ಮಂಗಳೂರು: ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿ ಹಂತದಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್(ಮಾಮ್)
ಆಫ್ ಮಂಗಳಗಂಗೋತ್ರಿ ಸಂಘಟನೆ ವತಿಯಿಂದ ಪ್ರತಿವರ್ಷದಂತೆ ನೀಡಲಾಗುವ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಕಾರ್ಯಕ್ರಮ ನ. 22ರಂದು ಬೆಳಗ್ಗೆ 10.30ಕ್ಕೆ ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆಯಲಿದೆ.
ಪ್ರಶಸ್ತಿ ಪ್ರದಾನವನ್ನು ಅಕ್ಷರಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಹೊಸ ದಿಗಂತ ದಿನಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ ಭಾಗವಹಿಸುವರು.
ಪ್ರಶಸ್ತಿ ವಿಜೇತರು ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ: ಶ್ರೀರಕ್ಷಾ ರಾವ್ ಪುನರೂರು, ಆಳ್ವಾಸ್ ಕಾಲೇಜು ಮೂಡಬಿದ್ರಿ. ಶ್ರೀರಕ್ಷಾ ಅವರು ಮೂಲ್ಕಿ ಸಮೀಪ ಪುನರೂರಿನವರು.
ಸ್ನಾತಕೋತ್ತರ ಪದವಿ ಅಧ್ಯಯನದ ವೇಳೆ ಉತ್ತಮ ಬರಹಗಾರಿಕೆ ಮೂಲಕ ಗುರುತಿಸಿಕೊಂಡವರು. ಆಳ್ವಾಸ್ ಸಂಸ್ಥೆಯಲ್ಲಿ ಸಾಂಸ್ಕೃತಿಕ ದತ್ತು ಸ್ವೀಕಾರ ಯೋಜನೆ ಅಡಿ ಪತ್ರಿಕೋದ್ಯಮ ಕೋರ್ಸ್‌ಗೆ ಆಯ್ಕೆಯಾದ ಪ್ರತಿಭಾನ್ವಿತೆ.
ಆಳ್ವಾಸ್ ರಂಗ ಅಧ್ಯಯನದ ವಿದ್ಯಾರ್ಥಿನಿ. ಚಂಡೀಘಡದಲ್ಲಿ 2019ರಲ್ಲಿ ನಡೆದ ರಾಷ್ಟ್ರ ಮಟ್ಟದ ಯವಜನೋತ್ಸವದಲ್ಲಿ ಭಾಗವಹಿಸಿ ನಾಟಕದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಬೀದಿ ನಾಟಕ , ತುಳು, ಕನ್ನಡ ನಾಟಕಗಳಲ್ಲಿ ಅಭಿನಯಿಸಿದವರು. ಇದೀಗ ಬೆಂಗಳೂರಿನ ಮಸ್ತ್ ಮಗಾ ಡಾಟ್ ಕಾಂ ಡಿಜಿಟಲ್ ಮಾಧ್ಯಮದಲ್ಲಿ ನಿರೂಪಕಿಯಾಗಿದ್ದಾರೆ. ಪದವಿ ವಿಭಾಗ: ದುರ್ಗಾ ಪ್ರಸನ್ನ, ಆಳ್ವಾಸ್ ಕಾಲೇಜು ಮೂಡಬಿದಿರೆ. ಮೂಲತಃ ಕಾಸರಗೋಡು ಜಿಯ ಪೆರ್ಲದವರು. ತಂದೆ ಶ್ರೀಪತಿ ಭಟ್ ಬೊಳ್ಳುರೋಡಿ ಹಾಗೂ ತಾಯಿ ಇಂದಿರಾ.
ಪ್ರಸ್ತುತ ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಪದವಿ ವಿದ್ಯಾಭ್ಯಾಸವನ್ನು ಕೂಡ ಆಳ್ವಾಸ್ ನಲ್ಲಿಯೇ ಪೂರೈಸಿದ್ದಾರೆ.ವಿವಿಧ ಪತ್ರಿಕೆಗಳಲ್ಲಿ ೬೦ಕ್ಕೂ ಅಧಿಕ ಲೇಖನ ಬರೆದಿದ್ದಾರೆ.
