ಬೆಂಗಳೂರು: ರಾಜಧಾನಿಯಲ್ಲಿ ಇನ್ನು ಮುಂದೆ ನಂದಿನಿ ಹಾಲಿನ ಜತೆಗೆ ನಂದಿನಿ ಬ್ರ್ಯಾಂಡ್‌ನ ಇಡ್ಲಿ ಮತ್ತು ದೋಸೆ ಹಿಟ್ಟು ಕೂಡ ಸಿಗಲಿದೆ. ‘ನಂದಿನಿ’ ಬ್ರ್ಯಾಂಡ್‌ನ ಮೌಲ್ಯ ವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿವು (ಕೆಎಂಎಫ್) ಪರಿಚಯಿಸಿರುವ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬಿಡುಗಡೆ ಮಾಡಿದರು.
ಕೆಎಂಎಫ್, ಹಾಲು ಹಾಗೂ ಹಾಲಿನ ಉತ್ಪನ್ನಗಳ ಉತ್ಪಾದನೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪಾದಿಸುವುದಾಗಿ ಈ ಹಿಂದೆಯೇ ಘೋಷಿಸಿತ್ತು. ಆದರೆ, ಕಾರಣಾಂತರಗಳಿಂದ ಈ ಉತ್ಪನ್ನಗಳ ಬಿಡುಗಡೆ ವಿಳಂಬವಾಗಿತ್ತು. ತಡವಾದರೂ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ನಂದಿನಿ ಪಾರ್ಲರ್‌ಗಳಲ್ಲಿ ಈ ಉತ್ಪನ್ನಗಳ ಮಾರಾಟ ಆರಂಭವಾಗಿದೆ.
ರೆಡಿ ಟು ಕುಕ್ ಪರಿಕಲ್ಪನೆಯಡಿ ಐಟಿ-ಬಿಟಿ ಕಂಪನಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಸಿಲಿಕಾನ್ ಸಿಟಿಯಲ್ಲಿ ಜನರಿಗೆ ಕಾಲಾವಕಾಶ ತುಂಬಾ ಕಡಿಮೆ. ಹೀಗಾಗಿ, ಕೆಎಂಎಫ್ ‘ರೆಡಿ ಟು ಕುಕ್’ ಪರಿಕಲ್ಪನೆಯಡಿ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಾಲಿನ ಉಪ ಉತ್ಪನ್ನ ‘ವೇ ಪೌಡರ್’ ಮತ್ತು ಗೋಧಿ ಬೆರೆಸಿ ತಯಾರಿಸಲಾಗುವ ಈ ಹಿಟ್ಟಿನಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚಿದೆ. ಇದು ಶುದ್ಧ ಸಸ್ಯಾಹಾರಿ ಉತ್ಪನ್ನವಾಗಿದೆ.
ದರವೆಷ್ಟು?
ಪ್ರಾಯೋಗಿಕವಾಗಿ ಬೆಂಗಳೂರು ನಗರದಲ್ಲಿ ಎರಡು ವಿವಿಧ ಪ್ಯಾಕ್‌ಗಳಲ್ಲಿ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರಾಟ ಮಾಡಲಾಗುತ್ತಿದೆ. 450 ಗ್ರಾಂ. ಪ್ಯಾಕೆಟ್‌ಗೆ 40 ರೂ. ಹಾಗೂ 900 ಗ್ರಾಂ. ಪ್ಯಾಕೆಟ್‌ಗೆ 80 ರೂ. ದರ ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಗ್ರಾಹಕರ ಪ್ರತಿಕ್ರಿಯೆ ಅವಲೋಕಿಸಿ, ರಾಜ್ಯ ಮತ್ತು ದೇಶದ ಇತರೆ ನಗರಗಳಿಗೂ ನಂದಿನಿ ಇಡ್ಲಿ, ದೋಸೆ ಹಿಟ್ಟಿನ ಮಾರಾಟ ವಿಸ್ತರಿಸಲಾಗುತ್ತದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.