ಮಂಗಳೂರು : ಜ. 26ರಂದು ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ನೌಕಾಪಡೆಯ ತುಕಡಿಯ ನೇತೃತ್ವ ವಹಿಸಲು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಅವರು ಆಯ್ಕೆಯಾಗಿದ್ದಾರೆ.
ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮುನ್ನಡೆಸುವ ತುಕಡಿಯಲ್ಲಿ ನೌಕಾಪಡೆಯ 144 ಯುವ ಯೋಧರು ಮತ್ತು ನಾರಿಶಕ್ತಿ ಸ್ತಬ್ಧಚಿತ್ರ ಇರಲಿದೆ.
ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರರು ಭಾಗವಹಿಸುವರು.
ಅಮೃತಾ ಅವರ ಜತೆಗೆ ಸಬ್ ಲೆ| ವಲ್ಲಿ ಮೀನಾ ಎಸ್. ಕೂಡಾ ಇರುತ್ತಾರೆ. ಮಂಗಳೂರು ಮೂಲದವರಾದ ದಿಶಾ ಅವರು, 2016ರಲ್ಲಿ ನೌಕಾ ಪಡೆ ಸೇರಿದ್ದರು.
ತರಬೇತಿ ಮುಗಿದ ಬಳಿಕ 2017ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸ ಲಾಗಿತ್ತು.
‘ನಾನು ಡಾರ್ನಿಯರ್ ಏರ್ ಕ್ರಾಫ್ಟ್ ಅನ್ನು ಚಲಾಯಿಸುತ್ತಿದ್ದೆ. ಕೆಲವು ಮಿಷನ್ ಗಳಲ್ಲಿಯೂ ಭಾಗಿಯಾಗಿದ್ದೇನೆ. ಬಾಲ್ಯದಿಂದಲೂ ನಾನು ಸೇನೆಗೆ ಸೇರ ಬೇಕೆಂದು ಕೊಂಡಿದ್ದೆ.
ಇದಕ್ಕೆ ನನ್ನ ಪೋಷಕರೇ ಸ್ಫೂರ್ತಿ. ನನ್ನ ತಂದೆ ಕೂಡಾ ಸೇನೆಯಲ್ಲಿ ಸೇವೆ ಸಲ್ಲಿಸ ಬೇಕು ಎಂದು ಕೊಂಡಿದ್ದರು.
ಆದರೆ ಕನಸು ಈಡೇರಿರಲಿಲ್ಲ. ಈಗ ನಾನು ನೌಕಾಪಡೆ ಸೇರಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ದಿಶಾ ಅವರು ಹೇಳಿದ್ದಾರೆ.
ಪರೇಡ್ ನಲ್ಲಿ ನೌಕಾಪಡೆಯ ಯುವ ನಾರಿ ಶಕ್ತಿ ಸ್ತಬ್ಧ ಚಿತ್ರ ಪ್ರದರ್ಶನ ಮತ್ತು ಡಾರ್ನಿಯರ್ ಯುದ್ಧ ವಿಮಾನದ ಪ್ರತಿಕೃತಿ ಇರಲಿದ್ದು, ಮಹಿಳೆಯರ ಸಾಧನೆಯನ್ನು ಪ್ರದರ್ಶಿಸಲಾಗುತ್ತದೆ.
ಜತೆಗೆ 80 ಮಂದಿ ಸಂಗೀತಗಾರರು ಆ್ಯಂಟನಿ ರಾಜ್ ನೇತೃತ್ವದಲ್ಲಿ, ನೌಕಾಪಡೆಯ ಗೀತೆ ಜೈ ಭಾರತಿಯನ್ನು ನುಡಿಸುವರು.
ದಿಶಾ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿಯ ಪುತ್ರಿ.
ಅವರಿಗೆ ನೌಕಾ ಪಡೆಯ ಅಧಿಕಾರಿಯಾಗುವ ಆಸೆ ಬಾಲ್ಯದಲ್ಲೇ ಇತ್ತು. ಅವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಕಲಿತರು.
ನೌಕಾಪಡೆ ಸೇರ ಬೇಕೆಂಬ ಹಂಬಲ ಈಡೇರಿಸಿಕೊಳ್ಳಲು ಹೈಸ್ಕೂಲ್ ನಲ್ಲಿದ್ದಾಗಲೇ ಎನ್‌ಸಿಸಿ ಗೆ ಸೇರಿದ್ದರು.
ಆಗ ಕೆನರಾ ಕಾಲೇಜಿನಲ್ಲಿ ಎನ್‌ಸಿಸಿ ಇರಲಿಲ್ಲವಾದ ಕಾರಣ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದರು.
ಬಳಿಕ ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿಯುವಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸಿದ್ದರು.
ಕೆಲವು ಬಾರಿ ಇದರಲ್ಲಿ ವಿಫಲರಾದರೂ ಛಲ ಬಿಡದೇ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು. ಸದ್ಯ ನೌಕಾಪಡೆಯಲ್ಲಿ ಅಂಡಮಾನ್ ನಿಕೋಬಾರ್‌ನಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.