ಬೆಂಗಳೂರು: ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಿದ ಕೆಲವೇ ದಿನಗಳಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಗುತ್ತಿಗ ಆಧಾರದ ಮೇಲೆ ಪಡೆಯುವ ಬಸ್ ಗಳ ಪ್ರಯಾಣ ದರವನ್ನೂ ಹೆಚ್ಚಳ ಮಾಡಿದೆ.
ಪ್ರವಾಸ, ತೀರ್ಥ ಯಾತ್ರೆ, ರಾಜಕೀಯ ರ್ಯಾಲಿ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಕೆಎಸ್ಆರ್’ಟಿಸಿ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಈ ಬಸ್ ಗಳ ದರವನ್ನೂ ಇದೀಗ ಪರಿಷ್ಕರಿಸಲಾಗಿದೆ. ಇಷ್ಟು ದಿನ ಪ್ರತಿ ಕಿಮೀ.ಗೆ 47 ರೂ ದರದಲ್ಲಿ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಈ ದರನ್ನು 54 ರೂ.ಗೆ ಪರಿಷ್ಕರಿಸಲಾಗಿದ್ದು, ಇದರ ಪರಿಣಾಮ ಪ್ರತಿ ಕಿ.ಮೀ.ಗೆ 7 ರೂ. ಹೆಚ್ಚಳವಾಗಿದೆ. ಕರ್ನಾಟಕದ ಹೊರಗಿನ ಸೇವೆಗಳಿಗೆ, ಪ್ರತಿ ಕಿ.ಮೀ.ಗೆ 50 ರೂ.ನಿಂದ 57 ರೂ.ಗೆ ಹೆಚ್ಚಿಸಲಾಗಿದೆ.
ರಾಜ್ಯದೊಳಗೆ ಪ್ರತಿ ಕಿ.ಮೀ.ಗೆ 52 ರೂ.ನಂತೆ ಕಾರ್ಯನಿರ್ವಹಿಸುತ್ತಿದ್ದ ಅಶ್ವಮೇಧ ಸೇವೆಗಳನ್ನು ಪ್ರತಿ ಕಿ.ಮೀ.ಗೆ 58 ರೂ.ಗೆ ಹೆಚ್ಚಿಸಲಾಗಿದೆ, ಇದರಂತೆ ಪ್ರತಿ ಕಿ.ಮೀ.ಗೆ 6 ರೂ. ಹೆಚ್ಚಳವಾಗಿದೆ. ರಾಜಹಂಸ, ಐರಾವತ, ಪಲ್ಲಕ್ಕಿ, ಅಂಬಾರಿ, ಮಿಡಿ ಬಸ್, ಎಸಿ ಅಲ್ಲದ ಸ್ಲೀಪರ್, ಫ್ಲೈ ಬಸ್ ಮತ್ತು ಇತರ ಎಲ್ಲಾ ಬಸ್ ಸೇವೆಗಳ ದರವನ್ನೂ ಹೆಚ್ಚಳ ಮಾಡಲಾಗಿದೆ.
ಮುಂಗಡವಾಗಿ ಸೇವೆಗಳನ್ನು ಬುಕ್ ಮಾಡಿದವರಿಗೆ ಹಳೆಯ ದರಗಳ ಪ್ರಕಾರ ಶುಲ್ಕ ವಿಧಿಸಲಾಗುತ್ತದೆ. ಅಶ್ವಮೇಧದ ದರಗಳು ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 58 ರೂ. ಮತ್ತು ರಾಜ್ಯದ ಹೊರಗೆ 61 ರೂ. ಇರಲಿದೆ. ರಾಜಹಂಸ ಬಸ್ ಸೇವೆ ದರ ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 59 ರೂ. ಮತ್ತು ಹೊರಗೆ 63 ರೂ., ಪಲ್ಲಕ್ಕಿ ಬಸ್‌ಗಳ ದರ ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 80 ರೂ. ಮತ್ತು ರಾಜ್ಯದ ಹೊರಗೆ 85 ರೂ ಇರಲಿದೆ.
