ಬೆಳಗಾವಿ: ವ್ಯಕ್ತಿಯೊಬ್ಬರ ಪಾನ್ ಬೀಡ ಅಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ರೌಡಿ ಶೀಟರ್ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬೆಳಗಾವಿಯ ವಡಗಾವಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಗೋಳಿಯಂಗಡಿ ಸಮೀಪದ ಹಿಲಿಯಾಣದ ಮೂಲದ ನಿವಾಸಿ ಬಾಲಕೃಷ್ಣ ಶೆಟ್ಟಿ (54) ಎಂದು ತಿಳಿದು ಬಂದಿದೆ.
ಅವರು ಬೆಳಗಾವಿಯ ವಡಗಾವಿಯಲ್ಲಿ ಪಾನ್ ಬೀಡ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ.
ಬಾಲಕೃಷ್ಣ ಶೆಟ್ಟಿ ಅವರನ್ನು ರೌಡಿಶೀಟರ್ ದತ್ತಾತ್ರೇಯ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಮಂಗಳವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾತ್ರೇಯ ಆಲಿಯಾಸ್ ದತ್ತ ಶಿವಾನಂದ ಜಾಂತಿಕಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ದತ್ತ ಮಂಗಳವಾರ ಮಧ್ಯಾಹ್ನ ಬೆಳಗಾವಿ ವಡಗಾವಿಯ ಬಾಲಕೃಷ್ಣ ಶೆಟ್ಟಿ ಅವರ ಬೀಡಾ ಅಂಗಡಿಗೆ ಬಂದು ಗುಟ್ಕಾ ಕೇಳಿದ್ದಾನೆ.
ಆಗ ಬಾಲಕೃಷ್ಣ ಶೆಟ್ಟಿ ಹಣ ಕೇಳಿದಾಗ ಇಬ್ಬರ ಮಧ್ಯೆ ಜಗಳವಾಗಿತ್ತು. ಆಗ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದ ಎಂದು ತಿಳಿಯಲಾಗಿದೆ.
ಇದರಿಂದ ಭಯಭೀತಗೊಂಡ ಬಾಲಕೃಷ್ಣ ಶೆಟ್ಟಿ ಪಾನ್ ಶಾಪ್ ಬಂದ್ ಮಾಡಿ ಬೇರೆಯವರ ಮನೆಯಲ್ಲಿ ಉಳಿದುಕೊಂಡಿದ್ದರು.
ರಾತ್ರಿ ಮನೆಗೆ ಹೋದಾಗ ದತ್ತ ಏಕಾಏಕಿ ನುಗ್ಗಿ ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಾಲಕೃಷ್ಣ ಶೆಟ್ಟಿಯವರು 35 ವರ್ಷಗಳಿಂದ ಲಕ್ಷ್ಮೀ ನಗರದಲ್ಲಿ ಪಾನ್ ಬೀಡ ಅಂಗಡಿ ನಡೆಸುತ್ತಿದ್ದರು. ಪತ್ನಿ, ಪುತ್ರ, ಪುತ್ರಿಯೊಂದಿಗೆ ಅಲ್ಲಿಯೇ ನೆಲೆಸಿದ್ದರು ಎನ್ನಲಾಗಿದೆ.
ಬಾಲಕೃಷ್ಣ ಅವರ ಮನೆ ಗೋಳಿಯಂಗಡಿ ಸಮೀಪದ ಹಿಲಿಯಾಣ. ಪತ್ನಿ ಮನೆ ಗುಜ್ಜಾಡಿ ಗ್ರಾಮದ ಮಂಕಿ. ಶೆಟ್ಟಿಯವರ ಪತ್ನಿ ಮತ್ತು ಮಕ್ಕಳು ಸೋಮವಾರ ರಾತ್ರಿ ಬೆಳಗಾವಿಯಿಂದ ಊರಿಗೆ ಆರೋಪಿ ಮಂಗಳವಾರ ಬೆಳಗ್ಗಿನ ಜಾವ ಊರಿಗೆ ಬಂದಿದ್ದರು ಎನ್ನಲಾಗಿದೆ.
ಬೆಳಗಾವಿ ಪೊಲೀಸರು ಕೊಲೆಗೈದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.