Wednesday, October 5, 2022

ಮಂಗಳೂರು: 4 ಜೀವಗಳ ಹಂತಕ ವಾಮಂಜೂರು ಪ್ರವೀಣ್ ಬಿಡುಗಡೆಗೆ ಕುಟುಂಬಸ್ಥರ ಆಕ್ಷೇಪ

ಮಂಗಳೂರು: 90 ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಂಗಳೂರಿನ ವಾಮಂಜೂರಿನಲ್ಲಿ ನಡೆದ ನಾಲ್ಕು ಮಂದಿಯ ಬರ್ಬರ ಕೊಲೆ ಪ್ರಕರಣದ ಅರೋಪಿ ವಾಮಜೂರು ಪ್ರವೀಣ್‌ ಕುಮಾರ್‌ (62)ನನ್ನು ಈ ವರ್ಷ ಭಾರತದ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶವಾಗಿದೆ.

ಇದಕ್ಕೆ ಆತನಿಂದ ಕೊಲೆಯಾದವರ ಕುಟುಂಬದವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆತನನ್ನು ಬಿಡುಗಡೆ ಮಾಡ ಬಾರದೆಂದು ಹತ್ಯೆಯಾದವರ ಕುಟುಂಬಸ್ಥರ ಪರವಾಗಿ ಸೀತಾರಾಮ ಮತ್ತು ಇತರರು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಮಂಗಳೂರು ಪೊಲೀಸ್‌ ಕಮಿಷನರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ವಾಮಜೂರು ಪ್ರವೀಣ್‌ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದಾನೆ.

ಆರೋಪಿ ಪ್ರವೀಣ್‌ 1994 ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನ ನಿವಾಸಿಗಳು ಹಾಗೂ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ (75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು.


ಪ್ರವೀಣ್‌ ಮೂಲತಃ ಉಪ್ಪಿನಂಗಡಿ ಸಮೀಪದ ಹೆರಿಯಡ್ಕ ನಿವಾಸಿಯಾಗಿದ್ದು, ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದನು. ಸಿಂಗಲ್‌ ನಂಬರ್‌ ಲಾಟರಿ ಟಿಕೆಟ್‌ ಖರೀದಿಯ ಚಟಕ್ಕೆ ಅಂಟಿಕೊಂಡಿದ್ದ ಆತ ಹಣಕಾಸಿನ ಬಿಕ್ಕಟ್ಟಿನಲ್ಲಿದ್ದ.


ಇದಕ್ಕಾಗಿ ಪತ್ನಿ ಮತ್ತು ಕುಟುಂಬದ ಸದಸ್ಯರ ಚಿನ್ನಾಭರಣಗಳನ್ನು ಅಡವು ಇರಿಸಿದ್ದನು ಮಾತ್ರವಲ್ಲದೆ ವಿವಿಧ ಮೂಲಗಳಿಂದ ಸಾಲವನ್ನೂ ಎತ್ತಿದ್ದನು. ಇಷ್ಟಾದರೂ ಕೈಯಲ್ಲಿ ಹಣವಿಲ್ಲದೆ ಅರ್ಥಿಕವಾಗಿ ಸಂಕಷ್ಟದಲ್ಲಿದ್ದನು.

1994 ಫೆಬ್ರವರಿ 23 ರಂದು ಸಂಜೆ ವಾಮಂಜೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಆತ ರಾತ್ರಿ ಅಲ್ಲಿಯೇ ಮಲಗಿದ್ದ. ಮಧ್ಯ ರಾತ್ರಿ ಎದ್ದು ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕನ ಸಹಿತ 4 ಮಂದಿಯನ್ನು ಹಾರೆಯ ಹಿಡಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಮನೆ ಮಂದಿಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು. ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.


ಕೊಲೆ ಕೃತ್ಯ ಎಸಗಿದ್ದ ಬಗ್ಗೆ ಆತ ತಪ್ಪೊಪ್ಪಿಕೊಡಿದ್ದು, ಕಳವು ಮಾಡಿದ್ದ ಚಿನ್ನಾಭರಣಗಳನ್ನು ಆತ ಬಚ್ಚಿಟ್ಟಲ್ಲಿಂದ ವಶಪಡಿಸಿಕೊಳ್ಳಲಾಗಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ವಿಚಾರಣೆಗಾಗಿ ಬೆಳಗಾವಿಯ ಹಿಂಡಲಗ ಜೈಲಿನಿಂದ ಮಂಗಳೂರು ಜೈಲಿಗೆ ಕರೆತರುತ್ತಿದ್ದಾಗ ಹುಬ್ಬಳ್ಳಿಯ ಕುಂದಗೋಳದಲ್ಲಿ ಹೊಟೇಲ್‌ ಒಂದರಲ್ಲಿ ಊಟ ಮಾಡುತ್ತಿದ್ದ ವೇಳೆ ಬೆಂಗಾವಲು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದನು.

