DAKSHINA KANNADA
ಪಂಪ್ ವೆಲ್ ಭಿನ್ನ ಕೋಮಿನ ಜೋಡಿ ಹಲ್ಲೆ ಪ್ರಕರಣ : ಸಂಘಟನೆಯ ನಾಲ್ವರು ಆರೋಪಿಗಳು ಅರೆಸ್ಟ್..!
ಮಂಗಳೂರು : ಮಂಗಳೂರು ನಗರದ ಪಂಪ್ ವೆಲ್ ಬಳಿ ಖಾಸಾಗಿ ಬಸ್ ನಲ್ಲಿ ಅನ್ಯ ಕೋಮಿನ ಯುವಕನೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ಹಿಂದೂ ಯುವತಿ ಮತ್ತು ಮುಸ್ಲೀಂ ಯುವಕನನ್ನು ಬಸ್ ನಿಂದ ಕೆಳಗಿಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೇಯ ಪೊಲೀಸರು ಬಂಧಿಸಿದ್ದಾರೆ.
ಅತ್ತಾವರ ಬಾಬುಗುಡ್ಡೆಯ ಬಾಲಚಂದ್ರ @ ಬಾಲು, ಕಂದುಕದ ಸಂತು ಅಲಿಯಾಸ್ ಧನುಷ್ ಭಂಡಾರಿ, ಶಕ್ತಿನಗರದ ಜಯಪ್ರಕಾಶ್, ಉರ್ವಾ ಮಾರಿಗುಡಿ ಸಮೀಪದ ಅನಿಲ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಎಲ್ಲಾ ಆರೋಪಿಗಳು ಈ ಹಿಂದೆ ಕೂಡ ಅನೇಕ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದು ಕ್ರಮಿನಲ್ ಹಿನ್ನೆಲೆ ಉಳ್ಳವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಅತ್ತಾವರ ಬಾಬುಗುಡ್ಡೆಯ ಬಾಲಚಂದ್ರ @ ಬಾಲು ವಿರುದ್ದ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ತಲಾ ಒಂದು ಪ್ರಕರಣ,ಧನುಷ್ ಭಂಡಾರಿ, @ ಕಂದುಕ ಧನು ಸಂತು ವಿರುದ್ದ 4 ಪ್ರಕರಣಗಳು ದಾಖಲಾಗಿದ್ದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 1 ಕೊಲೆ ಪ್ರಕರಣ, ಆರ್.ಪಿ.ಎಫ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ. ಈತನ ವಿರುದ್ದ ಮಂಗಳೂರು ದಕ್ಷಿಣ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿರುತ್ತದೆ, ಮೂರನೇ ಆರೋಪಿ ಜಯಪ್ರಶಾಂತ್ ವಿರುದ್ದ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ 01, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 01 ಹಾಗೂ ಕಂಕನಾಡಿ ನಗರ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿದೆ. ಇನ್ನು ನಾಲ್ಕನೇ ಆರೋಪಿ ಅನೀಲ್ ಕುಮಾರ್ ವಿರುದ್ದ ಮಂಗಳೂರು ದಕ್ಷಿಣ ಠಾಣೆಯಲ್ಲಿ 1 ಹಲ್ಲೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೇಲ್ಕಂಡ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು
ಗುರುವಾರ ರಾತ್ರಿ ಮಂಗಳೂರಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಮುಸ್ಲಿಂ ಯುವಕನೊಂದಿಗೆ ಇದ್ದ ಹಿಂದೂ ಯುವತಿಯನ್ನು ಪಂಪ್ ವೆಲ್ ನಲ್ಲಿ ಬಸ್ ತಡೆದು ಬಜರಂಗದಳ ದಾಳಿ ನಡೆಸಿ ಅವರ ಮೇಲೆ ತೀವ್ರ ಹಲ್ಲೆ ಕೂಡ ನಡೆಸಿ ತಂಡ ಪರಾರಿಯಾಗಿತ್ತು.ಯುವಕ ನಗರದ ಖಾಸಗಿ ಆಸ್ಫತ್ರೆಗೆ ದಾಖಲಾಗಿ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿ ಕೇಸು ಕೂಡ ದಾಖಲಾಗಿತ್ತು. ಬಸ್ಸು ನಿಲ್ದಾಣದ ಬಳಿಯಿಂದ ಸ್ನೇಹಿತ ಅಸ್ವಿದ್ ಅನ್ವರ್ ಮೊಹಮ್ಮದ್ ಜೊತೆ ಕಾವೇರಿ ಬಸ್ಸಿನಲ್ಲಿ ಬೆಂಗಳೂರು ಕಡೆಗೆ ಬರುತ್ತಿದ್ದು ಬಸ್ಸು ಕಪಿತಾನಿಯ ಬಳಿ ತಲುಪಿದಾಗ ಅಪರಿಚಿತ 5-6 ಜನ ಯುವಕರು ಬಸ್ಸನ್ನು ತಡೆದು ಬಸ್ಸಿನ ಒಳಗಡೆ ಬಂದು ಪಿಯ್ಯಾದಿದಾರರನ್ನು ಎಳೆದಾಡಿದ್ದು ಅಲ್ಲದೇ ಸ್ನೇಹಿತ ಅಸ್ವಿದ್ ಅನ್ವರ್ ಮೊಹಮ್ಮದ್ ನ್ನು ಹೊರಗಡೆ ಎಳೆದು ನೀನು ಹಿಂದು ಹುಡುಗಿಯನ್ನು ಬಾರಿ ಕರೆದುಕೊಂಡು ಹೋಗುತ್ತಿಯ ಎಂದು ಅವಾಧ್ಯ ಶಬ್ದಗಳಿಂದ ಬೈದು ಮಾರಣಾಂತಿಕ ಹಲ್ಲೆ ಕೊಲೆಯತ್ನ ಮಾಡಿದ್ದು ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಅಕ್ರ 45/2021 ರಂತೆ ಪ್ರಕರಣ ದಾಖಲಾಗಿತ್ತು.
