ಕೊಲ್ಲೂರು : ಇಲ್ಲಿನ ಮೂಕಾಂಬಿಕಾ ದೇವಸ್ಥಾನದಲ್ಲಿ 21.50 ಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದರು. ಈ ವೇಳೆ ಅವ್ಯವಹಾರ ಬಗ್ಗೆ ಯಾವುದೇ ಕಾಗದ ಪತ್ರ, ಮನವಿ ಪತ್ರ ಇಲ್ಲದಿರುವುದರಿಂದ ಜು.16ರಕ್ಕೆ ವಿಚಾರಣೆ ಮುಂದೂಡಲಾಯಿತು.
ಘಟನೆ ಹಿನ್ನೆಲೆ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಅವ್ಯವಹಾರಗಳ ತನಿಖೆ ಮಾಡಲು ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದಿಂದ ಇದೇ ಮಾರ್ಚ್ 18 ರಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿತ್ತು. ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಮಾಹಿತಿ ನೀಡದ ಕಾರಣ ದೇವಸ್ಥಾನ ಮಹಾಸಂಘದಿಂದ ದಿನಾಂಕ ಏ.17 ರಂದು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಪ್ರಕರಣದ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆ ಕೇಳಲಾಗಿತ್ತು. ಇದಕ್ಕೂ ಯಾವುದೇ ಉತ್ತರ ಬಾರದಿರುವಾಗ ದಿನಾಂಕ ಜೂ. 15 ರಂದು ಮತ್ತೆ ಮೇಲ್ಮನವಿಯನ್ನು ಸಲ್ಲಿಸಲಾಯಿತು.
ಈ ಮೇಲ್ಮವಿಯ ವಿಚಾರಣೆಗಾಗಿ ಜು.2ರಂದು ರಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಅರ್ಜಿದಾರರ ಜೊತೆಗೆ ಝೂಮ್ ಮೀಟಿಂಗ್ ಮೂಲಕ ಸಮಸ್ಯೆ ಬಗೆಹರಿಸಲು ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಅರ್ಜಿದಾರರು ಉಪಸ್ಥಿತರಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಅವ್ಯವಹಾರಗಳ ಮನವಿಯ ಬಗ್ಗೆ ವಿಚಾರಿಸಿದಾಗ ಅಲ್ಲಿನ ಅಧಿಕಾರಿಗಳ ಬಳಿ ಅದಕ್ಕೆ ಸಂಬಂಧಿಸಿದ ಯಾವುದೇ ಕಾಗದ ಪತ್ರ, ಮನವಿ ಪತ್ರ ಇಲ್ಲದಿರುವುದು ಗಮನಕ್ಕೆ ಬಂದಿತು. ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವಿಚಾರಣೆಯನ್ನು ದಿನಾಂಕ 16 ಜುಲೈಗೆ ಮುಂದೂಡಿದರು.
ರಾಜ್ಯ, ರಾಷ್ಟ್ರದಲ್ಲೇ ಹೆಸರು ಮಾಡಿದ ದೇವಸ್ಥಾನ ಅಧಿಕಾರಿಗಳು ಸಾರ್ವಜನಿಕರು ನೀಡಿದ ಮನವಿ, ಪತ್ರದ, ಪತ್ರ ವ್ಯವಹಾರಗಳ ಬಗ್ಗೆ ಎಷ್ಟು ಜವಾಬ್ದಾರಿಯಿಂದ ಅದರ ನಿರ್ವಹಣೆ ಮಾಡುತ್ತಾರೆ ಎಂಬ ಪ್ರಶ್ನೆ ನಿರ್ಮಾಣವಾಗಿದೆ. ಇಲಾಖೆಯ ಒಂದು ದೇವಸ್ಥಾನ ಅವ್ಯವಹಾರಗಳ ಬಗ್ಗೆ ಇಷ್ಟು ದುರ್ಲಕ್ಷ್ಯ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.