ಮಂಗಳೂರು: ಕೋಳಿ ಮಾಂಸ ಸೇವನೆಯಿಂದ ‘ಕೋವಿಡ್-19’ (ಕೊರೊನಾ) ಸೋಂಕು ತಗುಲುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಿದ ವದಂತಿಯಿಂದಾಗಿ ಕರಾವಳಿ ಭಾಗದಲ್ಲಿ ಕುಕ್ಕುಟೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿರುವುದರಿಂದ ಬೆಲೆಯಲ್ಲೂ ದಾಖಲೆಯ ಇಳಿಕೆ ಕಂಡಿದ್ದು, ಉದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.
ಮೂರು ವಾರಗಳಿಂದ ಕೋಳಿ ಮಾಂಸದ ಬೆಲೆಯು ಇಳಿಮುಖವಾಗಿದ್ದು, ಮೂರ್ನಾಲ್ಕು ದಿನಗಳಿಂದ 1 ಕೆ.ಜಿ ಮಾಂಸವು 100ರ ಆಸುಪಾಸಿನಲ್ಲಿ ಧಾರಣೆಯಾಗುತ್ತಿದೆ.
ಧಾರಣೆ ಕುಸಿತವಾದರೂ ಮಾಂಸಕ್ಕೆ ಬೇಡಿಕೆ ಹೆಚ್ಚಳವಾಗದಿರುವುದು ಕುಕ್ಕುಟೋದ್ಯಮಿಗಳನ್ನು ಚಿಂತೆಗೀಡು ಮಾಡಿದೆ.
“20 ದಿನಗಳಿಂದ ಕರಾವಳಿಯಲ್ಲಿ ಕುಕ್ಕುಟೋದ್ಯಮ ಅಕ್ಷರಶಃ ನಲುಗಿದೆ. ಉದ್ಯಮಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಇಷ್ಟು ದಿನ ಕಳೆದರೂ ಉದ್ಯಮ ಚೇತರಿಸುವ ಲಕ್ಷಣ ಕಾಣಿಸುತ್ತಿಲ್ಲ. ಇದೇ ಪರಿಸ್ಥಿತಿ ಒಂದೆರಡು ತಿಂಗಳು ಮುಂದುವರಿದರೆ ಕರಾವಳಿಯಲ್ಲಿ ಉದ್ಯಮವೇ ನಿರ್ನಾಮವಾದರೂ ಅಚ್ಚರಿಯಿಲ್ಲ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ಚಿಕನ್ ಮಾಲೀಕರೊಬ್ಬರು.
“ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿದಾಗ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು. ಇಲ್ಲಿಯವರೆಗೆ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಕುಕ್ಕುಟೋದ್ಯಮ ಅಳಿದರೆ ಅದರ ನೇರ ಪರಿಣಾಮ ಕೃಷಿಯ ಮೇಲೆ ಬೀಳುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು.
ಕುಕ್ಕುಟೋದ್ಯಮ ತತ್ತರವಾಗಿರುವುದರ ಪರಿಣಾಮವಾಗಿ ಇಂದು ಜೋಳದ ಬೆಲೆಯೂ ಇಳಿಕೆಯಾಗಿದೆ. ಇದೇ ರೀತಿ ಒಂದೊಂದೇ ಕೃಷಿ ಉತ್ಪನ್ನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕುಕ್ಕುಟೋದ್ಯಮದ ನೆರವಿಗೆ ಬರಲಿ” ಎಂದವರು ಮನವಿ ಮಾಡಿದ್ದಾರೆ.
“ಪ್ರಕೃತಿದತ್ತವಾಗಿ ಸಿಗುವ ಮತ್ಸೋತ್ಸಮಕ್ಕೆ ಸರ್ಕಾರದಿಂದ ತೆರಿಗೆ ವಿನಾಯಿತಿ, ಸಹಾಯಧನ ಲಭ್ಯವಿದೆ. ಅದೇ ಕುಕ್ಕುಟೋದ್ಯಮಕ್ಕೆ ಸರ್ಕಾರದಿಂದ ಒಂದೇ ಒಂದು ರೂಪಾಯಿ ಸಹಾಯಧನ ಸಿಗುತ್ತಿಲ್ಲ.
ಮಾತ್ರವಲ್ಲ, ಪ್ರತಿಯೊಂದಕ್ಕೂ ತೆರಿಗೆಯ ಮೇಲೆ ತೆರಿಗೆಯನ್ನು ವಸೂಲು ಮಾಡಲಾಗುತ್ತಿದೆ. ಸರ್ಕಾರ ಈಗಲೂ ನಮ್ಮ ಕೈಹಿಡಿಯದಿದ್ದರೆ ಹಂತ ಹಂತವಾಗಿ ಕೋಳಿ ಸಾಕಣೆ ಘಟಕಗಳನ್ನು ಮುಚ್ಚುವುದು ಅನಿವಾರ್ಯವಾಗುತ್ತದೆ” ಎಂದು ಕೋಳಿ ಅಂಗಡಿ ಮಾಲೀಕ ಆತಂಕ ವ್ಯಕ್ತಪಡಿಸಿದ್ದಾರೆ.
“ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಗಾ ಇಡಬೇಕು. ವದಂತಿಗಳನ್ನು ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾರೋ ಮಾಡಿದ ತಪ್ಪಿನಿಂದಾಗಿ ಇಡೀ ಕುಕ್ಕುಟೋದ್ಯಮವು ಅಳಿವು– ಉಳಿವಿನ ಅಂಚಿನಲ್ಲಿದೆ.
ಕರಾವಳಿಯಲ್ಲಿ ಸಾವಿರಾರು ಕುಟುಂಬಗಳು ಇದೇ ಉದ್ಯಮವನ್ನು ನಂಬಿಕೊಂಡು ಬದುಕುತ್ತಿವೆ. ಈ ಉದ್ಯಮದ ನೆರವಿಗೆ ಸರ್ಕಾರ ತಕ್ಷಣ ಬರಬೇಕು ಎಂದು ಮತ್ತೋರ್ವ ಕೋಳಿ ಸಾಕಾಣೆಗಾರರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಿಂಗಳ ಹಿಂದೆ ಕೋಳಿ ಮೊಟ್ಟೆಯೊಂದಕ್ಕೆ ರೂ.5 ರಿಂದ ರೂ5.30ರಲ್ಲಿ ಧಾರಣೆಯಾಗುತ್ತಿತ್ತು.
ಕೊರೊನಾ ವದಂತಿಯೂ ಕೋಳಿ ಮೊಟ್ಟೆ ಧಾರಣೆ ಮೇಲೂ ಪರಿಣಾಮ ಬೀರಿದೆ.
ಹೀಗಾಗಿ, ಮೊಟ್ಟೆಯ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ, ಇದೀಗ ಬೆಲೆ ರೂ. 4ರಿಂದ ರೂ. 4.50ರ ಆಸುಪಾಸಿನಲ್ಲಿ ಧಾರಣೆಯಾಗುತ್ತಿದೆ.
“ಸದ್ಯ ಕೋಳಿ ಮಾಂಸ ಸೇವನೆಯಿಂದ ‘ಕೋವಿಡ್-19’ ಸೋಂಕು ಹರಡುವುದಿಲ್ಲ. ವದಂತಿಯನ್ನು ಯಾರೂ ನಂಬಬೇಡಿ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಜಿಲ್ಲೆಯ ಜನತೆಗೆ ತಿಳಿಸಿದ್ದಾರೆ.
ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗ ದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಯಕ್ಷದ್ರುವ ವಿದ್ಯಾರ್ಥಿ ಸಮ್ಮಿಲನ-2025’ ಕಾರ್ಯಕ್ರಮವು ಬುಧವಾರ ಗಂಜಿಮಠದ ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ನಡೆಯಿತು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಡಾ.ಭರತ್ ಶೆಟ್ಟಿ, ದೀಪಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಯಕ್ಷಧ್ರುವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ದೇವದಾಸ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಯಕ್ಷಧ್ರುವ – ಯಕ್ಷಶಿಕ್ಷಣದಲ್ಲಿ ತರಬೇತಿ ಪಡೆದ ಸುಮಾರು 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ರಂಗ ಪ್ರವೇಶ ಮಾಡಿದರು. ಬಂಟ್ವಾಳ ಕ್ಷೇತ್ರದ 10 ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರದ 10 ಸರಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರತ್ಯೇಕ ಪ್ರತ್ಯೇಕವಾದ ಎರಡು ರಂಗಸ್ಥಳದಲ್ಲಿ ತಮ್ಮ ಪ್ರದರ್ಶನ ನೀಡಿದರು.
ಕೀರ್ತಿಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರದ 10 ಶಾಲೆಯ ವಿದ್ಯಾರ್ಥಿಗಳು ಹಾಗೂ ಕೀರ್ತಿಶೇಷ ಡಾ. ವೈ. ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಉತ್ತರ ಕ್ಷೇತ್ರದ 11 ಶಾಲೆಗಳ ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದರು.
ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಬಳಿ ಇರುವ ಹೊಸಬೆಟ್ಟು ಬೀಚ್ ನ ನಿರ್ಮಾಣ ಹಂತದ ಜೆಟ್ಟಿ ಬಳಿ ಇರುವ ಬೀಚ್ ಗೆ ಪ್ರವಾಸಕ್ಕೆ ಬಂದ ಮೂವರು ಯುವಕರು ನೀರುಪಾಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್ ಎಸ್(31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್, ಬೆಂಗಳೂರು ಜೆಪಿ ನಗರ ನಿವಾಸಿ ಸತ್ಯವೇಲು(30) ಹಾಗೂ ಬೀದರ್ ಜಿಲ್ಲೆ ಹಂಗಾರಗಾ ನಿವಾಸಿ ಪರಮೇಶ್ವರ್ (30 ) ಎಂಬವರು ಬೀಚಿಗೆ ತಿರುಗಾಡಲು ಬಂದಿದ್ದು, ಸಮುದ್ರದಲ್ಲಿ ಈಜಾಟಕ್ಕೆ ಇಳಿದ ವೇಳೆ ಈ ದುರಂತ ಸಂಭವಿಸಿದೆ.
ನಾಲ್ವರು ನೀರಿನಲ್ಲಿ ಮುಳುಗುತ್ತಿದ್ದ ವೇಳೆ ಸ್ಥಳೀಯ ಮೀನುಗಾರರು ಹಂಗಾರಗಾ ನಿವಾಸಿ ವಿಶ್ವಂಬರ್ ಎಂಬವರ ಪುತ್ರ ಪರಮೇಶ್ವರ(30) ನನ್ನು ರಕ್ಷಿಸಿದ್ದಾರೆ. ಮೃತಪಟ್ಟವರನ್ನು ಚಿತ್ರದುರ್ಗ ಜಿಲ್ಲೆಯ ಮಂಜುನಾಥ ಎಸ್ ಮತ್ತು ಶಿವಮೊಗ್ಗದ ಶಿವಕುಮಾರ್ ಎಂದು ಗುರುತಿಸಲಾಗಿದೆ.
ಚಿತ್ರದುರ್ಗದ ಮಂಜುನಾಥ ನೀರುಪಾಲಾಗಿದ್ದು, ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಎರಡು ಶವಗಳನ್ನು ನಗರದ ಎ.ಜೆ.ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು/ಒಟ್ಟಾವ : ಜಸ್ಟಿನ್ ಟ್ರುಡೊ ರಾಜೀನಾಮೆಯ ನಂತರ, ಭಾರತೀಯ ಮೂಲದ ಅನಿತಾ ಆನಂದ್ ಕೆನಡಾದ ಮುಂದಿನ ಪ್ರಧಾನ ಮಂತ್ರಿಯಾಗುವ ರೇಸ್ ನಲ್ಲಿದ್ದಾರೆ. ಆನಂದ್ ಅವರಿಗೆ ಭಾರತದೊಂದಿಗೆ ಆಳವಾದ ಸಂಬಂಧವಿದೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸುಮಾರು ಒಂದು ದಶಕದ ಆಡಳಿತ ನಂತರ ಸೋಮವಾರ (ಜ.6) ರಾಜೀನಾಮೆ ನೀಡಿದರು. ಇದರಿಂದಾಗಿ ರಾಜಕೀಯ ವಲಯದಲ್ಲಿ ಸಂಚಲನ ಜೋರಾಗಿದೆ. ಅವರ ಉತ್ತರಾಧಿಕಾರಿ ಬಗ್ಗೆ ಚರ್ಚೆ ಶುರುವಾಗಿದೆ.
ಕೆನಡಾದ ಮುಂದಿನ ಪ್ರಧಾನಿ ರೇಸ್ ನಲ್ಲಿ ಅನಿತಾ ಆನಂದ್, ಕ್ರಿಸ್ಟಿನಾ ಫ್ರೀಲ್ಯಾಂಡ್ ಮತ್ತು ಮಾರ್ಕ್ ಕೆರ್ನಿ ಅವರಂತಹ ಪ್ರಮುಖ ಹೆಸರುಗಳು ಹೊರಹೊಮ್ಮುತ್ತಿವೆ. ಇವರಲ್ಲಿ ಭಾರತೀಯ ಮೂಲದ ನಾಯಕಿ ಅನಿತಾ ಆನಂದ್ ಅವರ ಪರಿಣಾಮಕಾರಿ ಆಡಳಿತ ಮತ್ತು ಸಾರ್ವಜನಿಕ ಸೇವೆಯ ಉತ್ತಮ ದಾಖಲೆಯಿಂದಾಗಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಹಲವಾರು ಖಾತೆ ನಿರ್ವಹಣೆ
2019ರಿಂದ ಸಂಸದರಾಗಿರುವ ಅನಿತಾ ಆನಂದ್ ಕೆನಡಾದ ಲಿಬರಲ್ ಪಾರ್ಟಿಯ ಹಿರಿಯ ಸದಸ್ಯೆ. ಸಾರ್ವಜನಿಕ ಸೇವೆ ಮತ್ತು ನೇಮಕಾತಿ, ರಾಷ್ಟ್ರೀಯ ರಕ್ಷಣೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಖಜಾನೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರಿಂದ ಅವರು ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿದ್ದಾರೆ.
