತ್ರೋತ್ಸವದ ಸಂಭ್ರಮ. ತಿಂಗಳ ಕಾಲ ನಡೆಯುವ ಪೊಳಲಿ ದೇವಿ ಉತ್ಸವ ಚೆಂಡು ಉತ್ಸವವೆಂದೇ ಜನಪ್ರಿಯವಾಗಿದೆ.

ವರ್ಷದ ಜಾತ್ರೆ ಎಷ್ಟು ದಿನವೆಂದು ನಿಗದಿಯಾಗುವುದು ಧ್ವಜಾರೋಹಣವಾದ ಬಳಿಕ. ಬ್ಯಾಂಡ್‌, ವಾಲಗದೊಂದಿಗೆ ನಂದ್ಯ ಮತ್ತು ಉಳಿಪಾಡಿಗುತ್ತಿನ ಮನೆಯಿಂದ ದೇವಸ್ಥಾನಕ್ಕೆ ಭದ್ರಕಾಳಿ ದೇವರ ಸಾನಿಧ್ಯ ಬಂದು ಬಳಿಕ ಕುದಿ ಕರೆಯಲಾಗಿ, ದೇವರ ಅಣತಿಯಂತೆ ಎಷ್ಟು ದಿನಗಳ ಜಾತ್ರೆ ಎಂಬುದನ್ನು ನಿಗದಿಪಡಿಸಲಾಗುತ್ತದೆ.

ಮೀನ ಸಂಕ್ರಮಣದ ದಿವಸ ರಾತ್ರಿ ತೀಯಾ ಸಮುದಾಯದ ಕೇಂದ್ರ ಸ್ಥಳವಾದ ನಂದ್ಯ ಕ್ಷೇತ್ರದಿಂದ ಅರಸುಗಳ ಆಯುಧ, ಭದ್ರಕಾಳಿ ಬಿಂಬ, ಭಗವತಿ ಸಾನಿಧ್ಯ ಹಾಗೂ ವಿಶೇಷವಾಗಿ ತಯಾರಿಸಿದ ಕದಿರು ಮುಡಿ ಹಿಡಿದುಕೊಂಡು ನಂದ್ಯದ ಗುರಿಕಾರರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಎಲ್ಲಾ ಸಮಾಜ ಬಾಂಧವರು ಹಾಗೂ ಸರ್ವ ವರ್ಗದವರನ್ನು ಕೂಡಿಕೊಂಡು ನಂದ್ಯ ಕ್ಷೇತ್ರದಿಂದ ಹೊರಟು ಫಲ್ಗುಣಿ ದೋಣಿ ಮೂಲಕ ನದಿ ದಾಟಿ ಪೊಳಲಿಗೆ ಭದ್ರಕಾಳಿ ಭಂಡಾರ ಬರುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.

ಈ ಎಲ್ಲಾ ಪ್ರಕ್ರಿಯೆಗಳ ಸಮಸ್ತ ಜವಾಬ್ದಾರಿಯನ್ನು ತೀಯಾ ಸಮಾಜದವರು ವಹಿಸಿಕೊಳ್ಳುತ್ತಾರೆ.

ದೇವಸ್ಥಾನಕ್ಕೆ ಸಂಬಂಧಪಟ್ಟ ನಟ್ಟೋಜ ಮನೆತನದವರಲ್ಲಿ ಒಬ್ಬರು ಧ್ವಜಾರೋಹಣದ ಮುನ್ನಾ ದಿನ ಪುತ್ತಿಗೆ ಜೋಯಿಸರಲ್ಲಿ ಹೋಗಿ ದಿನ ನಿಗದಿ ಮಾಡಿ ಬರುತ್ತಾರೆ.

