ಮಂಗಳೂರು/ಉತ್ತರ ಪ್ರದೇಶ : “ಹಿಂದೆ ನಡೆದಿದ್ದ ಪೂರ್ಣ ಮಹಾಕುಂಭ ಮೇಳದ ಸಮಯದಲ್ಲಿ ಈಗಿನ ಯಾರೂ ಬದುಕಿರಲಿಲ್ಲ. ಮುಂದೆ ನಡೆಯುವ ಮಹಾ ಕುಂಭಮೇಳದ ಸಮಯಕ್ಕೆ ಸಹ ನಾವ್ಯಾರೂ ಬದುಕಿರುವುದಿಲ್ಲ”. 144 ವರ್ಷಗಳ ನಂತರ ನಡೆಯುತ್ತಿರುವ ಐತಿಹಾಸ ಪ್ರಸಿದ್ಧ ಮಹಾ ಕುಂಭಮೇಳಕ್ಕೆ ಪ್ರಯಾಗ್ ನಗರ ಸಜ್ಜಾಗಿದೆ. ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ‘ಮಹಾಕುಂಭ ಮೇಳ’ ಎಂದು ಕರೆಯಲಾಗುತ್ತದೆ. 44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ ಇಂದಿನಿಂದ (ಜನವರಿ 13) ಪ್ರಾರಂಭವಾಗಿ ಫೆಬ್ರವರಿ 26 ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ.
ಈ ಪವಿತ್ರ ಕಾರ್ಯಕ್ರಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕಳೆದು ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆ 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದ್ದು, ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಕುಂಭಮೇಳದ ಮೂಲವು ಹಿಂದೂ ಪುರಾಣಗಳಲ್ಲಿ, ವಿಶೇಷವಾಗಿ ಸಮುದ್ರ ಮಂಥನದ ಕಥೆಯಲ್ಲಿದೆ. ದೇವತೆಗಳು (ದೇವರುಗಳು) ಮತ್ತು ಅಸುರರು (ರಾಕ್ಷಸರು) ಅಮರತ್ವದ ಅಮೃತವಾದ ಅಮೃತವನ್ನು ಪಡೆಯುವ ಪ್ರಯತ್ನದಲ್ಲಿದ್ದಾಗ ಅಮೃತದಿಂದ ತುಂಬಿದ ಕುಂಭ (ಮಡಿಕೆ) ಹೊರಹೊಮ್ಮಿತು. ರಾಕ್ಷಸರಿಂದ ಅದನ್ನು ರಕ್ಷಿಸಲು, ಮೋಹಿನಿಯ ವೇಷದಲ್ಲಿರುವ ಭಗವಾನ್ ವಿಷ್ಣುವು ಮಡಿಕೆಯನ್ನು ಸ್ವಾಧೀನಪಡಿಸಿಕೊಂಡ. ಈ ರೀತಿ ವಶಪಡಿಸಿಕೊಂಡು ಕೊಂಡೊಯ್ಯುತ್ತಿದ್ದಾಗ ಅಮೃತದ ಹನಿಗಳು ಬಿದ್ದ ನಾಲ್ಕು ಸ್ಥಳಗಳೇ ಇಂದಿನ ಪ್ರಯಾಗರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಕ್ಷೇತ್ರಗಳಾಗಿವೆ. ಈ ಸ್ಥಳಗಳು ಪವಿತ್ರ ಸ್ಥಳಗಳಾಗಿ ಪೂಜಿಸಲ್ಪಡುವುದರಿಂದ ಅಲ್ಲಿಯೇ ಕುಂಭಮೇಳವನ್ನು ಆಚರಿಸಲಾಗುತ್ತದೆ.