BELTHANGADY
ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!
ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.
Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ
ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
DAKSHINA KANNADA
ತ್ರಿಶೂರ್ ಪೂರಂ..! ದೇಶದ ಹೆಮ್ಮೆಯ ಉತ್ಸವ..!
ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ದೇಶ ಹಲವು ಸಂಸ್ಕೃತಿ, ಕಲೆ, ಆಚರಣೆ, ಭಾಷೆ, ಜಾತಿ, ಧರ್ಮದ ಮೂಲಕ ವಿಶ್ವದ ಗಮನ ಸೆಳೆದಿದೆ. ದಿಪಾವಳಿ, ಹೋಳಿ, ಈದ್ , ಕ್ರಿಸ್ಮಸ್, ಹೀಗೆ ಹಲವು ಹಬ್ಬಗಳು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಆದ್ರೆ, ಇನ್ನೂ ಕೆಲವು ಹಬ್ಬಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಅದರಲ್ಲಿ ವಿಶೇಷ ಹಬ್ಬವಾಗಿ ಕೇರಳದಲ್ಲಿ ಆಚರಿಸುವ ತ್ರಿಶೂರ್ ಪೂರಂ ಸದ್ಯ ಏಷ್ಯಾದಲ್ಲೇ ಅತೀ ಹೆಚ್ಚು ಜನರು ಭಾಗವಹಿಸುವ ಉತ್ಸವವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ.
ಏನಿದು ತ್ರಿಶೂರ್ ಪೂರಂ ಹಬ್ಬ
ತ್ರಿಶೂರ್ ಪೂರಂ ಅನ್ನೋದು ತ್ರಿಶೂರಿನ ಶಿವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ. ಮಲೆಯಾಳಂ ಕ್ಯಾಲೆಂಡರ್ ಪ್ರಕಾರ ಪೂರಂ ನಕ್ಷತ್ರದಲ್ಲಿ ಚಂದ್ರೋದಯದ ವೇಳೆಯಲ್ಲಿ ನಡೆಯುವ ಉತ್ಸವ ಇದು. ತ್ರಿಶೂರ್ ನಲ್ಲಿರೋ ವಡಕ್ಕುನಾಥನ್ ಅರ್ಥಾತ್ ಶಿವ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಇದು. ಆನೆಗಳ ಮೂಲಕ ದೇವರನ್ನು ಹೊತ್ತುಕೊಂಡು ದೇವಸ್ಥಾನದ ಬಾಗಿಲು ಪ್ರವೇಶ ಮಾಡೋದು ಈ ಉತ್ಸವದ ವಿಶೇಷ. ಹೀಗಾಗಿ ಸಾವಿರಾರು ವಿದೇಶಿಗರು ಉತ್ಸವ ನೋಡಲು ಆಗಮಿಸ್ತಾರೆ ಅನ್ನೋದೇ ವಿಶೇಷ.
ತ್ರಿಶೂರ್ ಪೂರಂ ಹಬ್ಬದ ಹಿನ್ನೆಲೆ
ರಾಮವರ್ಮ ಕುಂಞಿಪಿಳ್ಳೆ ಎಂಬ ಕೊಚ್ಚಿನ್ ಮಹಾರಾಜ 17 ನೇ ಶತಮಾನದಲ್ಲಿ ಅರುಟ್ಟುಪುಳ ಪೂರಂ ಎಂಬ ಉತ್ಸವವನ್ನು ನಡೆಸಿಕೊಂಡು ಬಂದಿದ್ದರು. ಅರುಟ್ಟುಪುಳ ಪೂರಂ ಎಂಬ ಒಂದು ದಿನದ ಉತ್ಸವಕ್ಕೆ ತ್ರಿಶೂರು ಸೇರಿದಂತೆ ಸುತ್ತಮುತ್ತಲಿನ ದೇವಸ್ತಾನಗಳು ಇದರಲ್ಲಿ ಭಾಗಿ ಆಗುತ್ತಿದ್ದವು. 1796 ರಲ್ಲಿ ಮಳೆಯ ಕಾರಣಿದಿಂದ ತ್ರಿಶೂರ್ನಿಂದ ಹೊರಟಿದ್ದ ದೇವಾಲಯ ತಂಡಗಳಿಗೆ ಅರುಟ್ಟುಪುಳ ಪೂರಂ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡಿದ್ದ ತ್ರಿಶೂರಿನ ರಾಜ ಶಕ್ತನ್ 1796 ರಲ್ಲೇ ತ್ರಿಶೂರಿನಲ್ಲೇ ಈ ಪೂರಂ ಉತ್ಸವ ಆರಂಭಿಸಿದ್ರು ಅನ್ನೋ ಐತಿಹಾಸಿಕ ಕಥೆ ಇದೆ. ಅಂದಿನಿಂದ ತ್ರಿಶೂರಿನ ಹತ್ತು ದೇವಾಲಯಗಳು ಒಟ್ಟಾಗಿ ತ್ರಿಶೂರ್ ಪೂರಂ ಆಚರಿಸಲು ಆರಂಭವಾಯ್ತು ಅನ್ನೋ ದಾಖಲೆಗಳು ಸಿಗುತ್ತದೆ.
ಧರ್ಮಾತೀತವಾಗಿ ನಡೆಯುವ ಪೂರಂ ಉತ್ಸವ
ತ್ರಿಶೂರ್ ಪೂರಂ ಅಂದ ತಕ್ಷಣ ನೆನಪಾಗುವುದು ಅಲ್ಲಿ ಕಾಣಸಿಗುವ ಸರ್ವಧರ್ಮ ಸಮನ್ವಯತೆ. ಇಂತಹ ದೃಶ್ಯ ಬಹುಶಃ ದೇಶದ ಬೇರೆಲ್ಲೂ ಕಾಣಲು ಸಿಗಲಾರದು. ತ್ರಿಶೂರ್ ಪೂರಂ ಉತ್ಸವದಲ್ಲಿ ಪ್ರತಿ ವರ್ಷ ಹೊಸ ಕೊಡೆಗಳನ್ನು ತಯಾರಿಸಲಾಗುತ್ತದೆ. ಕುಡವಟ್ಟಂ ಎಂದು ಕರೆಯುವ ಈ ಕೊಡೆಗಳ ವಿಶೇಷ ಆಕರ್ಷಣೆಗೆ ಕ್ರೈಸ್ತ ಸಮೂದಾಯದವರ ಕೊಡುಗೆ ಇದ್ರೆ, ಪೂರಂಗೆ ಬೇಕಾದ ಪೆಂಡಾಲ್ ಹಾಕೋದು ಇಲ್ಲಿನ ಮುಸ್ಲಿಂ ಸಮೂದಾಯದವರು. ಇನ್ನು ಉತ್ಸವ ನೋಡಲು ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಧರ್ಮದವರೂ ಆಗಮಿಸುವುದು ಇಲ್ಲಿನ ವಿಶೇಷ. ಇದೇ ಕಾರಣಕ್ಕೆ ಈ ತ್ರಿಶೂರ್ ಪೂರಂ ಇಂದು ಜಗತ್ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ತ್ರಿಶೂರ್ ಪೂರಂ ಹಬ್ಬ ಹೇಗೆ ನಡೆಯುತ್ತದೆ
ತ್ರಿಶೂರು ಹಾಗೂ ಸುತ್ತಮುತ್ತಲಿನ ಹತ್ತು ದೇವಲಾಯಗಳಿಂದ ಆನೆಯ ಮೂಲಕ ದೇವರನ್ನು ಹೊತ್ತು ಶಿವ ದೇವಾಲಯಕ್ಕೆ ತರಲಾಗುತ್ತದೆ. ಒಂದೊಂದು ದೇವಸ್ಥಾನದಿಂದ ದೇವರನ್ನು ಹೊತ್ತು ಬಾಗಿಲು ದಾಟಿ ಬರುವ ಆನೆಗಳನ್ನು ನೋಡಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಈ ವೇಳೆ ಮೊಳಗುವ ಪಂಚ ವಾದ್ಯಗಳನ್ನು ಕೇಳಲೆಂದೇ ಕೆಲವರು ಬರುವುದಿದೆ. ಕಣಿಮಂಗಲಂ ಶಾಸ್ತಾವು ದೇವಾಲಯದಿಂದ ಆರಂಭವಾಗುವ ಈ ಉತ್ಸವ ಬಳಿಕ ಒಂದೊಂದೆ ದೇವಸ್ಥಾನದಿಂದ ಬರಲು ಆರಂಭವಾಗುತ್ತದೆ. ಚಂಡೆ, ಮದ್ದಳೆ, ಕಹಳೆ,ತಾಳ ಹಾಗೂ ಎಡಕ್ಕ ಹೀಗೆ ಪಂಚವಾದ್ಯದ ಮೆರವಣಿಗೆ ನಡೆಯುತ್ತದೆ. ಹತ್ತು ಆನೆಗಳು ದೇವಾಲಯದ ಮುಂದೆ ನಿಂತಿದ್ದರೆ , ಐವತ್ತಕ್ಕೂ ಹೆಚ್ಚು ಆನೆಗಳು ಉತ್ಸವದಲ್ಲಿ ಭಾಗಿಯಾಗುತ್ತದೆ. ಚಿನ್ನದ ಹಣೆಪಟ್ಟಿ, ಚಿನ್ನದ ಪ್ರಭಾವಳಿಯನ್ನು ಹಿಡಿದು , ಪಾರೆಮೆಕ್ಕಾವು ಮತ್ತು ತಿರುವಂಬಾಡಿ ಎಂಬ ಎರಡು ತಂಡಗಳು ಪೂರಂ ನಡೆಯುವ ಸ್ಥಳದಲ್ಲಿ ಮುಖಾಮುಖಿಯಾಗಿ ನಿಂತು ಛತ್ರಿ ವಿನಿಯಮ ಮಾಡಿಕೊಳ್ಳುವ ದೃಶ್ಯ ಪೂರಂನಲ್ಲಿ ವಿಶೇಷ ಅನುಭವ ನೀಡುವ ದೃಶ್ಯ ಕೂಡಾ ಹೌದು. ಕುಡಮಟ್ಟಂ ಅಂತ ಇದನ್ನು ಕರೆಯಲಾಗುತ್ತಿದ್ದು ಶಿವದೇವಲಾಯದ ಪಶ್ಚಿಮ ಗೋಪುರದ ಬಳಿ ಇದು ಸಂಪನ್ನಗೊಳ್ಳುತ್ತದೆ.
DAKSHINA KANNADA
MANGALURU : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿ ಅನಾಹುತ
ಮಂಗಳೂರು : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟಿನಿಂದ ಕಾರಿಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಿಣಾಮ ಕಾರು ಇಂಜಿನ್ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಕಾರು ಮಾಲಕ ಆರೋಪಿಸಿದ್ದಾರೆ.
ಹೊಟೇಲ್ ಉದ್ಯಮಿ ಜೀವನ್ ಶೆಟ್ಟಿ ಎಂಬವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸುವ ಸಲುವಾಗಿ, ಎಪ್ರಿಲ್ 5 ರಂದು ಮಧ್ಯಾಹ್ನ 12 ರ ಸುಮಾರಿಗೆ ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಬಂದಿದ್ದರು. ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ, ಸಿಬ್ಬಂದಿ ಮಾತ್ರ ಕಾರಿಗೆ ಡೀಸೆಲ್ ತುಂಬಿಸಿದ್ದಾರೆ.
ಪರಿಣಾಮ ಕಾರು ಕೆಲವೇ ಕಿಲೋ ಮೀಟರ್ ಸಂಚರಿಸಿ ಮುಂದಕ್ಕೆ ಹೋಗದೆ ನಿಂತಿದೆ. ಪರಿಶೀಲಿಸಿದಾಗ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪೆಟ್ರೋಲ್ ಬಂಕ್ ಮ್ಯಾನೇಜರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾರು ಇಂಜಿನ್ ದುರಸ್ಥಿಗೆ 2 ಲಕ್ಷಕ್ಕೂ ಅಧಿಕ ಖರ್ಚು ಆಗಲಿದೆ. ಆದರೆ, ಪೆಟ್ರೋಲ್ ಬಂಕ್ ಮಾಲಕ ಬರೀ 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ಶೆಟ್ಟಿ ದೂರಿದ್ದಾರೆ. ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುತ್ತಾರೆ. ಇಂತಹ ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ ಬಂಕ್ ಮಾಲಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವುದಾಗಿ ಜೀವನ್ ಶೆಟ್ಟಿ ಹೇಳಿದ್ದಾರೆ.