ಮಂಗಳೂರು: ಸಿರಿಯಾದ 15 ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಿದೇಶಿ ಹಡಗು ಎಂ.ವಿ.ಪ್ರಿನ್ಸಸ್ ಮಿರಾಲ್ ಮಂಗಳೂರಿನ ತಲಪಾಡಿ ಬಟ್ಟಪಾಡಿ ಸಮೀಪದ ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಸರಕು ಸಾಗಣಿಕೆಯ ಈ ವಿದೇಶಿ ಹಡಗಿನಲ್ಲಿ ಎರಡು ದಿನಗಳ ಹಿಂದೆ ಸಣ್ಣ ರಂಧ್ರದ ಮೂಲಕ ನೀರು ಒಳನುಗ್ಗಿ ಅಪಾಯಕ್ಕೆ ಸಿಲುಕಿತ್ತು. ಚೀನಾದ ಟಿಯಾಂಜಿನ್ನಿಂದ ಲೆಬನಾನ್ಗೆ ಸರಕು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೊಳಗಾಗಿತ್ತು ಇದರಲ್ಲಿದ್ದ 15 ಸಿರಿಯಾ ದೇಶದ ಪ್ರಜೆಗಳನ್ನು ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದರು.
32 ವರ್ಷದ ಈ ಹಡಗು ತಲಪಾಡಿಯ ಬಟ್ಟಪ್ಪಾಡಿ ಸಮೀಪದ ಅರಬ್ಬಿ ಸಮುದ್ರದ ನೀರಿನಲ್ಲಿ ಇದೀಗ ಮುಳುಗಡೆಗೊಂಡಿದೆ.
ಹಡಗಿನ ಇಂಧನ ತೆಗೆಯುವುದು ಹೇಗೆ ಮತ್ತು ಹಡಗನ್ನು ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಸಿಂಗಾಪುರದ ಖಾಸಗಿ ಏಜೆಂಟ್ ಸಮೀಕ್ಷೆ ನಡೆಸುತ್ತಿದೆ.
ಹಡಗು ಮುಳುಗಡೆಗೊಂಡ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೋಸ್ಟ್ ಗಾರ್ಡ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಎಂ.ವಿ. ಪ್ರಿನ್ಸಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ಅಗದಂತೆ ತಡೆಗಟ್ಟಲು ಹಾಗೂ ಹಡಗಿನಲ್ಲಿರುವ ಫರ್ನಸ್ ಅಯಿಲ್ ಮತ್ತು ಇಂಜಿನ್ ಆಯಿಲ್ನ್ನು ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿಗೆ ತಿಳಿಸಲಾಗಿದೆ.
ಈ ಹಡಗಿನ ಸುತ್ತಲೂ ಮೀನುಗಾರಿಕೆ ನಡೆಸದ ಹಾಗೆ ನೋಡಿಕೊಳ್ಳುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯವರಿಗೆ ಕಾಲ ಕಾಲಕ್ಕೆ ಸಮುದ್ರದ ನೀರಿನ ಗುಣಮಾಪನವನ್ನು ಮಾಡಲು ನಿರ್ದೇಶಿಸಲಾಗಿದೆ.
ಹಡಗಿನ ತೈಲವು ಸಮುದ್ರ ಸೇರದಂತೆಯೂ ಸೂಕ್ತ ವ್ಯವಸ್ಥೆ ಮಾಡುವಂತೆ ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.