ಕುಂಭ ಮೇಳೆ ನಡೆಯುವ ಸಂಧರ್ಭದಲ್ಲಿ ನಾಗಾ ಸಾಧುಗಳು ಆಗಮಿಸಿ ಶಾಹಿ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ.ಮಹಾಕುಂಭ ಮೇಳದಲ್ಲಿ ಭಾಗವಹಿಸುವ ನಾಗ ಸಾಧುಗಳ ಜೀವನವು ಸಾಮಾನ್ಯ ಜನರಿಂದ ಪ್ರತ್ಯೇಕವಾಗುವುದರೊಂದಿಗೆ ನಿಗೂಢವಾಗಿರುತ್ತದೆ. ಲೌಕಿಕ ಭೋಗಗಳಿಂದ ದೂರವಿದ್ದು ದೇವರ ಆರಾಧನೆಯಲ್ಲಿ ಆಳವಾಗಿ ತಲ್ಲೀನರಾಗುವ ಈ ಸಾಧುಗಳಲ್ಲಿ 13 ಅಖಾಡಗಳಿವೆ(ಪಂಗಡ), ಅದರಲ್ಲಿ ಏಳು ಶೈವ(ಶಿವನ ಆರಾಧಕರು) ಮತ್ತು ತಲಾ ಮೂರು ವೈಷ್ಣವ(ವಿಷ್ಣುವಿನ ಆರಾಧಕರು) ಹಾಗೂ ಉದಾಸೀನ(ಸಿಖ್) ಅಖಾಡಗಳಿವೆ. ಆಧ್ಯಾತ್ಮಿಕ ಮತ್ತು ರಕ್ಷಣಾತ್ಮಕ ಕೆಲಸಗಳೆರಡನ್ನೂ ಅಖಾಡದ ಸಾಧುಗಳು ನಿರ್ವಹಿಸುತ್ತಾರೆ. ಸನಾತನ ಜೀವನ ವಿಧಾನವನ್ನು ಸಂರಕ್ಷಿಸಲು ಜಗದ್ಗುರು ಆದಿ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಈ ಅಖಾಡಗಳನ್ನು ಸ್ಥಾಪಿಸಿದರು.
ಈ ಬಾರಿ ಶಾಹಿ ಸ್ನಾನ ನಡೆಯುವ ದಿನಗಳು :
ಜನವರಿ 13( ಪುಷ್ಯ ಪೂರ್ಣಿಮಾ ಸ್ನಾನ)
ಜನವರಿ 15 (ಮಕರ ಸಂಕ್ರಾಂತಿ ಸ್ನಾನ)
ಜನವರಿ 29(ಮೌನಿ ಅಮಾವಾಸ್ಯೆ ಸ್ನಾನ)
ಫೆಬ್ರುವರಿ 03(ಬಸಂತ್ ಪಂಚಮಿ ಸ್ನಾನ)
ಫೆಬ್ರುವರಿ 12(ಮಾಘಿ ಹುಣ್ಣಿಮೆ ಸ್ನಾನ)
ಫೆಬ್ರುವರಿ 26(ಮಹಾ ಶಿವರಾತ್ರಿ ಸ್ನಾನ)
ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳ ನಡೆಯುವ ಸ್ಥಳದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬರೋಬ್ಬರಿ 5,500 ಕೋಟಿ ರೂಪಾಯಿಗಳ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಈ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ವಿಶೇಷ ಮುತುವರ್ಜಿ ವಹಿಸಿದ್ದು, ಮಹಾ ಕುಂಭಮೇಳ ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಇದು “ಡಿಜಿಟಲ್ ಮಹಾಕುಂಭ ಮೇಳವಾಗಿದ್ದು” ವಿಶೇಷವಾಗಿ 328 ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹೊಂದಿರುವ ಸಿಸಿಟಿವಿಗಳು ಸೇರಿ ಒಟ್ಟು 2600 ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಜೊತೆಗೆ ಹೊಸ ತಂತ್ರಜ್ಞಾನ ಹೊಂದಿರುವ ನೀರಿನ ಒಳಗಡೆ ಚಲಿಸುವ ಡ್ರೋನ್ ಗಳನ್ನು ಈ ಬಾರಿ ಬಳಸಲಾಗುತ್ತಿದೆ.