ಧ್ವಜಾರೋಹಣವಾದ ಬಳಿಕ ದೇವಸ್ಥಾನದಲ್ಲಿ ನಡೆಯುವ ಕಂಚು ಬೆಳಕು ಉತ್ಸವದ ನಂತರ ನಟ್ಟೋಜರು ಹಿಂಗಾರವನ್ನು ವಾಲಗದ ಮುಖ್ಯಸ್ಥ ಸೇರಿಗಾರನಿಗೆ ಕೊಟ್ಟು, ಆತನ ಕಿವಿಯಲ್ಲಿ ಎಷ್ಟು ದಿನಗಳ ಜಾತ್ರೆ ಎಂದು ಹೇಳುತ್ತಾರೆ.

ವಾಲಗದ ಮುಖ್ಯಸ್ಥರು ಭೂತ ಪಾತ್ರಿ(ಪಂಬದ)ಗೆ ತಿಳಿಸಿದಾಗ, ಆತ ಗಂಟೆ ಬಾರಿಸುತ್ತಾ ಜಾತ್ರೆ ಎಷ್ಟು ದಿನ ಎಂಬುದನ್ನು ತುಳುವಿನಲ್ಲಿ ತಿಳಿಸುತ್ತಾನೆ.

ಜಾತ್ರೆಯ ಒಟ್ಟು ದಿನ ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತದೆ ಎಂದು ವಿವರಿಸುತ್ತಾರೆ ನಂದ್ಯ ಭಗವತೀ ತಿಯಾ ಸಮಾಜ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ ಜನಾರ್ದನ ಅಮ್ಮುಂಜೆ.

ಚಂಡ ಮುಂಡರನ್ನು ಸಂಹರಿಸಿ ಶ್ರೀ ದೇವಿಯು ಚೆಂಡಾಡಿದ ಪ್ರತೀಕವಾಗಿ ಕ್ಷೇತ್ರದಲ್ಲಿ ಚೆಂಡಿನ ಉತ್ಸವ ನಡೆಯುತ್ತದೆ.

ಚೆಂಡಿನ ಉತ್ಸವಕ್ಕೆ ಮೊದಲು ಪರಂಪರಾಗತವಾಗಿ ಚೆಂಡು ಕಟ್ಟುವ ಕಾಯಕವನ್ನು ಮಿಜಾರಿನ ಸಮಗಾರ ಮನೆತನದವರು ಮಾಡಿ ಶ್ರೀ ದೇವಳಕ್ಕೆ ಒಪ್ಪಿಸುತ್ತಾರೆ.

ದೇವಿಗೆ ಪೂಜೆ ಆದ ಬಳಿಕ ಚೆಂಡನ್ನು ಹಿಡಿದು ಒಂದು ಸುತ್ತು ಸರ್ವ ವಾದ್ಯಗಳೊಂದಿಗೆ ಪ್ರದಕ್ಷಿಣೆ ಬಂದಲ್ಲಿಗೆ ಚೆಂಡಿನ ಉತ್ಸವ ಮುಕ್ತಾಯವಾಗುತ್ತದೆ.

ಪೊಳಲಿ ದೇವಿ ಕಲ್ಲಂಗಡಿ ಹಣ್ಣು ಪ್ರಿಯೆಯಾಗಿದ್ದು, ಬಚ್ಚಂಗಾಯಿಯನ್ನು ಅಮ್ಮನವರಿಗೆ ಅರ್ಪಣೆ ಮಾಡಿ, ಅದನ್ನು ಪ್ರಸಾದ ರೂಪವಾಗಿ ಹಂಚಲಾಗುತ್ತಿದೆ.

ಬಳಿಕ ದೇವಳದ ಆಸುಪಾಸಿನಲ್ಲಿ ಬಚ್ಚಂಗಾಯಿ ಮಾರಾಟ ಆರಂಭಿಸಲಾಗುತ್ತದೆ. ಇಂತಹ ಅಪರೂಪದ ಐತಿಹ್ಯ ಇರುವ ಪೊಳಲಿ ರಾಜರಾಜೇಶ್ವರಿ ದೇವಿ ಉತ್ಸವದಲ್ಲಿ ಪಾಲ್ಗೊಂಡು ನೀವೂ ಧನ್ಯರಾಗಿ.

LEAVE A REPLY

Please enter your comment!
Please enter your name here

Hot Topics