ಬೆಂಗಳೂರು: ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಿದ ಕೆಲವೇ ದಿನಗಳಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಗುತ್ತಿಗ ಆಧಾರದ ಮೇಲೆ ಪಡೆಯುವ ಬಸ್ ಗಳ ಪ್ರಯಾಣ ದರವನ್ನೂ ಹೆಚ್ಚಳ ಮಾಡಿದೆ.
ಪ್ರವಾಸ, ತೀರ್ಥ ಯಾತ್ರೆ, ರಾಜಕೀಯ ರ್ಯಾಲಿ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಕೆಎಸ್ಆರ್’ಟಿಸಿ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಈ ಬಸ್ ಗಳ ದರವನ್ನೂ ಇದೀಗ ಪರಿಷ್ಕರಿಸಲಾಗಿದೆ. ಇಷ್ಟು ದಿನ ಪ್ರತಿ ಕಿಮೀ.ಗೆ 47 ರೂ ದರದಲ್ಲಿ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಈ ದರನ್ನು 54 ರೂ.ಗೆ ಪರಿಷ್ಕರಿಸಲಾಗಿದ್ದು, ಇದರ ಪರಿಣಾಮ ಪ್ರತಿ ಕಿ.ಮೀ.ಗೆ 7 ರೂ. ಹೆಚ್ಚಳವಾಗಿದೆ. ಕರ್ನಾಟಕದ ಹೊರಗಿನ ಸೇವೆಗಳಿಗೆ, ಪ್ರತಿ ಕಿ.ಮೀ.ಗೆ 50 ರೂ.ನಿಂದ 57 ರೂ.ಗೆ ಹೆಚ್ಚಿಸಲಾಗಿದೆ.
ರಾಜ್ಯದೊಳಗೆ ಪ್ರತಿ ಕಿ.ಮೀ.ಗೆ 52 ರೂ.ನಂತೆ ಕಾರ್ಯನಿರ್ವಹಿಸುತ್ತಿದ್ದ ಅಶ್ವಮೇಧ ಸೇವೆಗಳನ್ನು ಪ್ರತಿ ಕಿ.ಮೀ.ಗೆ 58 ರೂ.ಗೆ ಹೆಚ್ಚಿಸಲಾಗಿದೆ, ಇದರಂತೆ ಪ್ರತಿ ಕಿ.ಮೀ.ಗೆ 6 ರೂ. ಹೆಚ್ಚಳವಾಗಿದೆ. ರಾಜಹಂಸ, ಐರಾವತ, ಪಲ್ಲಕ್ಕಿ, ಅಂಬಾರಿ, ಮಿಡಿ ಬಸ್, ಎಸಿ ಅಲ್ಲದ ಸ್ಲೀಪರ್, ಫ್ಲೈ ಬಸ್ ಮತ್ತು ಇತರ ಎಲ್ಲಾ ಬಸ್ ಸೇವೆಗಳ ದರವನ್ನೂ ಹೆಚ್ಚಳ ಮಾಡಲಾಗಿದೆ.
ಮುಂಗಡವಾಗಿ ಸೇವೆಗಳನ್ನು ಬುಕ್ ಮಾಡಿದವರಿಗೆ ಹಳೆಯ ದರಗಳ ಪ್ರಕಾರ ಶುಲ್ಕ ವಿಧಿಸಲಾಗುತ್ತದೆ. ಅಶ್ವಮೇಧದ ದರಗಳು ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 58 ರೂ. ಮತ್ತು ರಾಜ್ಯದ ಹೊರಗೆ 61 ರೂ. ಇರಲಿದೆ. ರಾಜಹಂಸ ಬಸ್ ಸೇವೆ ದರ ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 59 ರೂ. ಮತ್ತು ಹೊರಗೆ 63 ರೂ., ಪಲ್ಲಕ್ಕಿ ಬಸ್‌ಗಳ ದರ ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 80 ರೂ. ಮತ್ತು ರಾಜ್ಯದ ಹೊರಗೆ 85 ರೂ ಇರಲಿದೆ.
ಜನವರಿ 7 ರಂದು ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದ್ದು, ಡೀಸೆಲ್ ದರ ಹೆಚ್ಚಳ ಮತ್ತು ನೌಕರರ ವೇತನದಲ್ಲಿನ ಹೆಚ್ಚಳದಿಂದಾಗಿ ಕಾರ್ಯಾಚರಣೆಯ ವೆಚ್ಚದಲ್ಲಿ ಹೆಚ್ಚಳ ಮಾಡಲಾಗಿದೆ. ನಿಯಮಿತ ದೈನಂದಿನ ಕಾರ್ಯಾಚರಣೆಗಳಿಂದ ಬರುವ ಆದಾಯದ ಜೊತೆಗೆ, ಒಪ್ಪಂದದ ಸೇವೆಗಳು ಬಸ್ ನಿಗಮಕ್ಕೆ ಆದಾಯದ ಪ್ರಮುಖ ಮೂಲಗಳಾಗಿವೆ. ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.