ಬೆಂಗಳೂರು: ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಕೆಜಿಎಫ್ 2’ ಚಿತ್ರ ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಸದ್ಯ ಸುದ್ದಿಯಾಗಿರೋದು ಈ ಸಿನಿಮಾದ ಆಡಿಯೋ ಹಕ್ಕುಗಳು ಮಾರಾಟಕ್ಕೆ.
‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಹಾಡು ಹಕ್ಕು ಖರೀದಿಸಿದ್ದ ‘ಲಹರಿ ಮ್ಯೂಸಿಕ್’ ಕಂಪನಿಯು ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಆಡಿಯೋ ರೈಟ್ಸ್ ಖರೀದಿ ಮಾಡಿದೆ. ಚಿತ್ರತಂಡದ ಮೂಲಗಳ ಪ್ರಕಾರ, ‘ಕೆಜಿಎಫ್: ಚಾಪ್ಟರ್ 1′ ಚಿತ್ರದ ಹಾಡುಗಳು ಆಗ 3.60 ಕೋಟಿಗೆ ವ್ಯವಹಾರ ಕುದುರಿತ್ತು. ಈಗ ಅದಕ್ಕಿಂತಲೂ ದುಪ್ಪಟ್ಟ ಹಣ ನೀಡಿ ‘ಕೆಜಿಎಫ್: ಚಾಪ್ಟರ್ 2’ ಆಡಿಯೋವನ್ನು ಲಹರಿ ಸಂಸ್ಥೆ ಖರೀದಿಸಿದೆ. ಕೇಳಿಬಂದಿರುವ ಮಾಹಿತಿ ಪ್ರಕಾರ 6 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತಕ್ಕೆ ಆಡಿಯೋ ರೈಟ್ಸ್ ಮಾರಾಟ ಆಗಿದೆ. ಜು.1ರ ರಾತ್ರಿ ಅಧಿಕೃತವಾಗಿಯೇ ಈ ಬಗ್ಗೆ ಮಾಹಿತಿ ಬಹಿರಂಗ ಆಗಲಿದೆ.
ಈ ಸಿನಿಮಾದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ನೀಲ್ ಚಿತ್ರ ನಿರ್ದೇಶನ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಎಲ್ಲ ಭಾಷೆಯ ಆಡಿಯೋ ರೈಟ್ಸ್ ಲಹರಿ ಸಂಸ್ಥೆಯ ಪಾಲಾಗಿದೆ.
ಆಡಿಯೋ ಹಕ್ಕು ಮಾರಾಟಕ್ಕೆ ಸಂಬಂಧಿಸಿದಂತೆ ಇಂದು ಹೊಂಬಾಳೆ ಫಿಲ್ಮ್ಸ್ ಜೊತೆ ಲಹರಿ ಸಂಸ್ಥೆ ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ. ಲಹರಿ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಅವರು ಇಂದು ಸಹಿ ಹಾಕಿದ್ದಾರೆ. ಆದಷ್ಟು ಬೇಗ ಆಡಿಯೋ ರಿಲೀಸ್ ಆಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.