ಭಾರತದಿಂದ ಕೆನಾಡಾಗೆ ವಲಸೆ
ಅನಿತಾ ಆನಂದ್ ರವರ ತಂದೆ ಎಸ್.ವಿ.ಆನಂದ್ ತಮಿಳುನಾಡಿನವರು, ತಾಯಿ ಸರೋಜ್ ಡಿ ರಾಮ್ ಪಂಜಾಬಿನವರು. ಇಬ್ಬರು ವೈದ್ಯರಾಗಿದ್ದರು. 1960ರ ದಶಕದ ಆರಂಭದಲ್ಲಿ ಭಾರತದಿಂದ ಕೆನಡಾಗೆ ವಲಸೆ ಬಂದಿದ್ದರು. ವೈದ್ಯ ದಂಪತಿಯ ಪುತ್ರಿಯಾಗಿ 1967ರ ಮೇ 20ರಂದು ಜನಿಸಿದ ಅನಿತಾ, ವಿದ್ಯಾರ್ಥಿ ಜೀವನದಿಂದಲೂ ತಮ್ಮ ಪೋಷಕರಿಂದ ಮೌಲ್ಯಗಳನ್ನು ರೂಡಿಸಿಕೊಂಡಿದ್ದರು ಮತ್ತು ವೃತ್ತಿಸಂಹಿತೆಯನ್ನು ಅಳವಡಿಸಿಕೊಂಡಿದ್ದರು.
ಅನಿತಾರ ವಿದ್ಯಾಭ್ಯಾಸ
57 ವರ್ಷದ ಅನಿತಾ ಆನಂದ್ ಪ್ರಸ್ತುತ ಕೆನಡಾ ದೇಶದ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶೈಕ್ಷಣಿಕ ಮತ್ತು ರಾಜಕೀಯ ಹಿನ್ನೆಲೆಯಿಂದಾಗಿ, ಅವರು ಪ್ರಮುಖ ರಾಜಕೀಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅನಿತಾ ಆನಂದ್ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಜ್ಯೂರಿಸ್ ಪ್ರೂಡೆನ್ಸ್, ಡಾಲ್ ಹೌಸಿ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಲಾಸ್ ಅನ್ನು ಹೊಂದಿದ್ದಾರೆ.
ಹೆಚ್ಚುವರಿಯಾಗಿ, ಅವರು ಯೇಲ್, ಕ್ವೀನ್ಸ್ ವಿಶ್ವವಿದ್ಯಾಲಯ ಮತ್ತು ವೆಸ್ಟರ್ಸ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿಸಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿದ್ದರು.
ಸ್ಕೋಟಿಯಾದಿಂದ ಒಂಟಾರಿಯೊಗೆ ಸ್ಥಳಾಂತರ
ಅನಿತಾ ಅವರು ಓಕ್ ವಿಲ್ಲೆಯ ಸಂಸದೆಯಾಗಿದ್ದರು. ನೋವಾ ಸ್ಕೋಟಿಯಾದಲ್ಲಿ ಜನಿಸಿದ್ದ ಅನಿತಾ ಆನಂದ್, 1985ರಲ್ಲಿ ಒಂಟಾರಿಯೊಗೆ ಸ್ಥಳಾಂತರಗೊಂಡಿದ್ದರು. ಅನಿತಾ ಮತ್ತು ಪತಿ ಜಾನ್ ಅವರೊಂದಿಗೆ ನಾಲ್ವರು ಮಕ್ಕಳನ್ನು ಬೆಳೆಸಿದರು.
ವೃದ್ದಿಸುತ್ತಾ ಎರಡು ದೇಶಗಳ ಸಂಬಂಧ
ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮೂಲದ ಜನರಿದ್ದಾರೆ. ಈ ಕಾರಣಕ್ಕಾಗಿ, ಭಾರತೀಯ ಮೂಲದ ವ್ಯಕ್ತಿ ಪ್ರಧಾನಿಯಾಗುವುದು ಭಾರತಕ್ಕೆ ಒಳ್ಳೆಯ ಸಂಕೇತಗಳನ್ನು ನೀಡಬಹುದು. ಈ ಹಿಂದೆ, ಟ್ರುಡೊ ಅವರ ಆಳ್ವಿಕೆಯಲ್ಲಿ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಭಾರತದ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು, ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟವು.
ಈಗ ಭಾರತ ಮೂಲದವರೇ ಆದ ಅನಿತಾ ಆನಂದ್ ರವರು ಕೆನಡಾ ದೇಶದ ಪ್ರಧಾನಿಯಾದರೆ ಭಾರತ ಮತ್ತು ಕೆನಡಾ ದೇಶಗಳ ಸಂಬಂಧ ಇನ್ನಷ್ಟು ವೃದ್ದಿಯಾಗಲಿದೆ.