ಜನವರಿ 7 ರಂದು ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದ್ದು, ಡೀಸೆಲ್ ದರ ಹೆಚ್ಚಳ ಮತ್ತು ನೌಕರರ ವೇತನದಲ್ಲಿನ ಹೆಚ್ಚಳದಿಂದಾಗಿ ಕಾರ್ಯಾಚರಣೆಯ ವೆಚ್ಚದಲ್ಲಿ ಹೆಚ್ಚಳ ಮಾಡಲಾಗಿದೆ. ನಿಯಮಿತ ದೈನಂದಿನ ಕಾರ್ಯಾಚರಣೆಗಳಿಂದ ಬರುವ ಆದಾಯದ ಜೊತೆಗೆ, ಒಪ್ಪಂದದ ಸೇವೆಗಳು ಬಸ್ ನಿಗಮಕ್ಕೆ ಆದಾಯದ ಪ್ರಮುಖ ಮೂಲಗಳಾಗಿವೆ. ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಟ್ವಾಳ: ಇಡಿ ಅಧಿಕಾರಿಗಳ ಸೋಗಿನಲ್ಲಿ ಹಣ ದರೋಡೆಯಾಗಿರುವ ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ಮನೆಗೆ ಸ್ಪೀಕರ್ ಯು.ಟಿ. ಖಾದರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಂಡ ಬುಧವಾರ ಬೆಳಗ್ಗೆ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲನೆ ಮತ್ತು ಕಾರ್ಯವಿಧಾನದ ಕುರಿತು ಮನೆಯವರ ಜೊತೆಗೆ ಗೌಪ್ಯ ಸಮಾಲೋಚನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು, ತನಿಖೆ ಇನ್ನಷ್ಟು ತೀವ್ರಗೊಳಿಸಲು ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಇದಕ್ಕೆ ಊರವರ ಮತ್ತು ಮನೆಯವರ ಸಹಕಾರ ಅಗತ್ಯ. ಈಗಾಗಲೇ ಡಿವೈಎಸ್ಪಿ ನೇತೃತ್ವದ 4 ತಂಡಗಳನ್ನು ರಚಿಸಲಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ದರೋಡೆಕೋರರ ಪತ್ತೆ ಹಚ್ಚುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿವೈಎಸ್ಪಿ ವಿಜಯ ಪ್ರಸಾದ್ ಜೊತೆಗೆ ದರೋಡೆಗೊಳಗಾದ ಮನೆಯ ಮಾಲಕ ಸುಲೈಮಾನ್ ಹಾಜಿ ಹಾಗೂ ಪುತ್ರ ಇಕ್ಬಾಲ್ ಜೊತೆಗೆ ಗೌಪ್ಯ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಇ. ನಾಗರಾಜ್, ಸಬ್ ಇನ್ಸ್ ಪೆಕ್ಟರ್ ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.
ಹೈದರಾಬಾದ್: ತಿರುಪತಿಯ ವೈಕುಂಠ ದ್ವಾರದ ದರ್ಶನದ ಟೋಕನ್ ವಿತರಣೆ ವೇಳೆ ಕಾಲ್ತುಳಿತ ಸಂಭವಿಸಿದ್ದು 7 ಭಕ್ತರು ಕೊನೆಯುಸಿರುಳೆದಿದ್ದಾರೆ. ಇದರಲ್ಲಿ ಕರ್ನಾಟಕದ ಬಳ್ಳಾರಿಯ ಓರ್ವ ಮಹಿಳೆ ಕೂಡ ಪ್ರಾಣ ಕೆಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಿರುಪತಿಯಲ್ಲಿ ಟೋಕನ್ ವಿತರಣೆ ವೇಳೆ ಕಾಲ್ತುಳಿತ ಸಂಭವಿಸಿ 7 ಭಕ್ತರು ಜೀವ ಕಳೆದುಕೊಂಡಿದ್ದಾರೆ. ಸದ್ಯ ಇವರ ಊರು ಯಾವುದು ಎಂದು ಅಲ್ಲಿನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಸೇರಿದ ನಿರ್ಮಲ (50) ಎನ್ನುವರು ಕಾಲ್ತುಳಿದಲ್ಲಿ ಕಣ್ಮುಚ್ಚಿದ್ದಾರೆ. ಉಳಿದಂತೆ ನರ್ಸಿಪಟ್ಟಣಂನ ಬುದ್ಧೇಟಿ ನಾಯುಡುಬಾಬು (51), ರಜನಿ (47) ಲಾವಣ್ಯ (40) ಹಾಗೂ ಶಾಂತಿ (34) ಈ ಮೂವರು ವಿಶಾಖಪಟ್ಟಣಂ ಜಿಲ್ಲೆಯವರು ಆಗಿದ್ದಾರೆ. ಮಲ್ಲಿಗಾ (49) ಇವರು ತಮಿಳುನಾಡಿನ ಸೇಲಂ ಜಿಲ್ಲೆಯವರು ಎಂದು ತಿಳಿಸಲಾಗಿದೆ.
ನಿರ್ಮಲ ಅವರು ಬಳ್ಳಾರಿಯವರು ಎಂದು ಆಕೆಯ ಜೊತೆ ಬಂದಿದ್ದ ಸಹ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಟಿಕೆಟ್ ವಿತರಣೆ ವೇಳೆ ಕಾಲ್ತುಳಿತದಲ್ಲಿ 6 ಭಕ್ತರು ಪ್ರಾಣ ಬಿಟ್ಟಿದ್ದು ಅಲ್ಲದೇ 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಡಾಕ್ಟರ್ಸ್ ಹೇಳಿದ್ದಾರೆ.