ಮಂಗಳೂರು : ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆಯ ಅಧಿಕಾರಿಗಳು ಇರಿಸಿದ ಬೋನಿಗೆ ಬಿದಿದ್ದು, ಚಿರತೆಯನ್ನು ರಕ್ಷಣೆ ಮಾಡಿ ದೂರದ ಕಾಡಿಗೆ ಅಟ್ಟಲಾಗಿದೆ.
ಇಲ್ಲಿನ ಸಮೀಪದ ದಾಮಸ್ಕಟ್ಟೆಯ ತುಡಾಮ್ ಬಳಿ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಬುಧವಾರ ತಡರಾತ್ರಿ ಚಿರತೆ ಬಿದ್ದಿದೆ.
ಕಳೆದ ಕೆಲವು ದಿನಗಳಿಂದ ಕಿನ್ನಿಗೋಳಿ ಪರಿಸರದ ಏಳಿಂಜೆ ಕೊಲ್ಲೂರು ಪದವು, ಗುತ್ತಗಾಡು ದಾಮಸ್ಕಟ್ಟೆ ಪರಿಸರದಲ್ಲಿ ಚಿರತೆ ಕಾಟ ವಿಪರೀತವಾಗಿದ್ದು, ಸ್ಥಳೀಯರು ಭಯ ಭೀತರಾಗಿದ್ದರು, ಅನೇಕ ಸಾಕು ಪ್ರಾಣಿಗಳು ಚಿರತಗಳಿಗೆ ಆಹಾರವಾಗಿತ್ತು.
ಈ ವಿಚಾರವನ್ನು ಸ್ಥಳೀಯರು ಕಿನ್ನಿಗೋಳಿಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಕೂಡಲೇ ಸ್ಥಳೀಯರ ದೂರಿಗೆ ಸ್ಪಂದಿಸಿದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ತಿಂಗಳಿನಿಂದ ಚಿರತೆಯನ್ನು ಹಿಡಿಯಲು ಕಾರ್ಯಪ್ರವೃತ್ತರಾಗಿದ್ದರು.
ಅದರಂತೆ ದಾಮಸ್ಕಟ್ಟೆಯ ತುಡಾಮ್ ಬಳಿ ಚಿರತೆ ಹಿಡಿಯಲು ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು, ಅರಣ್ಯ ಅಧಿಕಾರಿಗಳಾದ ರಾಜು ನೇತೃತ್ವದಲ್ಲಿ ಬೋನ್ ನಲ್ಲಿ ಸೆರೆಯಾದ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.