ಸುಮಾರು 37 ಸಾವಿರ ಪೋಲಿಸರನ್ನು ಹಾಗೂ 14 ಸಾವಿರ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. 10,200 ಸ್ವಚ್ಛತಾ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಮಹಾ ಕುಂಭಮೇಳ ನಡೆಯುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೌರಾಣಿಕ ಪ್ರಾಮುಖ್ಯತೆಯನ್ನು ಸಾರುವ 30 ವಿವಿಧ ಕಮಾನುಗಳನ್ನು ನಿರ್ಮಾಣ ಮಾಡಲಾಗಿದ್ದು ಭಕ್ತರಿಗೆ ದೇವ ಲೋಕದ ದಿವ್ಯ ದರ್ಶನ ಅನುಭವವಾಗಲಿದೆ. ಸುಮಾರು 12 ಕಿ.ಮೀ ನಲ್ಲಿ ತಾತ್ಕಾಲಿಕ ಘಟ್‌ಗಳನ್ನು ನಿರ್ಮಾಣ ಮಾಡಲಾಗಿದೆ, 450 ಕಿ.ಮೀ ನಷ್ಟು ಪೈಪ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಅದ್ಭುತವಾದ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲು ಅಮೆರಿಕ, ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ 82 ದೇಶಗಳು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಿವೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ಎನ್ಐಟಿಕೆ, ನೇತ್ರಾವತಿ ಸೇತುವೆ, ಅದೆಷ್ಟೋ ಹೈವೇಗಳು…ಅದೆಷ್ಟೋ ಶಾಲಾ-ಕಾಲೇಜುಗಳು… ಇದರೆಲ್ಲದರ ಹಿಂದೆ ಇರುವ ಒಂದೇ ಒಂದು ಹೆಸರು ಉಳ್ಳಾಲ ಶ್ರೀನಿವಾಸ ಮಲ್ಯ.
ಯು.ಎಸ್ ಮಲ್ಯ 1902 ರಲ್ಲಿ ನಮ್ಮ ಮಂಗಳೂರಿನ ಕಾರ್ ಸ್ಟ್ರೀಟ್ ಹತ್ತಿರದ ಗೌಡ ಸಾರಸ್ವತಿ ಕುಟುಂಬದಲ್ಲಿ ಹುಟ್ಟಿದರು. ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿತು ಬಳಿಕ ಕೆನರಾ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದರು. ಸ್ವಾತಂತ್ರ್ಯ ಹೋರಾಟದ ಆ ಸಮಯದಲ್ಲಿ ಕಾರ್ನಾಡ್ ಸದಾಶಿವ ರಾವ್ ಅವರ ದೇಶಭಕ್ತರ ತ್ಯಾಗವನ್ನು ನೋಡಿ ಪ್ರೇರಿತರಾದ ಶ್ರೀನಿವಾಸ ಮಲ್ಯ ಇವರೂ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುತ್ತಾರೆ.
ಕ್ವಿಟ್ ಇಂಡಿಯಾ, ದಂಡಿಯಾತ್ರೆ ಇದರೆಲ್ಲದರಲ್ಲೂ ಪಾಲು ಪಡೆಯುತ್ತಾರೆ. ಹೀಗೆ ಹೋರಾಟದಲ್ಲೇ ಮುಂದೆ ಹೋದಂತಹ ಮಲ್ಯರಿಗೆ ನೆಹರು, ಲಾಲ್ ಬಹುದ್ದೂರ್ ಶಾಸ್ತ್ರಿ ಇವರೆಲ್ಲರೂ ಆಪ್ತರಾಗುತ್ತಾರೆ. ಭಾರತ ಸ್ವಾತಂತ್ರ್ಯ ಆದ ನಂತರ ಆದಂತಹ ಚುನಾವಣೆಯಲ್ಲಿ 1952, 1957 ಮತ್ತು 1962 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಾರೆ.
