Wednesday, May 31, 2023

ಪುತ್ತೂರು: ‘ಮಧ್ಯರಾತ್ರಿ ಮಹಿಳೆಯ ಮನೆಗೆ ಹೋಗುತ್ತಾನೆ’ ಎಂದು ಆರೋಪಿಸಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಪುತ್ತೂರು: ಮಧ್ಯರಾತ್ರಿ ಮಹಿಳೆಯ ಮನೆಗೆ ವ್ಯಕ್ತಿಯೊಬ್ಬ ಹೋಗುತ್ತಾನೆಂದು ಅಪ್ರಚಾರ ಮಾಡಿದ ಆರೋಪದಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಘಟನೆ ವಿವರ
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ರಾಕೇಶ್ ಎಂಬಾತನಿಗೆ ಏ.4 ರಂದು ರಾತ್ರಿ ಪಂಚೋಡಿಯ ಲೋಕೇಶ ಪಾಟಾಳಿ ಎಂಬಾತನು ಕರೆ ಮಾಡಿ

‘ನಾನು ಮಧ್ಯರಾತ್ರಿ 12 ಗಂಟೆಗೆ ಮಹಿಳೆಯೊಬ್ಬರ ಮನೆಗೆ ಹೋಗುತ್ತಿದ್ದೇನೆ’ ಎಂಬುವುದಾಗಿ ಎಲ್ಲರ ಬಳಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತೀಯಾ? ಎಂದು ರಾಕೇಶ್ ಬಳಿ ಪ್ರಶ್ನಿಸಿದ್ದಾನೆ.

ಇದಾದ ಬಳಿಕ ಏ.06 ರಂದು ಮೇನಾಲದ ಭಾಸ್ಕರ ಎಂಬಾತ ರಾಕೇಶ್‌ಗೆ ಕರೆ ಮಾಡಿ “ನೀನು ನನಗೆ ಒಮ್ಮೆ ಖುದ್ದಾಗಿ ಮಾತನಾಡಲು ಸಿಗಬೇಕು” ಎಂಬುದಾಗಿ ಹೇಳಿದ್ದಾನೆ.

ಅದರಂತೆ ಮೇನಾಲದಲ್ಲಿ ಭಾಸ್ಕರನನ್ನು ಕಾಣಲು ಹೋದಾಗ ರಾಕೇಶನನ್ನು ಉದ್ದೇಶಿಸಿ,”ನನ್ನ ಅತ್ತೆಯ ಮಗಳ ಮನೆಗೆ ಪಂಚೋಡಿಯ ಲೋಕೇಶ ಪಾಟಾಳಿ ರಾತ್ರಿ ವೇಳೆ ಬರುತ್ತಿರುವುದಾಗಿ ನೀನು ಪ್ರಚಾರ ಮಾಡುತ್ತೀಯಾ?’ ಎಂದು ಪ್ರಶ್ನಿಸಿದಾಗ “ನನಗೆ ಈ ವಿಚಾರ ಗೊತ್ತಿಲ್ಲ” ಎಂಬುದಾಗಿ ರಾಕೇಶ್‌ ಹೇಳಿದ್ದಾನೆ.

ಇದೇ ವೇಳೆ ಸ್ಥಳಕ್ಕೆ ಕಾರಿನಲ್ಲಿ ಬಂದ ಪಂಚೋಡಿಯ ಲೋಕೇಶ ಪಾಟಾಳಿ ಮತ್ತು ಕೇಶವ ಪಾಟಾಳಿ ಅವಾಚ್ಯ ಶಬ್ದದಿಂದ ಬೈದು ನೀನು ಇನ್ನು ಬದುಕಿರಬಾರದು. ನಿನ್ನನ್ನು ಇಲ್ಲಿಯೇ ಕೊಂದು ಬಿಡುತ್ತೇನೆ ಎನ್ನುತ್ತಾ ಕೈಯಲ್ಲಿದ್ದ ಚೂರಿಯಿಂದ ಇರಿಯಲು ಬಂದಾಗ ರಾಕೇಶ್‌ನ ಕೈಗೆ ತಾಗಿ ಗಾಯವಾಗಿದೆ.

ಇದೇ ವೇಳೆ ಅದೇ ರಸ್ತೆಯಲ್ಲಿ ಮೋಟಾರ್ ಸೈಕಲೊಂದು ಬರುತ್ತಿರುವುದನ್ನು ನೋಡಿದ ರಾಕೇಶ್‌ ಆರೋಪಿಗಳಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ಭಾಸ್ಕರನು ಹಿಡಿದಿಟ್ಟಾಗ ಮತ್ತೆ ಕೇಶವ ಪಾಟಾಳಿಯು ಮರದ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ.

ಬಳಿಕ ಬೈಕ್‌ ಏರಿ ತಪ್ಪಿಸಿದಾಗ “ಇವತ್ತು ನೀನು ಬದುಕಿದೆ. ಇನ್ನು ಮುಂದಕ್ಕಾದರೂ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಭಾಸ್ಕರ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಾಗಿದೆ.
ಗಾಯಗೊಂಡ ರಾಕೇಶ್‌ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics