ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ಪ್ರಮುಖ ಲೆ.ಜನರಲ್ ಕೋದಂಡ ಎನ್. ಸೋಮಣ್ಣ ನಿಧನ
ಮಡಿಕೇರಿ : ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಲೆಫ್ಟಿನೆಂಟ್ ಜನರಲ್ ಕೋದಂಡ ಎನ್. ಸೋಮಣ್ಣ ಅವರು ತೀವ್ರ ಅನಾರೋಗ್ಯದಿಂದ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಪಂಜರುಪೇಟೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಅವರಿಗೆ 93 ವರ್ಷ ವಯಸ್ಸಾಗಿತ್ತು. ಸೋಮಣ್ಣ ಅವರು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ, ಭೂಸೇನೆಯ ಸಹಾಯಕ ಉಪ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.
ಪ್ರಧಾನಿಯಾಗಿದ್ದ ದಿವಂಗತ ಇಂದಿರಾ ಗಾಂಧಿ ಕಾಲದಲ್ಲಿ ಪಂಜಾಬ್ ನ ಅಮೃತ್ಸರದಲ್ಲಿ ನಡೆದ ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ನಿವೃತ್ತರಾದ ಮೇಲೆ ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಮಹಾ ಪೋಷಕರಾಗಿಯೂ ಕೆಲಸ ಮಾಡುತ್ತಿದ್ದರು.
2016ರ ಜುಲೈನಲ್ಲಿ ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ಕೊಡಗಿಗೆ ಭೇಟಿ ನೀಡಿದ್ದರು. ಅಂದು ಸೋಮಣ್ಣ ಅವರ ಮನೆಗೂ ತೆರಳಿ ಯೋಗಕ್ಷೇಮ ವಿಚಾರಿಸಿದ್ದರು.
ಈಗಿನ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರೂ ಸುಹಾಗ್ ಅವರೊಂದಿಗೆ ಸೋಮಣ್ಣ ಅವರನ್ನು ಭೇಟಿ ಮಾಡಿದ್ದರು. ಮೃತರಿಗೆ ಪತ್ನಿ ರೇಣು ಸೋಮಣ್ಣ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಪುತ್ರ ನಿವೇದ್ ನಂಜಪ್ಪ ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇಂದು ಸಂಜೆ ಅವರ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Lt Gen Somanna was Adjutant in Gurkhas in same Battalion as Gen Bipin Rawat. He was hand picked by Field Marshal K M Cariappa, when he converted 3 Infantry…