ಮಂಗಳೂರು/ಶ್ರೀನಗರ : ಲಡಾಖ್ ಗೆ ಸೇನಾ ಸಂಪರ್ಕವನ್ನು ಸುಲಭವಾಗಿಸುವ, ರಾಷ್ಟ್ರೀಯ ಭದ್ರತೆಯ ನಿಟ್ಟಿನಲ್ಲಿ ಪ್ರಮುಖವೆನಿಸಿರುವ ಝೆಡ್-ಮೋರ್ (ಘಮೋರ್) ಸುರಂಗವು ಲೋಕಾರ್ಪಣೆಗೆ ಸಜ್ಜಾಗಿದೆ.
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ 2,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ 6.5 ಕಿ.ಮೀ. ಉದ್ದದ ಈ ಸುರಂಗವನ್ನು ಇಂದು (ಸೋಮವಾರ) ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ವ್ಯೂಹಾತ್ಮಕವಾಗಿ ಪ್ರಾಮುಖ್ಯ ಪಡೆದಿರುವ ಲಡಾಖ್ ಪ್ರದೇಶಕ್ಕೆ ಈ ಸುರಂಗವು ವರ್ಷಪೂರ್ತಿ ಸಂಪರ್ಕ ಕಲ್ಪಿಸಲಿದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾಶ್ಮೀರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಸುರಂಗ ಲೋಕಾರ್ಪಣೆ ಬಳಿಕ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಏನಿದರ ವಿಶೇಷತೆ?
ಪ್ರಾಕೃತಿಕವಾಗಿಯೂ ರಮ್ಯ ತಾಣವಾಗಿರುವ ಪ್ರದೇಶಕ್ಕೆ ಸರ್ವ ಋತುವಿನಲ್ಲಿ ಮತ್ತು ಎಂಥದ್ದೇ ಹವಾಮಾನವಿದ್ದರೂ ಈ ಸುರಂಗವು ಸಂಪರ್ಕ ಒದಗಿಸಲಿದೆ. ವಿಶೇಷವಾಗಿ ಸೋನಾಮಾರ್ಗ್ ಅಭಿವೃದ್ದಿ ಪ್ರಾಧಿಕಾರ (ಎಸ್ ಡಿಎ) ನಿರ್ಮಿಸಿರುವ ಅತ್ಯಾಧುನಿಕ ಐಸ್-ಸ್ಕೇಟಿಂಗ್ ರಿಂಕ್ ಚಳಿಗಾಲದ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಹೊಸ ಭರವಸೆಯನ್ನು ಹುಟ್ಟುಹಾಕಿದೆ.
ಐಸ್-ಸ್ಕೇಟಿಂಗ್ ರಿಂಕ್, ಈಗಗಾಲೇ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಚಳಿಗಾಲದ ಕ್ರೀಡಾ ತಾಣವಾಗಿ ಸೋನಾಮಾರ್ಗ್ ಹೊಸ ಯುಗಕ್ಕೆ ನಾಂದಿ ಹಾಡಿದೆ. ಇದು ಪ್ರವಾಸಿಗರನ್ನಷ್ಟೇ ಆಕರ್ಷಿಸುತ್ತಿಲ್ಲ. ಇದು ಸ್ಥಳೀಯ ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಸೇನೆಗೆ ಅನುಕೂಲ
ಪಾಕ್, ಚೀನ ಜತೆ ಲಡಾಖ್ ಗಡಿ ಹಂಚಿಕೊಂಡಿರುವ ಕಾರಣ ಈ ಸುರಂಗವು ರಾಷ್ಟ್ರೀಯ ಭದ್ರತೆ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಸುರಂಗ ಹಾಗೂ ನಿರ್ಮಾಣ ಹಂತದಲ್ಲಿರುವ ಝೋಜಿಲಾ ಸುರಂಗವು ಭವಿಷ್ಯದಲ್ಲಿ ಲಡಾಖ್ ಗೆ ಸರ್ವ ಋತು ಸಂಪರ್ಕ ಒದಗಿಸಲಿದೆ. ನಾಗರಿಕರು ಮತ್ತು ಸೇನಾ ಸಂಚಾರ (ಸೇನಾ ಸಿಬ್ಬಂದಿ, ಸಲಕರಣೆಗಳು ಹಾಗೂ ಇತರ ಪೂರೈಕೆಗಳು)ಕ್ಕೆ ಇದರಿಂದ ಅನುಕೂಲ ಆಗಲಿದೆ.