ಕನ್ನಡ ಹಾಗೂ ತುಳು ವಿಕಿಪೀಡಿಯದ ಸಕ್ರಿಯ ಸಂಪಾದಕಿ ಹಾಗೂ ತರಬೇತುದಾರರಾಗಿದ್ದಾರೆ. ಸುದ್ದಿವಾಣಿ ವೆಬ್‌ಸೈಟ್‌ನ ಸಂಪಾದಕಿಯಾಗಿದ್ದಾರೆ.
ಪ್ರಜ್ಞಾ ಓಡಿಲ್ನಾಳ (ದ್ವಿತೀಯ): ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದರು. ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಪ್ರಸ್ತುತ ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಸ್ನಾತಕೋತ್ತರ ಪದವಿ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ.
ಪುತ್ತೂರಿನ ಸ್ಥಳೀಯ ವಾಹಿನಿ ಝೂಮ್ ಇನ್ ಟಿವಿಯಲ್ಲಿ ನಿರೂಪಕಿ ಹಾಗೂ ವರದಿಗಾರ್ತಿ. ನಿರೂಪಕಿ, ಬರಹಗಾರ್ತಿಯಾಗಿ ಗುರುತಿಸಿಕೊಂಡವರು. ಮಾಮ್ ಕುರಿತು: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆಯಾಗಿದ್ದು ೨೦೧೫ರಲ್ಲಿ ಸ್ಥಾಪನೆಗೊಂಡಿದೆ.
ಪತ್ರಿಕೋದ್ಯಮ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದೊಂದಿಗೆ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳನ್ನು ಬೆಸೆಯುವ ಸೇತುವಾಗಿ ಕೆಲಸ ಮಾಡುತ್ತಿದೆ.
ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿ ಹಂತದ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದ ಭಾಗವಾಗಿ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ನ್ನು ಪ್ರತಿ ವರ್ಷ ನೀಡುತ್ತಾ ಬಂದಿದೆ.
ಹಲವು ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಪತ್ರಿಕೋದ್ಯಮ ಶಿಕ್ಷಣದಲ್ಲಾಗಬೇಕಾದ ಸುಧಾರಣೆಗಳ ಕುರಿತು ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಮಗ್ರ ಸಲಹೆ ಒಳಗೊಂಡ ಪ್ರಸ್ತಾವ ಸಲ್ಲಿಸಿದೆ.
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್ ಐ ಟಿ ಕೆ ಅಂಡರ್ ಪಾಸ್ ಬಳಿ ಬೈಕ್ ಗೆ ಬೋಲೇರೋ ಪಿಕಪ್ ಡಿಕ್ಕಿಯಾಗಿ ಬೈಕ್ ಸವಾರ ಸಹಿತ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಸುರತ್ಕಲ್ ಎನ್ಐಟಿಕೆ ಅಂಡರ್ ಪಾಸ್ ಬಳಿ ಬೊಲೆರೋ ಪಿಕಪ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಹಾಗೂ ಪಿಕಪ್ ಹೆದ್ದಾರಿ ಬದಿಯ ಅಪಘಾತ ತಡೆಗೆ ಹಾಕಿದ್ದ ತಡೆ ಬೇಲಿಗೆ ಡಿಕ್ಕಿ ಹೊಡೆದು ಸುಮಾರು 12 ಅಡಿ ಆಳದ ಅಂಡರ್ ಪಾಸ್ ಕೆಳಗಡೆ ಬಿದ್ದಿದೆ.
ಅಪಘಾತದಿಂದ ಬೈಕ್ ಸವಾರ ಸಹಿತ ಬೊಲೆರೋ ಪಿಕಪ್ ನಲ್ಲಿದ್ದ ವಾಹನದ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕ್ರೇನ್ ಮೂಲಕ ಎರಡು ವಾಹನಗಳನ್ನು ತೆರವುಗೊಳಿಸಲಾಯಿತು. ಅಪಘಾತದ ಗಾಯಾಳುಗಳ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.
ಮಂಗಳೂರು : ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದಾರೆ. ಮೇರಿ ಹಿಲ್‌ನಲ್ಲಿ ನಿರ್ಮಾಣವಾಗಲಿರುವ ಈ ಪ್ರಾದೇಶಿಕ ಕೇಂದ್ರ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರಗಳಿಗೆ ಪೂರಕವಾಗಲಿರುವ ವ್ಯವಸ್ಥೆಗಳು ಈ ಕೇಂದ್ರದಲ್ಲಿ ಇರಲಿದೆ. ಇದು ವಿದ್ಯಾರ್ಥಿಗಳಿಂದ ಹಿಡಿದು ಸಂಶೋಧನೆ ನಡೆಸುವ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.
ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಏಷ್ಯಾದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿದ್ದು, ಮಂಗಳೂರಿನಲ್ಲಿ ನಿರ್ಮಾಣವಾಗುವ ಪ್ರಾದೇಶಿಕ ಕೇಂದ್ರ ದೇಶದಲ್ಲೇ ದೊಡ್ಡ ಕೇಂದ್ರವಾಗಲಿದೆ. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಈ ಕೇಂದ್ರ ಸ್ಥಾಪನೆಗೆ 2024-25ರ ಬಜೆಟ್‌ನಲ್ಲಿ ಅನುದಾನ ನೀಡಲಾಗಿದ್ದು, ಈಗ ಚಾಲನೆ ನೀಡಲಾಗುತ್ತಿದೆ. ಈ ಕೇಂದ್ರ ಸ್ಥಾಪನೆ ಬಳಿಕ ಕರಾವಳಿ ಭಾಗದ ಜನರಿಗೆ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರವಾಗಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ ಎಂದು ಹೇಳಿದ್ದಾರೆ.
ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಬೇಕು ಎಂಬ ಚಿಂತನೆ ಸರ್ಕಾರಕ್ಕೆ ಇದೆ. ಇದಕ್ಕೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗಿಯಾಗಿದ್ದರು.
ಉಳ್ಳಾಲ : ಕೋಟೆಕಾರ್ ಬ್ಯಾಂಕ್‌ನ ಕೆ.ಸಿ.ರೋಡ್ ಶಾಖೆಯಿಂದ ಭಾರೀ ದರೋಡೆ ನಡೆದಿದೆ. ಹಾಡಹಗಲೇ ಐದು ಮಂದಿ ಆಗಂತುಕರು ಬಂದೂಕು ತೋರಿಸಿ ಕೃತ್ಯ ಎಸಗಿದ್ದಾರೆ. ಫಿಯೇಟ್ ಕಾರಿನಲ್ಲಿ ಬಂದ ತಂಡ ಚಿನ್ನ, ನಗದುಗಳನ್ನು ದೋಚಿ ಪರಾರಿಯಾಗಿದೆ.
ಬ್ಯಾಂಕಿನಿಂದ 15 ಕೋಟಿ ರೂ.ಗೂ ಮಿಕ್ಕಿದ ಚಿನ್ನ ಹಾಗೂ ಐದು ಲಕ್ಷದಷ್ಟು ನಗದನ್ನು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ದರೋಡೆ ನಡೆಸಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬ್ಯಾಂಕಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ, ಮತ್ತೋರ್ವ ಸಿಸಿಟಿವಿ ಟೆಕ್ನೀಷಿಯನ್‌ಗೆ ಬಂದೂಕು ಹಾಗೂ ತಲವಾರು ತೋರಿಸಿದ ಮಾಸ್ಕ್ ಧರಿಸಿದ್ದ ತಂಡ ಸುಮ್ಮನಿರುವಂತೆ ಬೆದರಿಸಿ, ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಒಡ್ಡಿ ಲಾಕರ್ ನಲ್ಲಿದ್ದ 15 ಕೋಟಿ ರೂ. ಚಿನ್ನ ಹಾಗೂ 5 ಲಕ್ಷ ರೂ ನಷ್ಟು ನಗದು ದೋಚಿ ಗ್ರೇ ಬಣ್ಣದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುವ ಕೆ.ಸಿ ರೋಡ್ ಜಂಕ್ಷನ್ ಶುಕ್ರವಾರವಾದ ಹಿನ್ನೆಲೆಯಲ್ಲಿ ಹೆಚ್ಚು ಜನರಿರಲಿಲ್ಲ.
ಇನ್ನು ಸ್ಪೀಕರ್ ಯುಟಿ ಖಾದರ್ ಕೂಡ ತಮ್ಮ ಕ್ಷೇತ್ರದ ಬ್ಯಾಂಕ್‌ನಲ್ಲಿ ನಡೆದ ಘಟನೆ ಗಮನಕ್ಕೆ ಬರುತ್ತಿದ್ದಂತೆ, ಬ್ಯಾಂಕ್ ಗೆ ಭೇಟಿ ನೀಡಿ, ಪ್ರತ್ಯಕ್ಷದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.