ಉಡುಪಿ :ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 130 ಸ್ಥಾನ ಹಾಗೂ ಗರಿಷ್ಠ 150 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಪ್ರ್ರತಿ ಪಕ್ಷ ನಾಯಕ ಹಾಗೂ ಮಾಜಿ ಮುಖ್ಯ ಮತ್ರಿ ಸಿದ್ಧರಾಮಯ್ಯ ಅವರು ವ್ಯಕ್ತ ಪಡಿಸಿದ್ದಾರೆ.
‘ಪ್ರಜಾ ಧ್ವನಿ’ ಕಾರ್ಯಕ್ರಮದ ಅಂಗವಾಗಿ ಇಂದು ಉಡುಪಿಗೆ ಆಗಮಿಸಿದ ಅವರು ಮಾಧ್ಯಮದವರ ಜತೆ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ನಾವು ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ.
ಈ ಬಾರಿ ಎರಡು ಮೂರು ಸ್ಥಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದಾರು ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಹೊಂದಿದ್ದೇವೆ.
ಒಮ್ಮೆ ಬಿಜೆಪಿಯವರು ಗೆದ್ದರೆ ಮತ್ತೆ ಅದೇ ಪುನರಾವರ್ತನೆ ಆಗ ಬೇಕೆಂದೇನೂ ಇಲ್ಲ.
ಈ ಹಿಂದೆ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಏಳು ಗೆದ್ದಿತ್ತು. ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ ಮೊದಲ ವಾರ ಸಭೆ ಕರೆದು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿಯರಿಗೆ ಅಭಿವೃದ್ದಿಯಲ್ಲಿ ನಂಬಿಕೆ ಇಲ್ಲ, ಲವ್ ಜಿಹಾದ್ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ, ರಸ್ತೆ ಚರಂಡಿ, ಬಡವರ ಕಾರ್ಯಕ್ರಮಗಳು, ಅಭಿವೃದ್ದಿ ಬಗ್ಗೆ ಮಾತನಾಡ ಬೇಡಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಪಕ್ಷದವರಿಗೆ ಫರ್ಮಾನು ಹೊರಡಿಸಿದ್ದಾರೆ.
ಅವರ ಮನಸ್ಸಿನಲ್ಲಿ ಏನು ಇದೆ ಎಂಬುದನ್ನು ಬಾಯಿ ಬಿಟ್ಟು ಹೇಳಿದ್ದಾರೆ. ಬಿಜೆಪಿಯಿಂದ ಕರಾವಳಿ ಸೇರಿದಂತೆ ಕರ್ನಾಟಕ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಎಂದು ನುಡಿದರು.
ಕರಾವಳಿಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಭಯೋತ್ಪಾದನೆ ಯಾರು ಮಾಡಿದರೂ ತಪ್ಪು. ನಾವು ಅದನ್ನು ಖಂಡಿಸುತ್ತೇವೆ.
ಭಯೋತ್ಪಾದಕರಿಗೆ ಕಠಿಣವಾದ ಶಿಕ್ಷೆಯಾಗ ಬೇಕು. ನಮಗೆ ಹಿಂದುತ್ವದ ಹೆಸರಲ್ಲಿ ಸುಳ್ಳು ಹೇಳುವವರು ಹಾಗೂ ಮನುವಾದ ಮಾಡುವವರನ್ನು ಕಂಡರೆ ಕೋಪ.
ನಾವು ಮನುಷ್ಯರನ್ನು ಪ್ರೀತಿಸುವ ಜನ. ಎಲ್ಲ ಧರ್ಮದವರು ಮನುಷ್ಯರು. ಮನುಷ್ಯ ಮನುಷ್ಯರನ್ನು ಪ್ರೀತಿಸ ಬೇಕು.
ಅದರಲ್ಲಿ ನಾವು ನಂಬಿಕೆ ಇಟ್ಟುಕೊಂಡಿದ್ದೇವೆ. ಕರಾವಳಿ ಜಿಲ್ಲೆ ಹಿಂದುತ್ವದ ಪ್ರಯೋಗಾಲಯ.
ಸುಳ್ಳು ಹೇಳುವುದೇ ಬಿಜೆಪಿಯವರ ಕಸುಬು ಆಗಿದೆ. ಸಾವರ್ಕರ್ ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು. ಹಿಂದುತ್ವ ಶಬ್ದವನ್ನು ಸಾರ್ವಕರ್ ಹುಟ್ಟು ಹಾಕಿದರು. ಹಿಂದೂ ಬೇರೆ ಹಿಂದುತ್ವ ಬೇರೆ ಎಂದರು.