ಜತೆಗೆ, ದೇಶದ ಉಳಿದ ಭಾಗಗಳ ಜತೆ ಲಡಾಖ್ ಸಂಪರ್ಕ ಹೊಂದಲು, ಆ ಮೂಲಕ ವ್ಯಾಪಾರ-ವಹಿವಾಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.
ಮಂಗಳೂರು/ಪ್ರಯಾಗರಾಜ್ : ಇಂದು ಬೆಳಗ್ಗೆ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ಆರಂಭಗೊಂಡಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮಿಸುವ ಸ್ಥಳವಾದ ಸಂಗಮ್ ನಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಮೊದಲ ಪವಿತ್ರ ಸ್ನಾನ ಮಾಡಿದರು.
ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಇಂದು (ಜನವರಿ 13) ಆರಂಭವಾಗಿ 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ.
ವಿಶ್ವದ ಮಾನವೀಯತೆಯ ಅತಿ ದೊಡ್ಡಸಭೆ ಎಂದು ಕರೆಯಲ್ಪಡುವ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಹಾ ಕುಂಭಮೇಳವು 40 ಕೋಟಿಗೂ ಹೆಚ್ಚು ಜನರನ್ನು ಪ್ರಯಾಗರಾಜ್ ಗೆ ಕರೆತರುವ ನಿರೀಕ್ಷೆಯಿದೆ. ಇದು ಅಮೆರಿಕ ಮತ್ತು ರಷ್ಯಾದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ.
ಮೂರು ನದಿಗಳ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
ದೇಶದ ಮೂರು ಮಹಾನದಿಗಳ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು) ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡುವುದರಿಂದ ಜನರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ.
ಹೀಗಾಗಿ ದೇಶದ ಮೂಲೆ ಮೂಲೆಯಿಂದ ಜನ ಕುಂಭಮೇಳಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತರಿಗಾಗಿ 10,000 ಹೆಕ್ಟೇರ್ ಗಳ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್ ಗಳನ್ನು ನಿರ್ಮಿಸಲಾಗಿದೆ. ಶೌಚಾಲಯ, ಸ್ವಚ್ಛತೆ ಸೇರಿದಂತೆ ಮೊದಲೆಂದಿಗಿಂತಲೂ ಈ ಬಾರಿ ಭಕ್ತರಿಗಾಗಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಮಾಡಲಾಗಿದೆ.
ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು?
2025ರ ಮಹಾ ಕುಂಭಮೇಳದಿಂದ ಉತ್ತರಪ್ರದೇಶದ ಆರ್ಥಿಕತೆ, 2 ಲಕ್ಷ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಪ್ರತಿ 40 ಕೋಟಿ ಸಂದರ್ಶಕರು ಸರಾಸರಿ 5,000 ರೂಪಾಯಿಗಳನ್ನು ಖರ್ಚು ಮಾಡಿದರೆ, ಮಹಾ ಕುಂಭಮೇಳದಿಂದ 2 ಲಕ್ಷ ಕೋಟಿ ಗಳಿಸಬಹುದು ಎಂದು ನೀರಿಕ್ಷಿಸಲಾಗಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ಪ್ಯಾಕ್ ಮಾಡಿದ ಆಹಾರಗಳು, ನೀರು, ಬಿಸ್ಕೆಟ್ ಗಳು, ಜ್ಯೂಸ್ ಮತ್ತು ಊಟ, ತಂಪು ಪಾನೀಯಗಳು ಸೇರಿದಂತೆ ಒಟ್ಟು ವ್ಯಾಪಾರದ ಮೂಲಕ 20,000 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಅಲ್ಲದೆ ತೈಲ, ದೀಪಗಳು, ಗಂಗಾಜಲ, ವಿಗ್ರಹಗಳು, ಧೂಪದ್ರವ್ಯಗಳು, ಧಾರ್ಮಿಕ ಪುಸ್ತಕಗಳು ಮತ್ತು ಕೊಡುಗೆಗಳು ಆರ್ಥಿಕತೆಯ ಮತ್ತೊಂದು ಭಾಗವಾಗಿದ್ದು, ಅಂದಾಜು 20,000 ಕೋಟಿ ರೂ. ತಲುಪಬಹುದು ಎಂದು ನೀರಿಕ್ಷಿಸಲಾಗಿದೆ.
