ಪಣಜಿ : ಕೆಜಿಎಫ್ 2 ಯಶಸ್ಸಿನ ನಾಗಲೋಟ ಇನ್ನೂ ಕೂಡ ಮುಂದುವರೆಯುತ್ತಿದ್ದು ಸಾವಿರ ಕೋಟಿ ಕ್ಲಬ್ ಈಗಾಗಲೇ ಸೇರಿಕೊಂಡಿದೆ.ಈ ಮಧ್ಯೆ ನಟ ಯಶ್ ದಂಪತಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪಣಜಿಯಲ್ಲಿ ಗೋವಾ ಸಿಎಂ ಅವರನ್ನು ಭೇಟಿ ಮಾಡಿದ ಯಶ್ ದಂಪತಿ ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಅತ್ತ ಗೋವಾ ಸಿಎಂ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಫೊಟೋಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ಸೂಪರ್ಸ್ಟಾರ್ ಯಶ್, ಪತ್ನಿ ರಾಧಿಕಾ ಪಂಡಿತ್ ಹಾಗೂ ಅವರ ತಂಡವನ್ನು ಭೇಟಿ ಮಾಡಿ ಖುಷಿಯಾಗಿದೆ ಎಂದು ಸಾವಂತ್ ಟ್ವೀಟ್ನಲ್ಲಿ ಬರೆದಿದ್ದಾರೆ.
ರಾಧಿಕಾ ಪಂಡಿತ್ ಅವರ ತಾಯಿಯ ಊರು ಗೋವಾ ಆಗಿದ್ದು, ಇಲ್ಲಿಯೇ ರಾಧಿಕಾ ಯಶ್ ನಿಶ್ಚಿತಾರ್ಥ ನಡೆದಿತ್ತು.
ಹೀಗಾಗಿ ಗೋವಾದ ಜೊತೆ ಯಶ್ ದಂಪತಿಗೆ ಉತ್ತಮ ನಂಟಿದೆ.ಅಲ್ಲದೇ, ‘ಕೆಜಿಎಫ್ 2’ ಚಿತ್ರ ಬಿಡುಗಡೆಗೆ ಮುನ್ನ ಬೇರೆ-ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡಿದ್ದರು.
ಸಿನಿಮಾ ತೆರೆಗೆ ಬಂದ ಮೇಲೆ ಯಶ್ ದಂಪತಿ ಗೋವಾಕ್ಕೆ ಹಾರಿದ್ದರು. ಅಲ್ಲಿ ಕುಟುಂಬದ ಸಮೇತವಾಗಿ ಸಮಯ ಕಳೆದಿದ್ದರು. ಕೆಜಿಎಫ್ 2 ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ.