ಮೈಸೂರು: ಮಂಗಳವಾರ ಮುಂಜಾನೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಕಂಪನಿಯು ಇಂದು (ಡಿ. 31) ಮನೆಯಿಂದಲೇ ಕೆಲಸ ಮಾಡುವಂತೆ ತನ್ನ ಉದ್ಯೋಗಿಗಳಿಗೆ ಸೂಚಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಕಂಪನಿಯ ಮಾನವ ಸಂಪನ್ಮೂಲ ವಿಭಾಗವು ಆಂತರಿಕ ಸಂವಹನದ ಮೂಲಕ ಸಿಬ್ಬಂದಿಗೆ ಮಾಹಿತಿ ನೀಡಿದೆ. ‘ಆತ್ಮೀಯ ಇನ್ಫೋಶಿಯನ್, ಇಂದು ಮೈಸೂರು ಡಿಸಿ ಕ್ಯಾಂಪಸ್‌ನಲ್ಲಿ ಕಾಡು ಪ್ರಾಣಿ ಕಾಣಿಸಿಕೊಂಡಿದೆ. ಕಾರ್ಯಪಡೆಯ ಸಹಯೋಗದೊಂದಿಗೆ ಕ್ಯಾಂಪಸ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ’ ಎಂದಿದೆ.
ವರದಿಯ ಪ್ರಕಾರ, ಕ್ಯಾಂಪಸ್‌ಗೆ ಉದ್ಯೋಗಿಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಇನ್ಫೋಸಿಸ್ ಕ್ಯಾಂಪಸ್‌ನ ಭದ್ರತಾ ತಂಡಕ್ಕೆ ಸೂಚಿಸಲಾಗಿದೆ. ‘ದಯವಿಟ್ಟು ಇಂದು (ಡಿಸೆಂಬರ್ 31) ಕ್ಯಾಂಪಸ್‌ಗೆ ಪ್ರವೇಶಿಸಬೇಡಿ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ನಸುಕಿನ 2 ಗಂಟೆ ಸುಮಾರಿಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಚಿರತೆ ಸೆರೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಐಬಿ ಪ್ರಭುಗೌಡ ಮಾತನಾಡಿ, ಬೆಳಿಗ್ಗೆ 2 ಗಂಟೆ ಸುಮಾರಿಗೆ ಚಿರತೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದೆ. ನಮ್ಮ ತಂಡವು 4 ಗಂಟೆಗೆ ಸ್ಥಳಕ್ಕೆ ತಲುಪಿ ತಕ್ಷಣ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು’ ಎಂದು ಹೇಳಿದರು.
ಮೈಸೂರಿನ ಇನ್ಫೋಸಿಸ್ ಗ್ಲೋಬಲ್ ಎಜುಕೇಶನ್ ಸೆಂಟರ್‌ನಲ್ಲಿ ಉದ್ಯೋಗಿಗಳಲ್ಲದೆ, ಸುಮಾರು 4,000 ಪ್ರಶಿಕ್ಷಣಾರ್ಥಿಗಳು ಕೂಡ ಚಿರತೆ ಕಾಣಿಸಿಕೊಂಡಿದ್ದರಿಂದ ತೊಂದರೆಗೀಡಾಗಿದ್ದಾರೆ. ಎಲ್ಲ ತರಬೇತಿ ಕಾರ್ಯಕ್ರಮಗಳು, ಮೌಲ್ಯಮಾಪನಗಳು ಮತ್ತು ಇಂಡಕ್ಷನ್‌ಗಳನ್ನು ಒಂದು ದಿನಕ್ಕೆ ಮುಂದೂಡುವುದರೊಂದಿಗೆ, ಪ್ರಶಿಕ್ಷಣಾರ್ಥಿಗಳಿಗೆ ಹಾಸ್ಟೆಲ್ ಕೊಠಡಿಗಳಲ್ಲಿಯೇ ಇರಲು ಸಲಹೆ ನೀಡಲಾಗಿದೆ.
2011ರಲ್ಲಿ ಇದೇ ರೀತಿಯ ಘಟನೆಯಲ್ಲಿ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಿದ್ದ ಚಿರತೆ, ಕಾಣಿಸಿಕೊಂಡಿತ್ತು, ಆವರಣದಲ್ಲಿ ಸುತ್ತಾಡಿತ್ತು. ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾ ಬಳಿ ಇರುವ ಇನ್ಫೋಸಿಸ್ ಕ್ಯಾಂಪಸ್, ಚಿರತೆಗಳ ನೆಲೆ ಎಂದು ಕರೆಯಲ್ಪಡುವ ಮೀಸಲು ಅರಣ್ಯದ ಪಕ್ಕದಲ್ಲಿದೆ. ಪ್ರಾಣಿಯು ಆಹಾರ ಅರಸಿ ದಾರಿ ತಪ್ಪಿ ಬಂದಿರಬಹುದು ಎಂದು ವನ್ಯಜೀವಿ ತಜ್ಞರು ತಿಳಿಸಿದ್ದಾರೆ.