ಪ್ರೀತಿಸಿ ಮದುವೆಯಾದ : ಹೆಂಡತಿಯನ್ನು ಮಹಡಿಯಿಂದ ತಳ್ಳಿ ಕೊಂದ..!
ಬೆಂಗಳೂರು : ಪ್ರೀತಿಸಿದ್ದ ಜೋಡಿಗಳು ಕಳೆದೆರಡು ವರ್ಷದ ಹಿಂದೆ ಶಕ್ತಿ ದೇವತೆಯ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ದರು. ಇವರಿಬ್ಬರ ಪ್ರೀತಿಗೆ ಮುದ್ದಾದ ಗಂಡು ಮಗು ಸಹ ಇತ್ತು.Baಇತ್ತೀಚೆಗೆ ವರದಕ್ಷಿಣೆ ಭೂತವನ್ನು ಮೈಗೇರಿಸಿಗೊಂಡಿದ್ದ ಗಂಡ ರಾತ್ರಿ ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದೇ ಬಿಟ್ಟಿದ್ದಾನೆ.
ಘಟನೆಯಲ್ಲಿ ಕೊಲೆಯಾಗಿರುವ ಪತ್ನಿ ಚೈತ್ರಾ (20) ಹಾಗೂ ಕೊಲೆಗೈದ ಆರೋಪಿ ಕಾಂತರಾಜ್ (24) ಮೂಲತಃ ಚಿತ್ರದುರ್ಗ ಜಿಲ್ಲೆಯ ಅಕ್ಕ-ಪಕ್ಕದ ಗ್ರಾಮದವರು.
ಇವರು ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿಯ ಸಿದ್ದನ ಹೊಸಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅದೇನಾಯಿತೋ ಏನೋ ರಾತ್ರಿ ವರದಕ್ಷಿಣೆ ವಿಚಾರವಾಗಿ ಗಲಾಟೆ ಆರಂಭಗೊಂಡು ಪತಿ ಕಾಂತರಾಜು ತನ್ನ ಪತ್ನಿ ಚೈತ್ರಾಳನ್ನು ಮೂರನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾನೆ.
ಮೇಲಿಂದ ಬಿದ್ದ ತಕ್ಷಣ ಆಕೆಯ ಪೋಷಕರು ಆಸ್ಪತ್ರೆಗೆ ಕರೆದೋಯ್ದರು ಯಾವುದೇ ಪ್ರಯೋಜನವಾಗದೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಮಾಕಳಿ ಬಳಿಯ ಬ್ರಿಟಾನಿಯ ಬಿಸ್ಕೆಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪೋಷಕರಿಗೆ ಪ್ರೀತಿಯ ವಿಷಯ ತಿಳಿಸದೇ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ನಳನೂರಿನಲ್ಲಿರುವ ಶಕ್ತಿ ದೇವತೆ ಗಾಳಿ ಮಾರಮ್ಮ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ದರು. ಅಲ್ಲದೆ, ಅದೇ ಹೊಳಲ್ಕೆರೆಯ ಉಗಣಕಟ್ಟೆಯಲ್ಲಿ ವಾಸಿಸುತ್ತಿದ್ದರು.
ಮದುವೆಯಾದ ಐದಾರು ತಿಂಗಳ ನಂತರ ಚೈತ್ರಾ ಗರ್ಭಿಣಿಯಾದಳು. ಅಂದಿನಿಂದ ಇವರಿಬ್ಬರ ಬಾಳಲ್ಲಿ ಬಿರುಗಾಳಿ ಬೀಸಿತ್ತು. ಚೈತ್ರಾ ಗರ್ಭಿಣಿಯಾದ ನಂತರ ಕಾಂತರಾಜು ಈಕೆಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ.
ನಿನ್ನ ಒಡವೆಗಳನ್ನೆಲ್ಲ ತಂದು ಕೊಡು ಎಂದು ಹಿಂಸಿಸುತ್ತಿದ್ದ. ಪಾಪಿ ಪತಿ ಯಾವಾಗ ಚಿತ್ರಹಿಂಸೆ ನೀಡಲು ಶುರು ಮಾಡಿದನೋ ಅಂದಿನಿಂದ ಚೈತ್ರಳಿಗೆ ತಾಯಿ ಮನೆ ನೆನಪಾಗಿ ತನಗಾದ ನೋವನ್ನ ತಾಯಿ ಬಳಿ ಹೇಳಿಕೊಳ್ಳಲು ಶುರು ಮಾಡಿದ್ದಳು.
ಕೆಲವು ದಿನಗಳ ನಂತರ ಚೈತ್ರಾ ಪೋಷಕರು ಇಬ್ಬರನ್ನು ಕರೆದುಕೊಂಡು ಬಂದು ತಮ್ಮಜೊತೆಯಲ್ಲೇ ಇರಿಸಿಕೊಂಡು ಮಗುವಾದ ನಂತರ ಅವರೇ ನೋಡಿಕೊಂಡು ಪಾಲನೆ ಪೋಷಣೆ ಮಾಡಿದ್ದರು.
ಆದರೂ ಚೈತ್ರಾಳಿಗೆ ಮಾನಸಿಕ ಕಿರುಕುಳ ತಪ್ಪಿರಲಿಲ್ಲವಂತೆ. ಪ್ರತಿದಿನ ಮಗುವನ್ನು ತನ್ನ ತಾಯಿಯ ಬಳಿ ಬಿಟ್ಟು ಪೆಟ್ರೋಲ್ ಬಂಕ್‌ನಲ್ಲಿ ಚೈತ್ರಾ ಕೆಲಸ ಮಾಡುತ್ತಿದ್ದರೆ ಗೋಡೌನ್ ಒಂದರಲ್ಲಿ ಕಾಂತರಾಜು ಕೆಲಸ ಮಾಡುತ್ತಿದ್ದ.
ದೈನಂದಿನ ಜಗಳ ಇದ್ದರೂ ಸಹ ಇತ್ತೀಚೆಗೆ ಇಬ್ಬರು ಸೇರಿ ಮಗುವಿನ ಹುಟ್ಟುಹಬ್ಬವನ್ನು ಸಹ ಖುಷಿ ಖುಷಿಯಾಗಿ ಮಾಡಿದ್ದರು. ಆದರೆ, ನಿನ್ನೆ ರಾತ್ರಿ ಅದೇನಾಯ್ತೋ ಏನೋ ಮೃತ ಚೈತ್ರಾಳಿಗೆ ಮನಸೋ ಇಚ್ಛೆ ರಾಡ್ನಿಂದ ಹಲ್ಲೆ ಮಾಡಿರುವ ಪತಿ ಕಾಂತರಾಜು ತಾವು ವಾಸವಿದ್ದ ಮನೆಯ ಮೂರನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದು, ಡಿವೈಎಸ್ಪಿ ಜಗದೀಶ್ ಸ್ಥಳ ಪರೀಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ.
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆ ಮಾತಿನಂತೆ ನಿಜವಾಗಿಯೂ ಇಲ್ಲಿ ಇಬ್ಬರ ಜಗಳದಲ್ಲಿ ಹೆಂಡತಿ ಮಸಣ ಸೇರಿದ್ದರೆ ಗಂಡ ಜೈಲು ಪಾಲಾಗಿದ್ದಾನೆ.
ಆದರೆ, ಜಗತ್ತಿನ ಆಗುಹೋಗುಗಳನ್ನು ಅರಿಯದ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಮಾತ್ರ ಅಪ್ಪ ಅಮ್ಮ ಇಬ್ಬರೂ ಇಲ್ಲದೆ ಅನಾಥವಾಗಿದೆ.