ಮಂಗಳೂರು: ಸ್ವಾತಂತ್ರ್ಯೋತ್ಸವದ ಆಚರಣೆ ಹಿನ್ನೆಲೆ ಶಾಲೆಯೊಂದರಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಪೂರಕವಾಗಿ ನಡೆಸಿದ ಮಕ್ಕಳ ನೃತ್ಯ ಪ್ರದರ್ಶನವನ್ನು ಎಸ್‌ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಸ್ಥಗಿತಗೊಳಿಸಿದ್ದಾರೆನ್ನುವ ಆರೋಪ ವ್ಯಕ್ತವಾದ ಘಟನೆ ಮಂಗಳೂರಿನ ಗುರುಪುರದಲ್ಲಿ ನಡೆದಿದೆ.
ಆಝಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ನಿನ್ನೆ ಎಲ್ಲೆಡೆ ಸಡಗರದಿಂದ ನಡೆದಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎಲ್ಲೆಡೆ ಜನತೆ ಐಕ್ಯತೆಯ, ಸೌಹಾರ್ದತೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದರೆ,
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಂಗಳೂರು ನಗರ ಹೊರವಲಯದ ಗುರುಪುರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನದ ವೇಳೆ ಶಾಲಾ ಮಕ್ಕಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮಗಾಂಧೀಜಿ, ಭಗತ್ ಸಿಂಗ್, ರಾಣಿ ಅಬ್ಬಕ್ಕ ಇತ್ಯಾದಿ ವೀರ ನಾಯಕರ ಭಾವಚಿತ್ರಗಳನ್ನು ಪ್ರದರ್ಶನ ಮಾಡಿದ್ದಾರೆ.
ಅದರಂತೆ ವೀರ ಸಾವರ್ಕರ್ ಭಾವಚಿತ್ರ ಪ್ರದರ್ಶನ ಮಾಡಿದ್ದಾರೆ. ಮಕ್ಕಳು ಭಾರತಾಂಬೆಯ ಭಾವಚಿತ್ರದೊಳಗೆ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಳಸಿದ್ದು, ಅದರಲ್ಲಿ ಸಾವರ್ಕರ್ ಅವರ ಫೋಟೋ ಕೂಡಾ ಇತ್ತು.
ಇದಕ್ಕೆ ಕಾರ್ಯಕ್ರಮದಲ್ಲಿ ಹಾಜರಿದ್ದ ಗುರುಪುರ ಗ್ರಾಮ ಪಂಚಾಯತಿನ ಎಸ್‌ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಶಿಕ್ಷಣ ಸಂಸ್ಥೆಯಿಂದ ಕ್ಷಮಾಪಣೆ ಕೇಳಿಸಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದಾರೆ ಎನ್ನುವ ವಿಚಾರ ಅರಿತ ಹಿಂದು ಸಂಘಟನೆಗಳ ನಾಯಕರು ಶಾಲೆಗೆ ಬಂದು ಮತ್ತೆ ಶಾಲಾಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವೀರ ಸಾರ್ವಕರ್ ಸ್ವಾತಂತ್ರ್ಯೋಸ್ಕರ ಮಾಡಿದ ತ್ಯಾಗ, ಬಲಿದಾನವನ್ನು ಮರೆಯುವಂತಿಲ್ಲ. ಆದರೆ ಮಕ್ಕಳ ನೃತ್ಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಶಿಕ್ಷಕರಿಂದ ಕ್ಷಮಾಪಣೆ ಕೇಳಿದ ಅವರ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.