ಜನಪ್ರತಿನಿಧಿ ಒಬ್ಬನಿಗೆ ಕೆಲಸ ಮಾಡುವ ಇಚ್ಛಾಶಕ್ತಿ ಒಂದಿದ್ದರೆ ಯಾವ ರೀತಿಯ ಕ್ರಾಂತಿಯನ್ನು ಮಾಡಬಹುದು ಎಂಬುದಕ್ಕೆ ಯು.ಎಸ್ ಮಲ್ಯರು ದೊಡ್ಡ ಉದಾಹರಣೆ. ಹೌದು, ಯು. ಎಸ್ ಮಲ್ಯರು ಸಂಸದರಾಗಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು-ಹಾಸನ-ಬೆಂಗಳೂರು ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಸುರತ್ಕಲ್ನಲ್ಲಿರುವ ಎನ್ಐಟಿಕೆ, ನವಮಂಗಳೂರು ಬಂದರು, ಆಕಾಶವಾಣಿ, ಎಂ.ಸಿ.ಎಫ್, ಮಂಗಳೂರಿನ ಸಕ್ಯೂಟ್ ಹೌಸ್, ಮಂಗಳೂರು ಪುರಭವನ, ವೆನ್ಲಾಕ್ ಆಸ್ಪತ್ರೆಯ ಅಭಿವೃದ್ಧಿ, ನೇತ್ರಾವತಿ, ಕೂಳೂರು, ಮೂಲ್ಕಿ, ಉದ್ಯಾವರ, ಗಂಗೊಳ್ಳಿ ಈ ಎಲ್ಲದರ ಸೇತುವೆ ನಿರ್ಮಾಣ, ಆಲ್ ಇಂಡಿಯಾ ಹ್ಯಾಂಡಿ ಕ್ಯಾಪ್ ಬೋರ್ಡ್, ಇಂಡಿಯಾ ಕಾರ್ಪೋರೇಟರ್ ಯೂನಿಯನ್ ಮುಖೇನ ಲಕ್ಷಾಂತರ ಜನರಿಗೆ ಉದ್ಯೋಗ ಹೀಗೆ ಹೇಳಿಕೊಂಡು ಹೋದರೆ ಅದೆಷ್ಟೋ ಇವೆ.
ಇಂತಹ ಮಹಾನ್ ವ್ಯಕ್ತಿ 1965 ರಲ್ಲಿ ಡಿಸೆಂಬರ್ 19 ರಂದು ದೆಹಲಿಯಿಂದ ಮಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಸಮಯದಲ್ಲಿ ಹೃದಯಾ*ಘಾತವಾಗುತ್ತದೆ. ಈ ಸುದ್ದಿಯನ್ನು ಕೇಳಿದಂತಹ ಅಂದಿನ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ದೆಹಲಿಗೆ ಅವರು ಇದ್ದಂತಹ ಸ್ಥಳಕ್ಕೆ ಓಡಿ ಬರುತ್ತಾರೆ. ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕಳುಹಿಸುತ್ತಾರೆ.
ಒಂದು ಕಡೆಯಲ್ಲಿ ಭಾರತ-ಪಾಕಿಸ್ತಾನ ಯುದ್ಧ ಆಗುತ್ತಿದ್ದಂತಹ ಸಮಯ ಅದು. ಮಂಗಳೂರಿನ ನೆಹರೂ ಮೈದಾನದಲ್ಲಿ ಸ್ಪಲ್ಪ ಹೊತ್ತು ಸಾರ್ವಜನಿಕ ವೀಕ್ಷಣೆಗಾಗಿ ಅವರ ಶರೀರವನ್ನು ಇಡುತ್ತಾರೆ. ಆ ಮೂಲಕವಾಗಿ ಯು.ಎಸ್. ಮಲ್ಯ ಎನ್ನುವ ಮಹಾನ್ ಚೇತನ ಪಂಚಭೂತಗಳಲ್ಲಿ ಲೀನವಾಗುತ್ತಾರೆ.
ನಮ್ಮ ಜಿಲ್ಲೆಯ ಅಭಿವೃದ್ಧಿಯ ವಿಷಯ ಬರುವಾಗ ಉಳ್ಳಾಲ ಶ್ರೀನಿವಾಸ ಮಲ್ಯ ಎನ್ನುವ ಹೆಸರು ಯಾವಾಗಲೂ ಚಿರಸ್ಥಾಯಿ. ಇವತ್ತಿಗೂ ನಾವು ನವ ಮಂಗಳೂರು ಬಂದರಿನ ಪ್ರವೇಶ ದ್ವಾರ, ಪದುವ ಹೈಸ್ಕೂಲ್ನ ಎದುರುಗಡೆ, ಸುರತ್ಕಲ್ ಎನ್ಐಟಿಕೆ ಸ್ಮಾರಕ ಭವನ, ಪಡೀಲ್ ಸರ್ಕಲ್ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಅವರ ಶಾಶ್ವತ ಪ್ರತಿಮೆ ಹಾಗೂ ಹೆಸರನ್ನು
ನಾವು ಕಾಣಬಹುದು. ಮಂಗಳೂರಿನ ಕಾರ್ಸ್ಟ್ರೀಟ್ ನಲ್ಲಿರುವ ಒಂದು ಅಶ್ವಥ ಮರವಿದೆ. ಇದು ಯು.ಎಸ್ ಮಲ್ಯರಿಗೆ 60 ವರ್ಷ ಆದಾಗ ಅವರು ನೆಟ್ಟಂತಹ ಸಸಿ. ಒಂದು ರೀತಿಯಲ್ಲಿ ಈ ಮರವನ್ನು ಅವರ ಪ್ರತಿನಿಧಿ ಎಂದು ಹೇಳಬಹುದು.
