ಮಂಗಳೂರು : ವಿದೇಶಿ ಕರೆನ್ಸಿ ಕೊಡುವ ನೆಪದಲ್ಲಿ ನಾಲ್ಕು ಲಕ್ಷ ಹಣವನ್ನು ಲಪಟಾಯಿಸಿ ವಂಚಕ ಪರಾರಿಯಾದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಸೌದಿ ಅರೇಬಿಯಾದ ಕರೆನ್ಸಿ ಕೊಡುವುದಾಗಿ ನಂಬಿಸಿ 4 ಲಕ್ಷ ರೂ. ಪಡೆದುಕೊಂಡು ವಂಚಿಸಿದ ಆರೋಪದ ಮೇರೆಗೆ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್‌ನಲ್ಲಿರುವ ತಾಜ್ ಬುಕ್‌ಸ್ಟಾಲ್‌ಗೆ ಬಂದಿದ್ದ ಅಪರಿಚಿತ ವ್ಯಕ್ತಿ ತನ್ನ ಬಳಿ ಸೌದಿ ಅರೇಬಿಯಾದ ಕರೆನ್ಸಿ ಇದೆ.
ಅದನ್ನು ಕಡಿಮೆ ಬೆಲೆಗೆ ನಿಮಗೆ ಕೊಡುತ್ತೇನೆಂದು ವ್ಯಕ್ತಿಯೊಬ್ಬರಿಗೆ ಹೇಳಿದ್ದ ಎನ್ನಲಾಗಿದೆ.
ರವಿವಾರ ಅಪರಿಚಿತ ವ್ಯಕ್ತಿಯು 4 ಲಕ್ಷ ರೂ. ರೆಡಿ ಮಾಡಿ ಮಂಗಳೂರಿಗೆ ತಂದು ಕರೆ ಮಾಡುವಂತೆ ತಿಳಿಸಿದ ಮೇರೆಗೆ ಫಿರ್ಯಾದಿಯು ಸೋಮವಾರ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರಿಗೆ ಕರೆ ಮಾಡಿದರು ಎಂದು ಹೇಳಲಾಗಿದೆ.
ಆವಾಗ ಫಿರ್ಯಾದಿದಾರರನ್ನು ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಸರ್ವೀಸ್ ಬಸ್ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕಾಯುವಂತೆ ತಿಳಿಸಿದ್ದು, ಅದರಂತೆ ಪೂ.11:40ಕ್ಕೆ ಕಾಯುತ್ತಾ ನಿಂತುಕೊಂಡಿದ್ದಾಗ ಅಪರಿಚಿತ ವ್ಯಕ್ತಿಯು ಫಿರ್ಯಾದಿದಾರರ ಬಳಿ ಬಂದು ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಕಟ್ಟನ್ನು ನೀಡಿ ಫಿರ್ಯಾದಿಯ ಬಳಿಯಿದ್ದ 4 ಲಕ್ಷ ರೂ.ವನ್ನು ಪಡೆದು ತಕ್ಷಣ ಓಡಿ ಪರಾರಿಯಾಗಿದ್ದಾನೆ.
ಈ ಸಂಬಂಧ ನಗರದ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.