ಸ್ಥಳೀಯ ಮತ್ತು ಅಂತರಾಜ್ಯ ಸಾರಿಗೆ ಸೇವೆಗಳು, ಸರಕು ಸಾಗಣೆ ಮತ್ತು ಟ್ಯಾಕ್ಸಿಗಳು ಸೇರಿದಂತೆ ಸಾರಿಗೆ ಮತ್ತು ಲಾಜಿಸ್ಟಿಕ್ಸ್ 10,000 ಕೋಟಿ ರೂಪಾಯಿಗಳನ್ನು ಅಂದಾಜಿಸಲಾಗಿದೆ. ಅಲ್ಲದೆ ಪ್ರವಾಸೋದ್ಯಮ ಸೇವೆಗಳಾದ ಟೂರ್ ಗೈಡ್ ಗಳು, ಟ್ರಾವೆಲ್ ಪ್ಯಾಕೇಜ್ ಗಳು ಮತ್ತು ಇತರೆ ಮೂಲಗಳಿಂದ 10,000 ಕೋಟಿ ರೂಪಾಯಿಗಳು ಬರುವ ಸಾಧ್ಯತೆಯಿದೆ.
ತಾತ್ಕಲಿಕ ವೈದ್ಯಕೀಯ ಶಿಬಿರಗಳು, ಆಯುರ್ವೇದ ಉತ್ಪನ್ನಗಳು ಮತ್ತು ಔಷಧಗಳಿಂದ 3,000 ಕೋಟಿ ರೂ. ಆದಾಯ ನೀರಿಕ್ಷಿಸಿದರೆ, ಇ-ಟಿಕೆಟಿಂಗ್, ಡಿಜಿಟಲ್ ಪಾವತಿಗಳು, ವೈ-ಫೈ ಸೇವೆಗಳು ಮತ್ತು ಮೊಬೈಲ್ ಚಾರ್ಜಿಂಗ್ ಸ್ಟೇಷನ್ ಗಳಂತಹ ವಲಯಗಳಿಂದ 1,000 ಕೋಟಿ ರೂ. ಆದಾಯ ನೀರಿಕ್ಷಿಸಲಾಗಿದೆ. ಜಾಹೀರಾತು ಮತ್ತು ಪ್ರಚಾರ, ಮನರಂಜನೆ ಮತ್ತು ಮಾಧ್ಯಮಗಳ ಮೂಲಕ 10,000 ಕೋಟಿ ರೂ. ಆದಾಯ ಗಳಿಸಬಹುದೆಂದು ಅಂದಾಜಿಸಲಾಗಿದೆ.
2019ರಲ್ಲಿ ನಡೆದ ಪ್ರಯಾಗ್ ರಾಜ್ ನ ಅರ್ಧ ಕುಂಭಮೇಳವು ರಾಜ್ಯಕ್ಕೆ 1.2 ಲಕ್ಷ ಕೋಟಿ ರೂ. ಆದಾಯ ತಂದುಕೊಟ್ಟಿತ್ತು. ಇದರಲ್ಲಿ 24 ಕೋಟಿ ಭಕ್ತರು ಭಾಗಿಯಾಗಿದ್ದರು.
ಮಂಗಳೂರು : ಸ್ಪೀಕರ್ ಯು.ಟಿ ಖಾದರ್ ಅವರ ಮುಂದಾಳತ್ವದಲ್ಲಿ ನಡೆದ ನರಿಂಗಾನ 3ನೇ ವರ್ಷದ “ಲವ – ಕುಶ” ಜೋಡುಕರೆ ಕಂಬಳ ಇಂದು(ಜ.13) ಬೆಳಗ್ಗೆ ಸಮಾರೋಪ ಕಂಡಿದೆ. ನರಿಂಗಾನ ಕಂಬಳದಲ್ಲಿ ದಾಖಲೆ ಸಂಖ್ಯೆ ಕೋಣಗಳು ಭಾಗವಹಿಸಿವೆ. ಒಟ್ಟು 265 ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದು ಕಂಬಳ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಸಂಖ್ಯೆಯಾಗಿದೆ. ಈ ಹಿಂದೆ ಪುತ್ತೂರು ಕಂಬಳದಲ್ಲಿ 268 ಜೊತೆ ಕೋಣಗಳು ಭಾಗವಹಿಸಿದ್ದವು.
ಕನೆಹಲಗೆ 10 ಜೊತೆ, ಅಡ್ಡಹಲಗೆ 10 ಜೊತೆ, ಹಗ್ಗ ಹಿರಿಯ 28 ಜೊತೆ, ನೇಗಿಲು ಹಿರಿಯ 28 ಜೊತೆ, ಹಗ್ಗ ಕಿರಿಯ 25 ಜೊತೆ , ನೇಗಿಲು ಕಿರಿಯ 60 ಜೊತೆ, ಸಬ್ ಜೂನಿಯರ್ ನೇಗಿಲು 104 ಜೊತೆ ಸೇರಿದಂತೆ ಒಟ್ಟು 265 ಜೋಡಿ ಕೋಣಗಳು ಭಾಗವಹಿಸಿದ್ದವು.
ಫಲಿತಾಂಶ ವಿವರ :
ಕನೆ ಹಲಗೆ : ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು : ಬೈಂದೂರು ರಾಗಿಹಿತ್ಲು ರಾಘವೇಂದ್ರ
ಕಾಂತಾವರ ಬೇಲಾಡಿ ಬಾವ ಪ್ರಜೋತ್ ಶೆಟ್ಟಿ
ಹಲಗೆ ಮುಟ್ಟಿದವರು : ತೆಕ್ಕಟ್ಟೆ ಸುಧೀರ್ ದೇವಾಡಿಗ
ಅಡ್ಡ ಹಲಗೆ :
ಪ್ರಥಮ : ನಾರಾವಿ ಯುವರಾಜ್ ಜೈನ್ “ಎ” (12.18)
ಹಲಗೆ ಮುಟ್ಟಿದವರು : ಭಟ್ಕಳ ಹರೀಶ್
ದ್ವಿತೀಯ : ಬೋಳಾರ ತ್ರಿಶಾಲ್ ಕೆ ಪೂಜಾರಿ (12.45)
ಹಲಗೆ ಮುಟ್ಟಿದವರು : ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ
ಹಗ್ಗ ಹಿರಿಯ :
ಪ್ರಥಮ : ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ “ಎ” (11.83)
ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ : ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.89)
ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ಹಗ್ಗ ಕಿರಿಯ :
ಪ್ರಥಮ : ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಎ”
ಓಡಿಸಿದವರು : ಭಟ್ಕಳ ಶಂಕರ್
ದ್ವಿತೀಯ : ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ”
ಓಡಿಸಿದವರು : ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
ನೇಗಿಲು ಹಿರಿಯ :
ಪ್ರಥಮ : ಬೋಳ್ಯಾರು ಪೊಯ್ಯೆ ನರ್ಮದ ಉಮೇಶ್ ಶೆಟ್ಟಿ (11.56)
ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ : ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ (11.87)
ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ನೇಗಿಲು ಕಿರಿಯ :
ಪ್ರಥಮ : ಭಟ್ಕಳ ಎಚ್.ಎನ್ ನಿವಾಸ ಪಿನ್ನುಪಾಲ್ (12.07)
ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ್
ದ್ವಿತೀಯ : ಮೂಡುಬಿದ್ರೆ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ (12.13)
ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ತಪತಿ ಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಯೋರ್ವ ಕಲ್ಲೆಸೆದಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಬಳಿ ನಿನ್ನೆ ಸಂಭವಿಸಿದೆ.
ಬರೋಬ್ಬರಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಇಂದಿನಿಂದ ಆರಂಭಗೊಂಡು 44 ದಿನಗಳ ಕಾಲ ನಡೆಯಲಿದೆ. ದೇಶದಾದ್ಯಂತ ಭಕ್ತರು ಈ ಒಂದು ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಂತೆ ಸೂರತ್‌ನಿಂದ ಛಾಪ್ರಾಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ತಪತಿ ಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಬಳಿ ಕಿಡಿಗೇಡಿಯೊಬ್ಬ ಕಲ್ಲೆಸೆದಿದ್ದಾನೆ.
ಘಟನೆಯಿಂದ ಕಿಟಕಿಯ ಗಾಜು ಪುಡಿಪುಡಿಯಾಗಿದ್ದು ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಜಲಗಾಂವ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಲ್ಲೆಸೆದಿರುವ ದುಷ್ಕರ್ಮಿಯ ಪತ್ತೆಗೆ ಬಲೆ ಬೀಸಿದ್ದಾರೆ. ರೈಲು ಪ್ರಯಾಣಿಕರು ತಮಗೆ ಭದ್ರತೆ ಒದಗಿಸ ಬೇಕೆಂದು ಮನವಿ ಮಾಡುವ ವಿಡಿಯೋ ವೈರಲ್ ಆಗಿದೆ.