ತನ್ನ ಸ್ವಂತಕ್ಕಾಗಿ ಯಾವುದನ್ನೂ ಮಾಡದೆ ಈ ಊರು ಒಳ್ಳೆಯದಾಗಬೇಕು, ಊರಿನ ಜನರಿಗೆ ಒಳ್ಳೆಯದಾಗಬೇಕು ಎನ್ನುವ ಭಾವನೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತವಾದಂತಹ ಕೊಡುಗೆಯನ್ನು ನೀಡಿದಂತಹ ಮಹಾನ್ ವ್ಯಕ್ತಿ ಉಳ್ಳಾಲ ಶ್ರೀನಿವಾಸ ಮಲ್ಯ ನಮ್ಮ ಮಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ ಎನ್ನುವಂತದ್ದೇ ಹೆಮ್ಮೆ ಪಡುವ ಸಂಗತಿ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಅಥವಾ ಶಾರ್ಟ್ಸ್‌ಗಳನ್ನು ನೊಡುತ್ತಾ ಯುವ ಸಮಾಜ ಕಾಲ ಕಳೆಯುತ್ತಿದೆ. ಊಟ ಬಿಟ್ಟು, ನಿದ್ದೆಗೆಟ್ಟು ರೀಲ್ಸ್ ನೊಡುತ್ತಾ ಸಮಯ ವ್ಯರ್ಥ ಮಾಡುತ್ತಿದೆ. ಇತ್ತಿಚಿಗೆ ನಡೆದ ಅಧ್ಯಯನದಲ್ಲಿ “ಮಲಗುವ ಸಮಯದಲ್ಲಿ ರೀಲ್ಸ್ಗಳನ್ನು ವೀಕ್ಷಿಸುತ್ತಾ ಹೆಚ್ಚು ಸಮಯ ಮೊಬೈಲ್ ನೋಡುತ್ತಿರುವುದರಿಂದ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ರಕ್ತದೊತ್ತಡ ಉಂಟಾಗುತ್ತಿದೆ” ಎಂದು ತಿಳಿದು ಬಂದಿದೆ.
ಬೆಂಗಳೂರು ಮೂಲದ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಅವರು ಹಂಚಿಕೊಂಡ ಸಂಶೋಧನಾ ವರದಿ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಲಗುವ ಸಮಯದಲ್ಲಿ ರೀಲ್ಸ್ ವೀಕ್ಷಿಸುವ ಸಮಯವನ್ನು ಆಧರಿಸಿ ಅಧ್ಯಯನವನ್ನು ನಡೆಸಿ, “ಮಲಗುವ ಸಮಯದಲ್ಲಿ ಮೊಬೈಲ್ ನೋಡುವುದು ಜಡ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಈ ಸಮಯ ವಿಡಿಯೋಗಳನ್ನು ವೀಕ್ಷಿಸುವುದರಿಂದ ನರಮಂಡಲಗಳು ಸಕ್ರಿಯವಾಗಿಯೇ ಇರುತ್ತವೆ, ಇದರಿಂದ ನಿದ್ರಾಹೀನತೆ ಉಂಟಾಗಬಹುದು ಹಾಗೆಯೇ ರಕ್ತದೊತ್ತಡಕ್ಕೂ ಕಾರಣವಾಗಬಹುದು” ಎಂದು ಹೇಳಿದ್ದಾರೆ.
