ಮಂಗಳೂರು/ಮೆಲ್ಬೋರ್ನ್: ಶನಿವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ ನಿತೀಶ್ ಕುಮಾರ್ ರೆಡ್ಡಿ ಆಕರ್ಷಕ ಶತಕ ಬಾರಿಸಿ ಮಿಂಚಿದ್ದರು. ಇತ್ತ ನಿತೀಶ್ ಶತಕ ಪೂರೈಸುತ್ತಿದ್ದರೆ, ಅತ್ತ ಅವರ ಮುತ್ಯಾಲ ರೆಡ್ಡಿ ಆನಂದಭಾಷ್ಪ ಸುರಿಸಿದ್ದರು.
ಇದಾದ ಬಳಿಕ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ ಕಾಮೆಂಟ್ರಿ ರೂಮ್ ಬಳಿ ನಿತೀಶ್ ಕುಮಾರ್ ರೆಡ್ಡಿ ಅವರ ಕುಟಂಬ ಟೀಂ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಮುತ್ಯಾಲ ರೆಡ್ಡಿ ದಂಪತಿ ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರ ಕಾಲುಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಈ ವೇಳೆ ಮುತ್ಯಾಲ ರೆಡ್ಡಿ ಹಾಗೂ ಸುನಿಲ್ ಗವಾಸ್ಕರ್ ಇಬ್ಬರು ಭಾವುಕರಾದರು.
ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ ಬುಮ್ರಾ !
ತಂದೆಯ ತ್ಯಾಗವನ್ನು ಶ್ಲಾಘಿಸಿದ ಗವಾಸ್ಕರ್
ತಂದೆಯಾಗಿ ಇದೊಂದು ಹೆಮ್ಮೆಯ ಕ್ಷಣ ಎಂದು ಪ್ರತಿಕ್ರಿಯಿಸಿದ್ದಾರೆ. ಮುತ್ಯಾಲರೆಡ್ಡಿ ಮಗನಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದು, ಕೆಲಸವನ್ನೂ ತ್ಯಜಿಸಿದ್ದಾರೆ. ವಿಶ್ವ ಕ್ರಿಕೆಟ್ ಮತ್ತು ಭಾರತ ತಂಡಕ್ಕೆ ಡೈಮಂಡ್ ನಂತಹ ಆಟಗಾರನನ್ನು ಮುತ್ಯಾಲ ರೆಡ್ಡಿ ಒದಗಿಸಿಕೊಟ್ಟಿದ್ದಾರೆ ಎಂದು ಗವಾಸ್ಕರ್ ಶ್ಲಾಘಿಸಿದರು.
ನಿತೀಶ್ ಕುಮಾರ್ ಭರ್ಜರಿ ಬ್ಯಾಟಿಂಗ್
ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕ್ರೀಸ್ ಗೆ ಬಂದ ನಿತೀಶ್ ಕುಮಾರ್ ತಮ್ಮ ಅದ್ಬುತ ಬ್ಯಾಟಿಂಗ್ ಶೈಲಿಯಿಂದ ದಿಗ್ಗಜ ಕ್ರಿಕೆಟಿಗರ ಪ್ರಶಂಸೆ ಪಡೆದರು. ಭಾರತದ ಕ್ರಿಕೆಟ್ ಅಭಿಮಾನಿಗಳು ನಿತೀಶ್ ಅವರ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ಆಸ್ಟ್ರೇಲಿಯಾದ ಬೌಲರ್ ಗಳಾದ ಸ್ಟಾರ್ಕ್, ಕಮಿನ್ಸ್, ಬೋಲ್ಯಾಂಡ್ ಸೇರಿದಂತೆ ವಿಶ್ವದರ್ಜೆಯ ವೇಗಿಗಳು ಸ್ವಿಂಗ್ ಮತ್ತು ಬೌನ್ಸರ್ ಗಳಿಗೆ ನಿತೀಶ್ ಕುಮಾರ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಕ್ರೀಸ್ ನಲ್ಲಿ ನೆಲೆಯೂರಿ ಅದ್ಬುತ ಶತಕ ಸಿಡಿಸಿದ್ದರು. ಅವಕಾಶ ಸಿಕ್ಕಾಗ ಆಕ್ರಮಣಕಾರಿ ಆಟವಾಡುತ್ತಾ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಚೊಚ್ಚಲ ಶತಕ ಸಿಡಿಸಿದರು.