ಈ ಸಂದರ್ಭದಲ್ಲಿ ಆತ ಎಲ್ಲಿದ್ದಾನೆಂದು ಸುಳಿವು ನೀಡುವವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಸಂತ್ರಸ್ತರ ಕುಟುಂಬದವರು ಘೋಷಿಸಿದ್ದರು. ತಪ್ಪಿಸಿಕೊಂಡಿದ್ದ ಪ್ರವೀಣ್‌ ಗೋವಾಕ್ಕೆ ತೆರಳಿ ಅಲ್ಲಿ ಬೇರೆ ಹೆಸರಿನಲ್ಲಿ ಅಡಗಿಕೊಂಡಿದ್ದು, ಯುವತಿಯೋರ್ವಳನ್ನು ಪುಸಲಾಯಿಸಿ ಮದುವೆಯಾಗಿದ್ದಲ್ಲದೆ ಅಕೆಗೆ ಮಗುವೊಂದನ್ನು ಕರುಣಿಸಿದ್ದನು.

1999 ರಲ್ಲಿ ಮಂಗಳೂರಿನ ಇನ್ಸ್‌ಪೆಕ್ಟರ್‌ ಜಯಂತ್‌ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಪುನಃ ಜೈಲಿಗಟ್ಟಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಆತನಿಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಕೆಳಗಿನ ಕೋರ್ಟು ನೀಡಿದ ಈ ಶಿಕ್ಷೆಯನ್ನು ಬಳಿಕ ಹೈಕೋರ್ಟು ಮತ್ತು 2003 ರಲ್ಲಿ ಸುಪ್ರೀಂ ಕೋರ್ಟು ಕೂಡಾ ಎತ್ತಿ ಹಿಡಿದಿತ್ತು. ಮರಣ ದಂಡನೆಯ ಶಿಕ್ಷೆಯ ಬಳಿಕ ಆತ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದ.

ಈ ಅರ್ಜಿಯನ್ನು 2013 ಎಪ್ರಿಲ್‌ 4 ರಂದು ರಾಷ್ಟ್ರಪತಿಯವರು ತಿರಸ್ಕರಿಸಿದ್ದರು. ಆದರೆ 2014 ಜನವರಿ 22 ರಂದು ಸುಪ್ರೀಂ ಕೋರ್ಟು ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಇದೀಗ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಸರಕಾರವು ಕೆಲವು ಜನ ಕೈದಿಗಳಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯವನ್ನು ಕಲ್ಪಿಸಿದ್ದು, ಹೀಗೆ ಬಿಡುಗಡೆಯಾಗುವವರ ಪಟ್ಟಿಯಲ್ಲಿ ವಾಮಂಜೂರು ಪ್ರವೀಣನೂ ಒಬ್ಭನಾಗಿದ್ದಾನೆ.

ಕಳೆದ 28 ವರ್ಷಗಳಿಂದ ಜೈಲಿನಲ್ಲಿ ಇರುವ ಆತನನ್ನು ಬಿಡುಗಡೆ ಮಾಡುವ ಬಗ್ಗೆ ಸಂತ್ರಸ್ತ ಕುಟುಂಬದವರ ಪರವಾಗಿ ಗುರುಪುರದ ಸೀತಾರಾಮ ಅವರು ಆತಂಕ ಹಾಗೂ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇವಲ 80,000 ರೂಪಾಯಿ ಹಣದ ಆಶೆಗಾಗಿ ನನ್ನ 75 ವರ್ಷ ಪ್ರಾಯದ ವೃದ್ಧ ತಾಯಿ, 36 ವರ್ಷ ಪ್ರಾಯದ ತಂಗಿ, 30 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ಸಹೋದರ, ಹಾಗೂ 9 ವರ್ಷದ ಮುಗ್ದ ಬಾಲಕಿಯನ್ನು ಅಮಾನುಷವಾಗಿ ಕೊಲೆಗೈದ ಆತ ಜೈಲಿನಿಂದ ಹೊರಗೆ ಬಂದರೆ ಸಮಾಜಕ್ಕೆ ಅಪಾಯವಿದೆ ಎಂಬ ಭೀತಿ ನಮಗಿದೆ. ಸ್ವತಃ ಪ್ರವೀಣನ ಕುಟುಂಬದವರಿಗೂ ಆತ ಜೈಲಿನಿಂದ ಹೊರಗೆ ಬರುವುದರ ಬಗ್ಗೆ ಆತಂಕವಿದೆ.

ಆತನನ್ನು ಬಿಡುಗಡೆ ಮಾಡ ಬಾರದು. ಇಂತಹ ವ್ಯಕ್ತಿಯನ್ನು ಬಿಡುಗಡೆ ಮಾಡುವುದು ಸ್ವಾತಂತ್ಯ್ರೋತ್ಸವದ ಅಮೃತೋತ್ಸವಕ್ಕೆ ಅವಮಾನ ಎಂದವರು ತಿಳಿಸಿದ್ದಾರೆ.

 

1 COMMENT

LEAVE A REPLY

Please enter your comment!
Please enter your name here

Hot Topics

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...

‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಗಂಟೆಗೆ ಶಾರದಾ...