ಬಿಎಂಸಿ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ, “ಚೀನಾದಲ್ಲಿ 4,318 ಯುವ ಮತ್ತು ಮಧ್ಯ ವಯಸ್ಕರ ಮೇಲೆ ನಡೆಸಿದ ಅಧ್ಯಯನದಲ್ಲಿ ರೀಲ್ಸ್ಗಳನ್ನು ಹೆಚ್ಚಾಗಿ ವೀಕ್ಷಿಸುವವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ” ಎಂಬುದು ತಿಳಿದುಬಂದಿದೆ. ಸಂಶೋಧಕರಾದ ಫೆಂಗ್ಡೆ ಲಿ, ಫಾಂಗ್‌ಫಾಂಗ್ ಮಾ, ಶಾಂಗ್ಯು ಲಿಯು, ಲೆ ವಾಂಗ್, ಲಿಶುವಾಂಗ್ ಜಿ, ಮಿಂಗ್ಕಿ ಝೆಂಗ್ ಮತ್ತು ಗ್ಯಾಂಗ್ ಲಿಯು ಹೇಳಿದಂತೆ “ಮಲಗುವ ಸಮಯದಲ್ಲಿ ಶಾರ್ಟ್ ವಿಡಿಯೋಗಳು, ರೀಲ್ಸ್ಗಳನ್ನು ನೋಡುವುದನ್ನು ನಿಯಂತ್ರಿಸಬೇಕು, ಇಲ್ಲವಾದಲ್ಲಿ ಇದು ಅಧಿಕ ರಕ್ತದೊತ್ತಡಕ್ಕೆ ಎಡೆ ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.
ಮಂಗಳೂರು/ವಿಜಯನಗರ : “ಬಸವಣ್ಣ ಶತಮಾನದಲ್ಲಿ ಅಂತರ್ಜಾತಿ ವಿವಾಹಕ್ಕೆ ಉತ್ತೇಜನ ನೀಡಿದ್ದರು. ಅದೇ ರೀತಿ ಈಗ ನಾವೆಲ್ಲ ಅಂತಹ ವಿವಾಹ ಉತ್ತೇಜಿಸುವ ಆಗತ್ಯವಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌ನ ಮಗನ ಮದುವೆಯೊಡನೆ ಹಮ್ಮಿಕೊಂಡ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಮಾತನಾಡಿರು.
ನಿನ್ನೆ (ಜ.12) ಈ ಕುರಿತು ಮಾತನಾಡುತ್ತಾ, “ಜಾತಿ ವ್ಯವಸ್ಥೆ ನಾಶವಾಗಿ ಸಮ ಸಮಾಜ ನಿರ್ಮಾಣವಾಗಲು ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು” ಎಂದು ಸಿ.ಎಂ. ಹೇಳಿದ್ದಾರೆ. ಲಂಬಾಣಿ ಸಮುದಾಯ ತಾಂಡಾ ಬಿಟ್ಟು ಹೊರಬಂದಿದ್ದನ್ನು ಕೊಂಡಾಡಿದ ಸಿ.ಎಂ “ಇಂತಹ ಮದುವೆಗಳು ಹೆಚ್ಚು ಹೆಚ್ಚು ನಡೆಯಬೇಕು, ಶ್ರೀಮಂತರು ತಮ್ಮ ಸಂಪತ್ತನ್ನು ಇಂತಹ ಕಾರ್ಯಗಳಿಗೆ ಸ್ವಲ್ಪ ಬಳಸಬೇಕು ನಮ್ಮ ದೇಶದಲ್ಲಿ ಶ್ರೀಮಂತರು, ಬಡವರು ಇದ್ದಾರೆ. ಶ್ರೀಮಂತರು ಅದ್ದೂರಿಯಾಗಿ ಮದುವೆ ಮಾಡ್ತಾರೆ. ಬಡವರು ಮದುವೆ ಮಾಡಿಕೊಳ್ಳಲು ಕಷ್ಟ. ಇಂತಹ ಸಾಮೂಹಿಕ ಮದುವೆಯಲ್ಲಿ ಬಡವರ ಮದುವೆ ಮಾಡುವುದು ಉತ್ತಮ” ಎಂದು ಮುಖ್ಯಮಂತ್ರಿ ಹೇಳಿದರು.
