ಮೈಸೂರು: ಮೃತ ಅಣ್ಣನ ಹೆಸರಿನಲ್ಲಿ ತಮ್ಮ 24 ವರ್ಷ ಶಿಕ್ಷಕನಾಗಿ ಕೆಲಸ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ ತಮ್ಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಾಗಿ ನೇಮಕಗೊಂಡಿದ್ದ ಲೋಕೇಶ್ ಗೌಡ ಹೆಸರಲ್ಲಿ ಆತನ ಕಿರಿಯ ಸಹೋದರ ಲಕ್ಷಣೇಗೌಡ ಕೆಲಸ ಮಾಡುತ್ತಿದ್ದರು. ಆಕ್ರಮವಾಗಿ ಸರಿ ಸುಮಾರು 24 ವರ್ಷ ಕರ್ತವ್ಯ ಮುಂದುವರಿಸಿದ್ದರೂ ಇಲಾಖೆಗೆ ಗೊತ್ತಾಗಲೇ ಇಲ್ಲ.
2019ರಲ್ಲಿ ಹುಣಸೂರಿನ ಪತ್ರಕರ್ತ ಇಂಟೆಕ್ ರಾಜು ಅವರಿಗೆ ಈ ಕುರಿತಾದ ಮಾಹಿತಿ ಲಭ್ಯವಾಗಿ ಜಾಡು ಹಿಡಿದು ಹೊರಟಾಗ ಅನುಮಾನ ಮೂಡಿತು.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಅವರು ದೂರು ನೀಡಿದ್ದರು. ಈಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.ಮೂಲತಃ ಕೆ.ಆರ್.ನಗರ ತಾಲೂಕು ಹೆಬ್ಬಾಳು ಗ್ರಾಮದಲ್ಲಿ ಲಕ್ಷ್ಮಣೇಗೌಡರ ಕುಟುಂಬ ವಾಸವಿದೆ.
1994-95ರಲ್ಲಿ ಲಕ್ಷ್ಮಣೇಗೌಡರ ಹಿರಿಯ ಸಹೋದರ ಲೋಕೇಶ್ ಗೌಡ ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, ಕೆಲಸಕ್ಕೆ ಹಾಜರಾಗುವ ಮುನ್ನವೇ ಅವರು ಅಕಾಲಿಕವಾಗಿ ಮೃತಪಟ್ಟರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನೇಮಕಾತಿ ಪತ್ರದೊಂದಿಗೆ ಲಕ್ಷ್ಮಣೇಗೌಡ ತಾನೇ ಲೋಕೇಶ್ ಎಂದು ಹೇಳಿಕೊಂಡು, ಪಿರಿಯಾಪಟ್ಟಣದ ಮುದ್ದನಹಳ್ಳಿ ಗ್ರಾಮದ ಶಾಲೆಯಲ್ಲಿ ಕರ್ತವ್ಯ ಆರಂಭಿಸಿದ್ದರು. ನಂತರದ ವರ್ಷಗಳಲ್ಲಿ ಜಿಲ್ಲೆಯ ಹಲವಾರು ಕಡೆ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ.
ಪತ್ರಕರ್ತ ಇಂಟೆಕ್ ರಾಜು ನೀಡಿದ ದೂರಿನನ್ವಯ ವರದಿ ನೀಡಲು ಕೆ.ಆರ್.ನಗರ ತಹಶೀಲ್ದಾರ್‌ಗೆ ಡಿಡಿಪಿಐ ಕೋರಿದ್ದರು.
ಲಕ್ಷ್ಮಣೇಗೌಡನ ಕುಟುಂಬದವರು ಮಾಹಿತಿ ನೀಡಲು ನಿರಾಕರಿಸುತ್ತಾರೆಂದು ತಹಶೀಲ್ದಾರ್ ವರದಿ ನೀಡಿದರು.
ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಆದರೆ, 2020 ರಲ್ಲಿ ಡಿಸಿ ನೀಡಿದ ಸೂಚನೆಯನ್ನು 6 ತಿಂಗಳಾದರೂ ಕ್ಷೇತ್ರ ಶಿಕ್ಷಣಾಧಿಕಾರಿ ಪಾಲಿಸಲಿಲ್ಲ ಎಂದು ಆರೋಪಿಸುವ ರಾಜು, ಲೋಕಾಯುಕ್ತರಿಗೆ ದೂರು ದಾಖಲಿಸಿದರು.
ಲೋಕಾಯುಕ್ತ ಅಧಿಕಾರಿಗಳು ಆರೋಪಿ ಮತ್ತು ದೂರುದಾರರನ್ನು ಕರೆಸಿ ವಿಚಾರಣೆ ನಡೆಸಿದರು. ನೇಮಕಾತಿ ಪ್ರಾಧಿಕಾರದ ಹಂತದಲ್ಲೂ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿ ನೀಡಿದ್ದ ವಂಶವೃಕ್ಷದಲ್ಲಿ ಲಕ್ಷ್ಮಣೇಗೌಡ ಹೆಸರು ನಾಪತ್ತೆಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವಂಶವೃಕ್ಷವನ್ನು ಅಮಾನ್ಯಗೊಳಿಸಲಾಯಿತು.
ಪ್ರಕರಣದಲ್ಲಿ ಆರೋಪಿ ಸೂಕ್ತ ಮತ್ತು ಅಧಿಕೃತ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲನಾಗಿರುವುದು ಮತ್ತು ದೂರುದಾರರು ವ್ಯಕ್ತಪಡಿಸಿರುವ ಅನುಮಾನಗಳಲ್ಲಿ ನೈಜತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಮಾ.21ರಂದು ಪಿರಿಯಾಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಅಂದು ಮಧ್ಯಾಹ್ನ ನಕಲಿ ಶಿಕ್ಷಕನ ಆರೋಪ ಹೊತ್ತಿರುವ ಲಕ್ಷಣೇಗೌಡನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಾಗರಾಜ್ ತಿಳಿಸಿದ್ದಾರೆ.