ದೆಹಲಿ: ಸ್ವಯಂಘೋಷಿತ ಉಗ್ರಗಾಮಿ ಸಿಖ್ ಧರ್ಮ ಪ್ರಚಾರಕ ಮತ್ತು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿದ್ದ ಅಮೃತಪಾಲ್ ಸಿಂಗ್ನ್ನು ಪಂಜಾಬ್ ಪೊಲೀಸರು ಇಂದು ಬಂಧಿಸಿದ್ದಾರೆ. ಈ ಮಧ್ಯೆ ಮೊಗಾ ಜಿಲ್ಲೆಯಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಿದ್ದು, ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
ಇಂದು ಏಳು ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರನ್ನು ಬೆನ್ನಟ್ಟಿದ್ದು, ಜಲಂಧರ್‌ನ ಶಾಕೋಟ್ ತೆಹಸಿಲ್‌ನ ಮೆಹತ್‌ಪುರ ಗ್ರಾಮದಲ್ಲಿ ಈತನನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಫೆಬ್ರುವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಅವರು ಆರಂಭಿಸಿದ “ವಾರಿಸ್ ಪಂಜಾಬ್ ದೇ” ಎಂಬ ಮೂಲಭೂತ ಸಂಘಟನೆಯನ್ನು ಅಮೃತಪಾಲ್ ಮುನ್ನಡೆಸುತ್ತಿದ್ದಾರೆ.
ಕೆಲವು ವರ್ಷಗಳಿಂದ ಪಂಜಾಬ್‌ನಲ್ಲಿ ಸಕ್ರಿಯವಾಗಿರುವ ತೀವ್ರಗಾಮಿ ಪ್ರತ್ಯೇಕತಾವಾದಿ ನಾಯಕ ಸಿಂಗ್ ಆಗಾಗ್ಗೆ ಶಸ್ತ್ರಸಜ್ಜಿತ ಬೆಂಬಲಿಗರ ಬೆಂಗಾವಲಿನೊಂದಿಗೆ ಕಾಣಿಸುತ್ತಿದ್ದ. ಅಮೃತಪಾಲ್ ಸಿಂಗ್ನ ಪ್ರಮುಖ ಸಹಾಯಕ, ಅಪಹರಣ ಆರೋಪಿ ಲವ್‌ಪ್ರೀತ್ ಸಿಂಗ್ ಬಂಧನದ ವಿರುದ್ಧ ಫೆ.23 ರಂದು ನಡೆದ ಬೃಹತ್ ಪ್ರತಿಭಟನೆಯಲ್ಲಿ ಈತ ಕಾಣಿಸಿದ್ದ.
ಈತನ ಬೆಂಬಲಿಗರಲ್ಲಿ ಕೆಲವರು ಕತ್ತಿ ಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್‌ಗಳನ್ನು ಭೇದಿಸಿ ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾದಲ್ಲಿನ ಪೊಲೀಸ್ ಠಾಣೆಗೆ ನುಗ್ಗಿದ್ದರು. ಈ ಘರ್ಷಣೆಯಲ್ಲಿ ಎಸ್‌ಪಿ ಶ್ರೇಣಿಯ ಅಧಿಕಾರಿ ಸೇರಿದಂತೆ ಆರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.