“ಮದುವೆ ಮಾಡಲು ಸಾಲ ಮಾಡ್ತಾರೆ. ಮನೆ ಆಸ್ತಿ ಒಡವೆ ಮಾರಾಟ ಮಾಡ್ತಾರೆ. ಪ್ರತಿಯೊಬ್ಬರು ಸರಳ ಮದುವೆ ಆಗಬೇಕು. ಪಕ್ಕದ ಮನೆಯವಳು ಓಲೆ ಹಾಕಿದ್ರೆ ಕಿವಿ ಕಿತ್ತುಕೊಳ್ಳಲು ಸಾಧ್ಯನಾ. ಬಡವರು ಬಡವರಾಗಿಯೇ ಸಾಯಬೇಕಾ? ಬಡವರು ಶ್ರೀಮಂತರು ಆಗಬಹುದು. ನಾವು ಯಾವ ಜಾತಿಯಲ್ಲಿಯೇ ಇದ್ದೀವಿ ಅದೇ ಜಾತಿಯಲ್ಲಿಯೇ ಇರಬೇಕು ಅಂತಾ ಏನಿಲ್ಲ” ಎಂದು ಪ್ರತಿಪಾದಿಸಿದರು. “ಬಸವಣ್ಣನ ಆದರ್ಶಗಳನ್ನ ನಾವು ಪಾಲನೆ ಮಾಡಬೇಕು. ಬಸವಣ್ಣನವರು ಜನರಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಿದ್ದಾರೆ. ಬಸವಣ್ಣನವರನ್ನು ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕ ಅಂತ ಮಾಡಿದೆ. ಕುವೆಂಪು ಹೇಳಿದಂತೆ ಹುಟ್ಟುವಾಗ ವಿಶ್ವಮಾನವರಾಗಿ ಇರುತ್ತಾರೆ. ಆದರೆ ಜಾತಿ ವ್ಯವಸ್ಥೆಯಿಂದಾಗಿ ನಾವು ಅಲ್ಪ ಮಾನವರಾಗುತ್ತೇವೆ. ನಾವು ಇಂತಿಂಥ ಜಾತಿಯಲ್ಲಿ ಹುಟ್ಟುಬೇಕು ಅಂತಾ ಅರ್ಜಿ ಹಾಕಿದ್ದೀವಾ? ಒಂದು ಜಾತಿಯವರು ಇನ್ನೊಂದು ಜಾತಿಯನ್ನ ದ್ವೇಷಿಸಬಾರದು, ಪ್ರೀತಿಸಬೇಕು. ಆರ್ಥಿಕ ಸ್ವಾವಲಂಬನೆ ಆಗದಿದ್ರೆ ಜಾತಿ ವ್ಯವಸ್ಥೆ ಚಲನೆ ಆಗುವುದಿಲ್ಲ. ಜಾತಿ ವ್ಯವಸ್ಥೆ ಇನ್ನೂ ಹೋಗಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
“ನಾವು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ತರುವ ಕೆಲ್ಸ ಮಾಡುತ್ತೇವೆ. ಶ್ರೀಮಂತರು ಸಾಮಾಜಿಕ ಒಳ್ಳೆಯ ಕೆಲಸ ಮಾಡಬೇಕು. ನಾವು ಸಮಾಜದಿಂದಲೇ ಸಿಎಂ ಆಗಿದ್ದೇವೆ. ನಾವು ಸಮಾಜಕ್ಕೆ ಖುಣ ತೀರಿಸುವ ಕೆಲ್ಸ ಮಾಡಬೇಕು. ಅಂಬೇಡ್ಕರ್ ಸಮಾನ ಹಕ್ಕು ಕೊಡದಿದ್ರೆ ನಾವು ಸಿಎಂ ಆಗುತ್ತಿರಲಿಲ್ಲ. ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಚೀನಾ ದೇಶವನ್ನು ನಾವು ಹಿಂದಕ್ಕೆ ಹಾಕಿದ್ದೇವೆ. ಅರತಿಗೊಬ್ಬ ಕೀರ್ತಿಗೊಬ್ಬ ಮಕ್ಕಳು ಸಾಕು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕೂಡ ಅವಶ್ಯಕ. ಅಧಿಕಾರ, ಸಂಪತ್ತು ಸರಿಯಾದ ರೀತಿ ಹಂಚಿಕೆಯಾಗಬೇಕು” ಎಂದು ಸಿಎಂ ಹೇಳಿದರು.