ಹಾಸನ: ಅರಸೀಕೆರೆ ತಾಲೂಕು ಗಾಂಧಿನಗರ ಗ್ರಾಮದ ಸಮೀಪ ಸರಣಿ ಅಪಘಾತ ಸಂಭವಿಸಿ ನಾಲ್ವರು ಮಕ್ಕಳು ಸೇರಿದಂತೆ 9 ಜನರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಸಾರಿಗೆ ಬಸ್, ಟೆಂಪೋ ಟ್ರಾವೆಲರ್ ಮತ್ತು ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಮೃತಪಟ್ಟವರು 50 ವರ್ಷದ ಲೀಲಾವತಿ, 33 ವರ್ಷದ ಚೈತ್ರಾ, 10 ವರ್ಷದ ಸಮರ್ಥ್, 12 ವರ್ಷದ ದೀಪ್ತಿ, 10 ವರ್ಷದ ತನ್ಮಯಿ, 2 ವರ್ಷದ ಮಗು ಧ್ರುವ, 20 ವರ್ಷದ ವಂದನಾ, 60 ವರ್ಷದ ದೊಡ್ಡಯ್ಯ ಮತ್ತು 50 ವರ್ಷದ ಭಾರತಿ ಎಂದು ಗುರುತಿಸಲಾಗಿದೆ.
ಮೃತರು ಟೆಂಪೋ ಟ್ರಾವಲರ್ ನಲ್ಲಿ ಪ್ರಯಾಣಿಸುತ್ತಿದ್ದು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ತಮ್ಮೂರು ಅರಸೀಕೆರೆಯ ಬಾಣಾವರಕ್ಕೆ ವಾಪಸಾಗುತ್ತಿದ್ದರು.
ಸರ್ಕಾರಿ ಬಸ್ ಮತ್ತು ಟ್ಯಾಂಕರ್ ನಡುವೆ ಸಿಲುಕಿದ ಟೆಂಪೋ ಟ್ರಾವೆಲರ್ ನಜ್ಜು ಗುಜ್ಜಾಗಿದ್ದು, ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದಾರೆ.
ಉಳಿದ ನಾಲ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರೆಲ್ಲರೂ ಅರಸೀಕೆರೆ ತಾಲೂಕಿನ ಬಾಣವಾರ ಗ್ರಾಮದವರು ಎನ್ನಲಾಗಿದೆ.
ಮೃತದೇಹವನ್ನು ಅರಸೀಕೆರೆ ಗ್ರಾಮದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.